ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಪ್ರಕರಣ; ನಾಲ್ವರ ಸಾವು

ಎಟಿಎಂ ಕಳ್ಳತನಕ್ಕೆ ಯತ್ನ, ಒಬ್ಬರ ಸಾವು ನಿಗೂಢ
Last Updated 14 ಏಪ್ರಿಲ್ 2019, 16:54 IST
ಅಕ್ಷರ ಗಾತ್ರ

ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಭಾನುವಾರ ಒಟ್ಟು ನಾಲ್ವರು ನಗರದಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ ಇಬ್ಬರ ಗುರುತು ಪತ್ತೆಯಾಗಿದ್ದರೆ, ಮತ್ತಿಬ್ಬರ ಗುರುತು ಪತ್ತೆಯಾಗಿಲ್ಲ.

ಗಾಯತ್ರಿಪುರಂ ನಿವಾಸಿ ಇಬ್ರಾಹಿಂ (58) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಪತ್ನಿ ಮಕ್ಕಳು ಇದ್ದಾರೆ. ಆದರೆ, ಜೀವನದಲ್ಲಿ ಮನನೊಂದು ವಿಷ ಸೇವಿಸಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ನಜರ್‌ಬಾದ್ ಠಾಣೆಯಲ್ಲಿ ದಾಖಲಾಗಿದೆ.

ಇಲ್ಲಿನ ಕುವೆಂಪುನಗರದ ನವಿಲು ರಸ್ತೆಯ ನಿವಾಸಿ ಪಾಪೇಗೌಡ (54) ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಂಪ್ಯೂಟರ್‌ ಮುಂದೆ ಕುಳಿತ ಭಂಗಿಯಲ್ಲೇ ಮೃತಪಟ್ಟಿದ್ದಾರೆ.

ಇವರು ಕೊಳ್ಳೇಗಾಲದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸೇರಿದ ಉಗ್ರಾಣವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮನೆಯವರೆಲ್ಲ ಕಾರ್ಯನಿಮಿತ್ತ ಬೇರೆ ಊರಿಗೆ ಹೋಗಿದ್ದರು. ಈ ವೇಳೆ ಇವರು ಮನೆಯಲ್ಲಿ ಒಳಗಿನಿಂದ ಚಿಲಕ ಹಾಕಿಕೊಂಡು ಕಂಪ್ಯೂಟರ್ ಮುಂದೆ ಕುಳಿತಿದ್ದರು. ಆದರೆ, ಮನೆಯವರು ಬಂದು ನೋಡಿದಾಗ ಕುಳಿತ ಭಂಗಿಯಲ್ಲೇ ಮೃತಪಟ್ಟಿದ್ದರು. ವಿದ್ಯುತ್ ಶಾಕ್ ತಗುಲಿ, ಹೃದಯಾಘಾತ ಅಥವಾ ವಿಷ ಸೇವಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರ ತಿಳಿಸಿದ್ದಾರೆ.‌ ‍‍ಪ್ರಕರಣ ಕುವೆಂಪುನಗರ ಠಾಣೆಯಲ್ಲಿ ದಾಖಲಾಗಿದೆ.

ಗುರುತು ಸಿಗದ ಮೃತದೇಹಗಳ ಪತ್ತೆ
ಇಲ್ಲಿನ ಕೆಆರ್‌ಎಸ್‌ ರಸ್ತೆಯಲ್ಲಿನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಎದುರಿನ ಬಸ್‌ನಿಲ್ದಾಣದಲ್ಲಿ ಅಂದಾಜು 60ರಿಂದ 65 ವರ್ಷ ವಯಸ್ಸಿನ ಪುರುಷ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, 5 ಅಡಿ ಎತ್ತರ, ಕುರುಚಲು ಬಿಳಿ ಗಡ್ಡ, ಬಿಳಿ ತಲೆಕೂದಲು ಹೊಂದಿದ್ದಾರೆ. ಕಪ್ಪುಬಣ್ಣದ ಪ್ಯಾಂಟು, ಕಾಫಿ ಬಣ್ಣದ ಗೆರೆಯುಳ್ಳ ಶರ್ಟು, ಹಸಿರು ಕಪ್ಪು ಮಿಶ್ರಿತ ಬಣ್ಣದ ಟಿ ಶರ್ಟ್‌ನ್ನು ಇವರು ಧರಿಸಿದ್ದಾರೆ. ಇವರ ಬಲತೋಳಿನಲ್ಲಿ ರಂಗಮ್ಮ, ಬೋರಮ್ಮ ಎಂದು ಎಡತೋಳಿನಲ್ಲಿ ಶಾಂತಮ್ಮ, ಮೂರ್ತಿ, ರಾಮ ಎಂಬ ಹಚ್ಚೆಯ ಗುರುತಿದೆ. ಗುರುತು ಪತ್ತೆಯಾದವರು ದೂ: 0821– 2418314 ಸಂಪರ್ಕಿಸಲು ವಿ.ವಿ.ಪುರಂ ಠಾಣೆಯ ಪೊಲೀಸರು ಕೋರಿದ್ದಾರೆ.

ಇಲ್ಲಿನ ಕೈಲಾಸಪುರಂನ 1ನೇ ಕ್ರಾಸ್‌ನಲ್ಲಿ 60ರಿಂದ 65 ವರ್ಷ ವಯಸ್ಸಿನ ಪುರುಷ ವ್ಯಕ್ತಿಯ ಮೃತದೇಹವೊಂದು ದೊರಕಿದೆ. ಇವರು 5.4 ಅಡಿ ಎತ್ತರವಿದ್ದು, ಕೋಲು ಮುಖ, ಕಪ್ಪು ಮೈಬಣ್ಣ, ಬಿಳಿಗಡ್ಡ ಮೀಸೆ ಇದೆ. ಇವರು ಕ್ರೀಮ್‌ ಕಲರ್‌ನ ಅರ್ಧ ತೋಳಿನ ಶರ್ಟು ಮತ್ತು ಕಪ್ಪು ಬಣ್ಣದ ಒಂದು ಪ್ಯಾಂಟ್ ಧರಿಸಿದ್ದಾರೆ. ಇವರ ಎರಡೂ ಕಾಲುಗಳ ಪಾದದ ಬಳಿ ಬಿಳಿ ಮಚ್ಚೆಗಳಿವೆ. ಗುರುತು ಪತ್ತೆಯಾದವರು ದೂ: 0821– 2418339 ಸಂಪರ್ಕಿಸಬಹುದು ಎಂದು ಮಂಡಿ ಠಾಣೆ ಪೊಲೀಸರು ಕೋರಿದ್ದಾರೆ.‌

ಮುಂದುವರಿದ ಸರಗಳ್ಳತನ
ನಗರದಲ್ಲಿ ಸರಗಳ್ಳತನ ಮುಂದುವರಿದಿದೆ. ಶ್ರೀರಾಂಪುರದ ದೊಡ್ಡ ಮೋರಿಯ ಸಮೀಪ ಶನಿವಾರ ಸಂಜೆ 4.30ರ ಸಮಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಂಬುಜಾಕ್ಷಿ (63) ಎಂಬುವವರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಸರಗಳ್ಳನೊಬ್ಬ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಪ್ರಕರಣ ಕುವೆಂಪುನಗರ ಠಾಣೆಯಲ್ಲಿ ದಾಖಲಾಗಿದೆ.

ಎಟಿಎಂ ಕಳ್ಳತನಕ್ಕೆ ಯತ್ನ
ಇಲ್ಲಿನ ಜಯಪುರದ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನ್ನು ಕಳ್ಳತನ ಮಾಡಲು ಕಳ್ಳರು ಯತ್ನಿಸಿದ್ದಾರೆ. ಎಟಿಎಂ ಯಂತ್ರದ ಮೇಲ್ಭಾಗಕ್ಕೆ ಧಕ್ಕೆಯಾಗಿದೆ. ಭಾನುವಾರ ಇದನ್ನು ಗಮನಿಸಿದ ಗ್ರಾಹಕರೊಬ್ಬರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಎಟಿಎಂನಲ್ಲಿ ಭದ್ರತಾ ಸಿಬ್ಬಂದಿ ಕಳೆದ 6 ತಿಂಗಳುಗಳಿಂದ ಇರಲಿಲ್ಲ. ಜತೆಗೆ, ಸಿಸಿಟಿವಿ ಸಹ ಚಾಲೂ ಸ್ಥಿತಿಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಕ್ಕಳ ರಕ್ಷಣೆಗೆ ಮನವಿ
ಮೈಸೂರು ಮಕ್ಕಳ ಸಹಾಯವಾಣಿಯ ಅಧಿಕಾರಿಗಳು ಇಲ್ಲಿನ ಲಷ್ಕರ್ ಠಾಣೆಗೆ ಭಾನುವಾರ ಭೇಟಿ ನೀಡಿ ಮಕ್ಕಳ ರಕ್ಷಣೆಯ ಸಂಬಂಧ ಇನ್‌ಸ್ಪೆಕ್ಟರ್‌ ಮುನಿಯಪ್ಪ ಅವರೊಂದಿಗೆ ಚರ್ಚೆ ನಡೆಸಿದರು.

ಕಾಣೆಯಾದ ಮಕ್ಕಳು, ಬಾಲಕಾರ್ಮಿಕರು, ಬಿಕ್ಷಾಟನೆ, ಮಾದಕ ವಸ್ತುಗಳ ವ್ಯಸನಿ ಮಕ್ಕಳು, ಕಷ್ಟದಲ್ಲಿರುವ ಬೀದಿ ಮಕ್ಕಳು, ಅಂಗವಿಕಲ ಮಕ್ಕಳು, ವಲಸೆ ಮಕ್ಕಳು, ಮಕ್ಕಳ ಮಾರಾಟ, ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಅವರು ಕೋರಿದ್ದಾರೆ.‌

ಮಾಹಿತಿ ನೀಡಬೇಕಾದ ಸಂಖ್ಯೆ 1098. ಇದು ಉಚಿತ ದೂರವಾಣಿ ಕರೆಯಾಗಿದ್ದು, ಹಗಲು ಮತ್ತು ರಾತ್ರಿ ಸೇವೆಯಲ್ಲಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಣ್ಣದಕೇರಿಯಲ್ಲಿ ಜೂಜಾಟ; 11 ಮಂದಿ ಬಂಧನ
ಇಲ್ಲಿನ ಸುಣ್ಣದಕೇರಿಯಲ್ಲಿ ಶನಿವಾರ ರಾತ್ರಿ ಜೂಜಾಟ ಆಡುತ್ತಿದ್ದ 11 ಮಂದಿಯನ್ನು ಬಂಧಿಸಿರುವ ಪೊಲೀಸರು ₹ 51,190 ಹಣವನ್ನು ವಶಪಡಿಸಿಕೊಂಡಿದ್ದಾರೆ.

ಕೆ.ಆರ್.ಠಾಣೆಯ ಇನ್‌ಸ್ಪೆಕ್ಟರ್ ನಾರಾಯಣಸ್ವಾಮಿ, ಸಬ್‌ಇನ್‌ಸ್ಪೆಕ್ಟರ್ ಸುನಿಲ್, ಸಿಬ್ಬಂದಿ ವಿಷಕಂಠ, ರವಿ, ರಮೇಶ್, ಸೋಮಣ್ಣ, ಲಿಂಗರಾಜು, ಮಹದೇವನಾಯಕ ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT