ಭಾನುವಾರ, ಜನವರಿ 19, 2020
29 °C
ಮಂಡಿ ಪೊಲೀಸರಿಂದ 6 ಸುಲಿಗೆಕೋರರ ಬಂಧನ: ₹ 5.68 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಐವರು ದರೋಡೆಕೋರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸುಲಿಗೆ, ದರೋಡೆ ಮಾಡುತ್ತಿದ್ದ ಇಬ್ಬರು ಬಾಲಾಪರಾಧಿ ಸೇರಿದಂತೆ ಐವರು ದರೋಡೆಕೋರರನ್ನು ನಂಜನಗೂಡು ಪೊಲೀಸರು ಶನಿವಾರ ನಸುಕಿನಲ್ಲಿ ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು.

ವರುಣ (19), ಸೈಯದ್ ಆಯಾಜ್ (19), ಜಯಂತ್ (19) ಹಾಗೂ ಇಬ್ಬರು ಅಪ್ರಾಪ್ತರು ಬಂಧಿತರು ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಂಜನಗೂಡಿನ ಹಳ್ಳದಕೇರಿ, ಬಿಳಿಗೆರೆ, ಮಲ್ಲುಪುರ, ನಂಜನಗೂಡು ಪಟ್ಟಣದ ಸುತ್ತಲಿನ ಕೈಗಾರಿಕಾ ಪ್ರದೇಶ, ನೆರೆಯ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಸಂತೇಮರಳ್ಳಿ ಸೇರಿದಂತೆ ಮೈಸೂರು ನಗರದ ರಿಂಗ್ ರಸ್ತೆ ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಈ ತಂಡ ಡಕಾಯಿತಿ ನಡೆಸಿದೆ ಎಂದು ಹೇಳಿದರು.

ಬಂಧಿತರಿಂದ 10 ಮೊಬೈಲ್‌, ₹ 18,000 ನಗದು, ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್, ಎರಡು ಚಾಕು ವಶಕ್ಕೆ ಪಡೆಯಲಾಗಿದ್ದು, ಬಾಲಾಪರಾಧಿಗಳನ್ನು ಬಾಲಮಂದಿರಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ನಂಜನಗೂಡು ಡಿವೈಎಸ್‌ಪಿ ಪ್ರಭಾಕರರಾವ್ ಸಿಂಧೆ, ಸಿಪಿಐ ಎಂ.ಸಿ.ರಾಜಶೇಖರ್, ಪಿಎಸ್‌ಐ ಸತೀಶ್, ಸುರೇಂದ್ರ, ಯಾಸ್ಮೀನ್ ತಾಜ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಿ.ವಿ.ಸ್ನೇಹಾ ಪತ್ರಿಕಾಗೋಷ್ಠಿಯಲ್ಲಿದ್ದರು.

ಸುಲಿಗೆಕೋರರ ಬಂಧನ

ಸುಲಿಗೆಗೆ ಹೊಂಚು ಹಾಕುತ್ತಿದ್ದ ಆರು ಮಂದಿ ಸುಲಿಗೆಕೋರರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದು, ₹ 5.68 ಲಕ್ಷ ಮೌಲ್ಯದ ಚಿನ್ನಾಭರಣ, ಬೈಕ್ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕುಂಬಾರಕೊಪ್ಪಲಿನ ಮಂಜುನಾಥ್‌(23), ಮಹದೇಶ್ವರ ಬಡಾವಣೆಯ ಮಂಜು(50), ಕೆ.ಆರ್.ಮೊಹಲ್ಲಾದ ಶ್ರೀಧರ್‌(35), ಬನ್ನೂರಿನ ಇಮ್ರಾನ್ ಪಾಷ(38), ಮೇಟಗಳ್ಳಿಯ ನಾರಾಯಣ(45), ಸರಸ್ವತಿಪುರಂನ ಪುಟ್ಟರಾಜು(45) ಬಂಧಿತರಾಗಿದ್ದು, ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಧ್ಯರಾತ್ರಿ ಹೈವೇ ಸರ್ಕಲ್‌ನಿಂದ ಜಾವಾ ಫ್ಯಾಕ್ಟರಿ ಕಡೆಗೆ ಹೋಗುವ ರಸ್ತೆಯಲ್ಲಿರುವ ಹಂದಿ ಹಳ್ಳದ ಸರ್ಕಲ್ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಸುಲಿಗೆ ಮಾಡಲು ಹೊಂಚು ಹಾಕಿದ್ದ ತಂಡವನ್ನು ಬಂಧಿಸಿದ್ದಾರೆ.

ತನಿಖಾ ವಿಚಾರಣೆಯಲ್ಲಿ ಬನ್ನೂರು ಮತ್ತು ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸುಲಿಗೆ ಮಾಡಿದ್ದು, ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕೊಂದನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳಿಂದ ₹ 5,68,750 ಮೌಲ್ಯದ 117 ಗ್ರಾಂ ಚಿನ್ನಾಭರಣ, ಒಂದು ಬೈಕ್ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಡಿ ಪೊಲೀಸರು ತಿಳಿಸಿದ್ದಾರೆ.

₹ 80 ಲಕ್ಷ ಮೌಲ್ಯದ ರಕ್ತಚಂದನ ವಶ

ಮೈಸೂರು: ರಕ್ತ ಚಂದನ ಮರದ ತುಂಡುಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಲಷ್ಕರ್ ಮೊಹಲ್ಲಾದ ಪುಲಕೇಶಿ ರಸ್ತೆ ನಿವಾಸಿ ಫೈರೋಜ್ ಅಲಿಖಾನ್(32) ಬಂಧಿತ.

ಈತನಿಂದ ₹ 80 ಲಕ್ಷ ಮೌಲ್ಯದ 750 ಕೆ.ಜಿ. ತೂಕದ ರಕ್ತ ಚಂದನದ 80 ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮಂಡಿ ಮೊಹಲ್ಲಾದಲ್ಲಿರುವ ಫೈರೋಜ್ ಅಲಿಖಾನ್ ಮನೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಕ್ವಾಲಿಸ್‌ನಲ್ಲಿಟ್ಟಿದ್ದ ಮರವನ್ನು ವಶಕ್ಕೆ ಪಡೆದು, ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ರಕ್ತ ಚಂದನದ ಮರಗಳನ್ನು ಅಕ್ರಮವಾಗಿ ಖರೀದಿಸಿ ಗೌಪ್ಯವಾಗಿಟ್ಟು, ಹಡಗಿನ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಮಾರಾಟ ಮಾಡುವ ಸಂಚನ್ನು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಫರ್ನೀಚರ್‌ ಶಾಪ್‌ಗೆ ದಂಡ

ಮೈಸೂರು: ಕಳಪೆ ಗುಣಮಟ್ಟದ ಸೋಫಾಸೆಟ್‌ ನೀಡಿದ ನಗರದ ಕಾಳಿದಾಸ ರಸ್ತೆಯ ಪ್ರತಿಷ್ಠಿತ ಫರ್ನೀಚರ್ ಶಾಪ್‌ಗೆ ಮೈಸೂರು ಜಿಲ್ಲಾ ಗ್ರಾಹಕರ ನ್ಯಾಯಾಲಯ ದಂಡ ವಿಧಿಸಿದೆ.

ನಗರದ ನಿವಾಸಿ ಸಾಫ್ಟ್‌ವೇರ್‌ ಎಂಜಿನಿಯರ್ ಎಚ್‌.ಡಿ.ಉಮಾಶಂಕರ್ ತಮ್ಮ ಮನೆಗೆ ಸೋಫಾಸೆಟ್ ಖರೀದಿಸಿದ್ದರು. ಇದಕ್ಕೆ ಅಂಗಡಿಯವರು ಬಿಲ್ ನೀಡಿರಲಿಲ್ಲ. ಇದರ ಜತೆಗೆ ಸೋಫಾಸೆಟ್ ಕಳಪೆಯದ್ದಾಗಿತ್ತು.

ಈ ಎಲ್ಲ ವಿಚಾರವನ್ನು ಅಂಗಡಿಯವರ ಗಮನಕ್ಕೆ ತಂದರೂ, ಸ್ಪಂದಿಸದಿದ್ದರಿಂದ ಬೇಸತ್ತ, ಉಮಾಶಂಕರ್ ಗ್ರಾಹಕರ ನ್ಯಾಯಾಲಯದ ಮೊರೆ ಹೊಕ್ಕಿದ್ದರು.

ಪ್ರಕರಣದ ವಾದ–ವಿವಾದ ಆಲಿಸಿದ ಜಿಲ್ಲಾ ಗ್ರಾಹಕರ ನ್ಯಾಯಾಲಯ ಗ್ರಾಹಕನಿಗೆ ₹ 34,000 ಪರಿಹಾರ ಕೊಡುವ ಜತೆ, ₹ 20,000 ನಗದನ್ನು ಕೋರ್ಟ್‌ ಖರ್ಚು–ವೆಚ್ಚವನ್ನಾಗಿ ಒಂದು ತಿಂಗಳೊಳಗೆ ಪಾವತಿಸಬೇಕು ಎಂದು ಅಂಗಡಿ ಮಾಲೀಕರಿಗೆ ಆದೇಶಿಸಿದೆ ಎಂದು ವಕೀಲ ವಿಶ್ವನಾಥ್ ದೇವಶ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)