ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿಶ್ವದ ದೊಡ್ಡ ಸುಳ್ಳುಗಾರ: ಎಚ್.ಡಿ.ರೇವಣ್ಣ ಟೀಕೆ

'ಬಿಜೆಪಿಯಿಂದ ಯಾವ ಅಭಿವೃದ್ಧಿಯೂ ಆಗಿಲ್ಲ'
Last Updated 21 ಏಪ್ರಿಲ್ 2019, 13:25 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಬಿಜೆಪಿ ಸುಳ್ಳು ಹೇಳುವ ಮೂಲಕ ಜನರನ್ನು ವಂಚಿಸುತ್ತಿದೆ. ಬಿಜೆಪಿಗೆ ಅಧಿಕಾರ ಮುಖ್ಯವೇ ಹೊರತು ದೇಶದ ಅಭಿವೃದ್ಧಿಯಲ್ಲ. ಪ್ರಧಾನಿ ನರೇಂದ್ರ ಮೋದಿ ವಿಶ್ವದ ದೊಡ್ಡ ಸುಳ್ಳುಗಾರ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಟೀಕಿಸಿದರು.

ತಾಲ್ಲೂಕಿನ ಹೆದ್ದೂರು ಸಮೀಪ ಹೊಸಳ್ಳಿಗ್ರಾಮದಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಹಿಂದೆ ಜನ ರಾಮಾ ರಾಮಾ ಅನ್ನುತ್ತಿದ್ದರು. ಈಗ ಮೋದಿ ಮೋದಿ ಅನ್ನೋ ಪರಿಸ್ಥಿತಿ ಬಂದಿದೆ. ದೇಶದ ತುಂಬ ಮೋದಿ ಮೋದಿ ಅಂತಾರೆ ಆದರೆ, ಮೋದಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದಕ್ಕೆ ಜನರ ಬಳಿ ಉತ್ತರವಿಲ್ಲ’ ಎಂದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ₹45 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಎಚ್.ಡಿ. ದೇವೇಗೌಡರು ಪ್ರಧಾನಿ ಆಗಿದ್ದಾಗ ಬಡವರಿಗೆ ₹2ಕ್ಕೆ ಅಕ್ಕಿ ನೀಡುವ ಕಾರ್ಯಕ್ರಮವನ್ನು ಕೊಟ್ಟಿದ್ದರು. ಬಿಜೆಪಿ ರೈತರಿಗೆ ಏನು ಮಾಡಿದೆ ಎಂದು ರೇವಣ್ಣ ಪ್ರಶ್ನಿಸಿದರು.

ಆಗುಂಬೆ ಸಮೀಪ ಹೊನ್ನೇತಾಳು ಗ್ರಾಮದಲ್ಲಿ ಶಾಲಾ ಬಾಲಕಿ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ಜನರ ಓಡಾಟಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ 1,500 ಕಾಲು ಸಂಕವನ್ನು ನಿರ್ಮಿಸಲು ₹250 ಕೋಟಿ ಹಣವನ್ನು ನೀಡಲಾಗಿದೆ. ಈಗಾಗಲೇ ಅಗತ್ಯವಿರುವಲ್ಲಿ ಕಾಲುಸಂಕಗಳ ನಿರ್ಮಾಣ ಆಗಿದೆ ಎಂದರು.

ರಸ್ತೆ, ಮೋರಿ, ಸೇತುವೆ ಸೇರಿ ಜನರ ಅಗತ್ಯಗಳಿಗೆ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಸ್ಪಂದಿಸುತ್ತಿದೆ. ಅಭಿವೃದ್ಧಿ ಮರೆತು ಆಡಳಿತ ಮಾಡುತ್ತಿಲ್ಲ. ಹೊಸಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ ಕಳೆದ ವರ್ಷ ಬೇಡಿಕೆ ಇಟ್ಟಿದ್ದರು. ಈಗ ರಸ್ತೆ ನಿರ್ಮಾಣ ಮಾಡಲಾಗಿದೆ. ಜನರ ಅಗತ್ಯಗಳನ್ನು ಪೂರೈಸುವ ಸರ್ಕಾರ ಯಾವತ್ತೂ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಸುಳ್ಳು ಹೇಳಿ ಜನರನ್ನು ವಂಚಿಸುವ ಕೆಲಸವನ್ನು ಮಾಡುವ ಬಿಜೆಪಿಗೆ ಈ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ರೇವಣ್ಣ ಹೇಳಿದರು.

ಮಲೆನಾಡು ಪ್ರದೆಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಂ.ರಾಜೇಗೌಡ, ‘ಧರ್ಮ, ಜಾತಿ ನಡುವೆ ವಿಷ ಬೀಜ ಬಿತ್ತಿ ಅಧಿಕಾರ ಪಡೆಯುವ ಬಿಜೆಪಿ ನಿಲುವು ಅಪಾಯಕಾರಿ. 2014ರಲ್ಲಿ ಗುಜರಾತ್ ಮಾದರಿ, ಅಚ್ಛೇದಿನ್, ಬೆಲೆ ಇಳಿಕೆ ಮುಂತಾದ ವಿಷಯಗಳನ್ನು ಮುಂದಿಟ್ಟು ಅಧಿಕಾರ ಪಡೆದ ಬಿಜೆಪಿ ಜನರಿಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಲಿಲ್ಲ ಎಂದರು.

ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ, ‘ಮುಖ ಇರುವವರು ಹಾಗೂ ಮುಖವಾಡ ಹಾಕಿಕೊಂಡವರ ನಡುವೆ ಚುನಾವಣೆ ನಡೆಯುತ್ತಿದೆ. ಬಿಜೆಪಿಯವರು ಮುಖವಾಡ ತೊಟ್ಟವರಿಗೆ ಓಟು ಕೊಡಿ ಎನ್ನುತ್ತಾರೆ. ಮುಖವಾಡ ತೊಟ್ಟವರಿಗೆ ಓಟು ನೀಡಬೇಕೇ ಎಂಬುದನ್ನು ಜನರು ಯೋಚಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್. ಎಂ. ಮಂಜುನಾಥಗೌಡ ಮಾತನಾಡಿದರು. ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯ ಜಿ.ಎಸ್. ನಾರಾಯಣರಾವ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನವಮಣಿ, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರ್ ಮಂಜುನಾಥ್, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಲ್. ಸುಂದರೇಶ್, ಮುಖಂಡರಾದ ಕಟ್ಟೆಹಕ್ಕಲು ಕಿರಣ್, ಶಚ್ಚೀಂದ್ರ ಹೆಗ್ಡೆ, ವಾದಿರಾಜ್, ಸುಷ್ಮಾ ಸಂಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT