ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಚಿನ್ನದ ವ್ಯಾಪಾರಿಯ ₹ 1 ಕೋಟಿ ನಗದು ದರೋಡೆ

‘ಫುಡ್‌ ಡಿಲಿವರಿ ಬಾಯ್‌’ ಮೇಲೆ ತೀವ್ರತರವಾದ ಹಲ್ಲೆ
Last Updated 19 ಮಾರ್ಚ್ 2021, 5:59 IST
ಅಕ್ಷರ ಗಾತ್ರ

ಹುಣಸೂರು: ಬೆಂಗಳೂರಿನಿಂದ ಕೇರಳಕ್ಕೆ ತೆರಳುತ್ತಿದ್ದ ಚಿನ್ನದ ವ್ಯಾಪಾರಿ ಸುರಾಜ್ ಎಂಬುವವರನ್ನು ತಾಲ್ಲೂಕಿನ ಚಿಲ್ಕುಂದ ಗ್ರಾಮದ ಬಳಿ ಅಡ್ಡಗಟ್ಟಿದ ಐವರು ದರೋಡೆಕೋರರು, ₹ 1 ಕೋಟಿ ನಗದನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಕೇರಳದ ಸಪ್ನಾ ಆಭರಣ ಅಂಗಡಿ ಮಾಲೀಕ ಆಗಿರುವ ಸುರಾಜ್ ಹಾಗೂ ಇವರ ಸ್ನೇಹಿತರು, ಬೆಂಗಳೂರಿನಿಂದ ₹ 1 ಕೋಟಿ ನಗದನ್ನು ತೆಗೆದುಕೊಂಡು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬುಧವಾರ ನಸುಕಿನಲ್ಲಿ ಚಿಲ್ಕುಂದ ಗ್ರಾಮದ ಬಳಿ ಎರಡು ಕಾರಿನಲ್ಲಿ ಬಂದ ದರೋಡೆಕೋರರು ಅವರನ್ನು ಅಡ್ಡಗಟ್ಟಿದ್ದಾರೆ. ಕಾರಿನಿಂದ ಹೊರದಬ್ಬಿ, ಹಲ್ಲೆ ನಡೆಸಿ, ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುರುವಾರ ‍ಪ್ರಕರಣ ದಾಖಲಾಗಿದೆ.

‘₹ 1 ಕೋಟಿ ಹಣದ ಮೂಲದ ಕುರಿತು ಇನ್ನೂ ಖಚಿತತೆ ಸಿಕ್ಕಿಲ್ಲ. ಪ್ರಕರಣದ ಎಲ್ಲ ಆಯಾಮಗಳನ್ನು ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

₹ 3 ಲಕ್ಷ ನಗದು ಕಳವು
ಹುಣಸೂರು:
ನಗರದ ಅಲಂಕಾರ್ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಹಲವು ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ ಮಾರುತಿ ಬಡಾವಣೆ ನಿವಾಸಿ ಆದರ್ಶ್ ಎಂಬಾತ ಮಾಲೀಕರು ಬ್ಯಾಂಕಿಗೆ ಹಣ ಸಂದಾಯ ಮಾಡಲು ನೀಡಿದ್ದ ₹ 3 ಲಕ್ಷ ನಗದಿನೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಫುಡ್‌ ಡಿಲಿವರಿ ಬಾಯ್‌’ ಮೇಲೆ ತೀವ್ರ ಹಲ್ಲೆ
ಮೈಸೂರು:
ಇಲ್ಲಿನ ಆಹಾರ ಸರಬರಾಜು ಕಂಪನಿಯೊಂದರಲ್ಲಿ ‘ಫುಡ್ ಡಿಲಿವರಿ ಬಾಯ್’ ಆಗಿ ಕಾರ್ಯನಿರ್ವಹಿಸುತ್ತಿದ್ದ ರವಿಕುಮಾರ್ ಎಂಬುವವರ ಮೇಲೆ ಬುಧವಾರ ರಾತ್ರಿ ಬನ್ನಿಮಂಟಪದಲ್ಲಿ ಅಪರಿಚಿತರು ತೀವ್ರತರವಾಗಿ ಹಲ್ಲೆ ನಡೆಸಿದ್ದಾರೆ.

ದ್ವಿಚಕ್ರ ವಾಹನದಲ್ಲಿ ಇವರು ರಾತ್ರಿ 10 ಗಂಟೆ ಸಮಯದಲ್ಲಿ ಮನೆಯೊಂದಕ್ಕೆ ಆಹಾರ ನೀಡಿ, ವಾಪಸ್ ಬರುತ್ತಿರುವಾಗ ಹೈವೇ ವೃತ್ತದ ಸಮೀಪ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಇವರನ್ನು ಅಡ್ಡಗಟ್ಟಿದ್ದಾರೆ. ತಲೆಯ ಹಿಂಭಾಗಕ್ಕೆ ಬಲವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಪ್ರಜ್ಞೆ ತಪ್ಪಿ ಬಿದ್ದ ಇವರನ್ನು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಹಲ್ಲೆ ನಡೆಸಿದವರು ಯಾರು ಎಂಬುದು ಇದುವರೆಗೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT