ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ತೂರು: ನೀರಿನ ಬಿಲ್‌ ವಸೂಲಿ ಯಶಸ್ವಿ

ಖಾಸಗಿ ಸಂಸ್ಥೆಗೆ ನೀರಿನ ಶುಲ್ಕವಸೂಲಿ ಜವಾಬ್ದಾರಿ
Last Updated 28 ಏಪ್ರಿಲ್ 2018, 12:44 IST
ಅಕ್ಷರ ಗಾತ್ರ

‌‌‌ಪುತ್ತೂರು :  ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಬಿಲ್ ಸಂಗ್ರಹದ ಜವಾಬ್ದಾರಿಯನ್ನು ಖಾಸಗಿ ‌ ‘ಪ್ರಸನ್ನ ಟೆಕ್ನಾಲಜಿಸ್‌’ ಸಂಸ್ಥೆಗೆ ವಹಿಸಿಕೊಡಲಾಗಿದ್ದು, ಇದೀಗ ನಿರೀಕ್ಷೆಗಿಂತ ಹೆಚ್ಚಿನ ಆದಾಯ ನಗರಸಭೆಗೆ ಬರಲಾರಂಭಿಸುವ ಮೂಲಕ ನಗರ ಸಭೆಯ ಮಾರ್ಗೋಪಾಯ ಫಲಪ್ರದವಾಗಿದೆ.

ಕುಡಿಯುವ ನೀರಿನ ಬಿಲ್ ಬಾಕಿ, ವಸೂಲಿ ವೈಫಲ್ಯದ ಬಗ್ಗೆ  ಪದೇ ಪದೇ ಚರ್ಚೆ ಆಗುತ್ತಿತ್ತು. ಸಿಬ್ಬಂದಿ ಕೊರತೆಯೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿತ್ತು. ಆದರೆ ಈ ಸಮಸ್ಯೆಗೆ ಪರಿಹಾರ ಒದಗಿಸುವ ಸಲುವಾಗಿನಗರ ಸಭೆ ಆಡಳಿತ ಕ್ರಮಕೈಗೊಂಡಿತ್ತು.

ವಸತಿ ಪ್ರದೇಶಗಳ ಮನೆಗಳಿಗೆ ₹ 90, ವಾಣಿಜ್ಯ ಉದ್ದೇಶಗಳಿಗೆ ₹ 500 ಮತ್ತು ಇತರ ಉದ್ದೇಶಗಳಿಗೆ ₹225 ಮಾಸಿಕ ನೀರಿನ ಕರ ವಿಧಿಸಲಾಗಿದ್ದು, ಮನೆಯೊಂದಕ್ಕೆ ₹15 ಕಮಿಷನ್ ಪಡೆದು ಬಿಲ್ ಸಂಗ್ರಹಿಸುವ ಜವಾಬ್ದಾರಿಯನ್ನು ಈ ಖಾಸಗಿ ಸಂಸ್ಥೆಗೆ ನೀಡಲಾಗಿದೆ.ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 10,200 ನೀರಿನ ಸಂಪರ್ಕವಿದ್ದು, ಇದರಿಂದ ₹2.15 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಪ್ರಸ್ತುತ ದಿನವೊಂದಕ್ಕೆ ಕನಿಷ್ಠ ₹1 ಲಕ್ಷ ಸಂಗ್ರಹಿಸುವ ಮೂಲಕ ವಾರ್ಷಿಕವಾಗಿ ₹1.85 ಕೋಟಿ ಸಂಗ್ರಹಿಸುವಲ್ಲಿ ಯಶಸ್ವಿ ಆಗಿದೆ. ‌

ಬೇಸಿಗೆ ಆರಂಭವಾದರೆ ಸಾಕು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಸದಾ ಕುಡಿಯುವ ನೀರಿಗಾಗಿ 'ಕೂಗು' ಎಲ್ಲೆಡೆಯಿಂದ ಕೇಳಿಬರುತ್ತಿತ್ತು, ಆದರೆ ಈ ಬಾರಿ ಪೆರಿಯತ್ತೋಡಿ ಪ್ರದೇಶ ಹೊರತು ಪಡಿಸಿ ಯಾವ ಭಾಗದಲ್ಲೂ ನೀರಿನ ಕೊರತೆಯಾಗದಂತೆ ನಗರಸಭಾ ಕ್ರಮ ಕೈಗೊಂಡಿದೆ. ನೆಕ್ಕಿಲಾಡಿ ಕಿಂಡಿ ಅಣೆಕಟ್ಟು ಹಾಗೂ 144ರಷ್ಟು ಕೊಳವೆಬಾವಿಗಳನ್ನು ಕುಡಿಯುವ ನೀರಿಗಾಗಿ ನಂಬಿಕೊಂಡಿರುವ ಪುತ್ತೂರು ನಗರಸಭಾ ವ್ಯಾಪ್ತಿಯ ಜನತೆಗೆ ಈ ಬಾರಿ ವರುಣನ ಕೃಪೆಯಿಂದ ನೀರಿನ ಕೊರತೆ ಕಂಡು ಬಂದಿಲ್ಲ.

ಇಲ್ಲಿನ ಜನತೆಗೆ ಬೇಕಾದ ಶೇಕಡ 90ರಷ್ಟು ನೀರು ನೆಕ್ಕಿಲಾಡಿ ಅಣೆಕಟ್ಟೆಯಿಂದ ಬರುತ್ತಿದ್ದು, ಉಳಿದ ನೀರನ್ನು ಕೊಳವೆಬಾವಿಗಳಿಂದ ಪೂರೈಸುವ ಕೆಲಸ ಮಾಡಲಾಗುತ್ತಿದೆ.  ಇದರೊಂದಿಗೆ ನಗರೋತ್ಥಾನ ಕಾಮಗಾರಿ ನಡೆಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಕೆರೆಮೂಲೆ ಎಂಬಲ್ಲಿ ಕುಡಿಯುವ ನೀರು ಪೈಪು ಲೈನ್ ಒಡೆದು ಸಮಸ್ಯೆಯಾಗಿದ್ದರೂ ಅದನ್ನು ತಕ್ಷಣ ಸರಿಪಡಿಸುವ ಕೆಲಸ ನಡೆದಿದೆ.

ಕಳೆದ ಕೆಲವು ವರ್ಷಗಳಿಂದ ನಗರಸಭೆಯ ವಿಸ್ತರಿತ ಪ್ರದೇಶಗಳಾದ ಸಾಮೆತ್ತಡ್ಕ, ಮಚ್ಚಿಮಲೆ, ಪರ್ಲಡ್ಕ, ಗೋಳಿಕಟ್ಟೆ, ಪೆರಿಯತ್ತೋಡಿ ಸೇರಿದಂತೆ ಎತ್ತರದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಜನತೆಯನ್ನು ಕಾಡುತ್ತಿತ್ತು. ಕಳೆದ ವರ್ಷವೂ ಬೇಸಿಗೆ ಅಂತಿಮ ದಿನಗಳಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 3 ಟ್ಯಾಂಕರ್‌ಗಳನ್ನು ಗುತ್ತಿಗೆ ಪಡೆದು ದಿನಂಪ್ರತಿ 6 ಟ್ರಿಪ್‌ಗಳಂತೆ ಸಮಸ್ಯೆಗಳಿದ್ದ ವಿಸ್ತರಿತ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗಿತ್ತು.

  ಈ ಬಾರಿ ನೀರಿನ ಪೂರೈಕೆಗಾಗಿ ಯೋಜನಗಳನ್ನು ಸಪರ್ಮಕವಾಗಿ ಅಳವಡಿಸಿರುವ ಹಿನ್ನಲೆಯಲ್ಲಿ ಜನತೆಗೆ ನೀರಿನ ಕೊರತೆ ಕಾಣದಂತಾಗಿದೆ. ಈ ನಡುವೆಯೂ 22 ಹೊಸ ಕೊಳವೆಬಾವಿ ನಿರ್ಮಾಣ ಹಾಗೂ ತಕ್ಷಣದ ವ್ಯತ್ಯಯಕ್ಕಾಗಿ ಒಂದು ಟ್ಯಾಂಕರ್ ಬಳಕೆಗಾಗಿ ವ್ಯವಸ್ಥೆಮಾಡಲಾಗಿದೆ.

80ಲಕ್ಷ ಲೀಟರ್‌ ಅಗತ್ಯ

27 ವಾರ್ಡ್‌ಗಳಲ್ಲಿ 57,500 ಜನಸಂಖ್ಯೆ ಕುಡಿಯುವ ನೀರಿಗಾಗಿ ನಗರಸಭೆಯನ್ನೇ ನಂಬಿಕೊಂಡಿದ್ದಾರೆ. ಇದರೊಂದಿಗೆ 34 ಶಿಕ್ಷಣ ಸಂಸ್ಥೆಗಳು, ಅಂಗನವಾಡಿಗಳಿಗೂ ಇದೇ ನೀರು ಸರಬರಾಜುಗೊಳ್ಳುತ್ತಿದೆ. ಪ್ರತಿದಿನ 80 ಲಕ್ಷ ಲೀಟರ್‌ ನೀರಿನ ಅವಶ್ಯಕತೆ ಇಲ್ಲಿದ್ದು, 75.5 ಲಕ್ಷ ಲೀಟರ್‌ ನೀರು ನೆಕ್ಕಿಲಾಡಿ ಅಣೆಕಟ್ಟನಿಂದ ಪುತ್ತೂರಿಗೆ ಹರಿದು ಬರುತ್ತಿದ್ದು, ಕೊರತೆಯ ನೀರನ್ನು ಬೋರ್‌ವೆಲ್ ಗಳಿಂದ ಪಡೆಯಲಾಗುತ್ತಿದೆ.

**
ಈ ಬಾರಿ ನೀರಿನ ಸಮಸ್ಯೆ ಎದುರಾಗುವುದಿಲ್ಲ. ನೆಕ್ಕಿಲಾಡಿ ಡ್ಯಾಂನಲ್ಲೂ 630 ದಶಲಕ್ಷ ಲಟರ್‌ ನೀರಿನ ಸಂಗ್ರಹ ಉತ್ತಮವಿದೆ. ಪೈಪ್ ಒಡೆಯುವುದು ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳು ಗಮನಕ್ಕೆ ಬಂದಲ್ಲಿ ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ
– ರೂಪಾ ಟಿ. ಶೆಟ್ಟಿ, ಪೌರಾಯುಕ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT