ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಹೊಸ ಮೈತ್ರಿಯೋ; ಹಳೇ ಒಪ್ಪಂದವೋ..?

ಎರಡನೇ ಅವಧಿಯ ಮೇಯರ್‌–ಉಪ ಮೇಯರ್ ಅಧಿಕಾರ ಇಂದಿಗೆ ಮುಕ್ತಾಯ: ಮೀಸಲಾತಿ ಪ್ರಕಟದತ್ತ ಚಿತ್ತ
Last Updated 16 ಜನವರಿ 2021, 19:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಎರಡನೇ ಅವಧಿಯ ಮೇಯರ್‌– ಉಪ ಮೇಯರ್‌ ಅಧಿಕಾರದ ಅವಧಿ ಭಾನುವಾರ (ಜ.17) ಮುಕ್ತಾಯಗೊಳ್ಳಲಿದೆ. ಮೂರನೇ ಅವಧಿಯ ಚುಕ್ಕಾಣಿಯನ್ನು ಯಾರು ಹಿಡಿಯಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಶತಾಯ–ಗತಾಯ ಮೇಯರ್‌ ಪಟ್ಟ ಪಡೆಯಲೇಬೇಕು ಎಂಬುದು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸ್ಥಳೀಯ ಶಾಸಕರು, ಸಂಸದ ಹಾಗೂ ಜಿಲ್ಲಾ ಬಿಜೆಪಿ ವರಿಷ್ಠರ ನಿಲುವಾಗಿದೆ. ಇದಕ್ಕಾಗಿ ಈಗಾಗಲೇ ರಾಜಕೀಯ ಕಸರತ್ತು ಶುರುವಾಗಿದೆ.

ಮೇಯರ್‌ ತಸ್ನಿಂ ತಮ್ಮ ಅವಧಿ ಮುಂದುವರೆಸುವಂತೆ ಸರ್ಕಾರಕ್ಕೆ ಮಾಡಿದ್ದ ಮನವಿಗೆ ಯಾವುದೇ ಮನ್ನಣೆ ಸಿಗಲ್ಲ ಎಂಬುದು ಇದರಿಂದ ಖಚಿತವಾಗಿದೆ. ಜೆಡಿಎಸ್‌ ಸಹ ಮುಂದಿನ ಅವಧಿಯ ಬಗ್ಗೆ ಈಗಾಗಲೇ ಶಾಸಕ ಸಾ.ರಾ.ಮಹೇಶ್‌ ನೇತೃತ್ವದಲ್ಲಿ ಸಭೆ ನಡೆಸಿರುವುದು ಸರ್ಕಾರ ಯಾವುದೇ ಕಾರಣಕ್ಕೂ ಅವಧಿ ಮುಂದುವರೆಸಲ್ಲ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಸಂಸದ ಪ್ರತಾಪ ಸಿಂಹ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಪಾಲಿಕೆಯ ಗದ್ದುಗೆಯಲ್ಲಿ ಕಮಲ ಅರಳಿಸಲಿಕ್ಕಾಗಿ ಕಸರತ್ತು ಆರಂಭಿಸಿದ್ದಾರೆ. ಇದಕ್ಕಾಗಿ ಈಗಾಗಲೇ ಎಚ್‌.ಡಿ.ಕುಮಾರಸ್ವಾಮಿ ಆಪ್ತ, ಶಾಸಕ ಸಾ.ರಾ.ಮಹೇಶ್‌ ಜೊತೆ ಮಾತುಕತೆ ನಡೆಸಿದ್ದಾರೆ.

ಇದಕ್ಕೆ ಪ್ರತಿಯಾಗಿ ತನ್ನ ‘ಕೈ’ನಲ್ಲೇ ಪಾಲಿಕೆಯ ಆಡಳಿತ ಹಿಡಿದುಕೊಳ್ಳಲಿಕ್ಕಾಗಿ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಸಹ ಜೆಡಿಎಸ್‌ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ, ಶಾಸಕ ಸಾ.ರಾ.ಮಹೇಶ್‌ ಜೊತೆಗೆ ಮಾತುಕತೆ ನಡೆಸಿದ್ದು, ಮೂರನೇ ಅವಧಿಯ ಮೇಯರ್‌ ಯಾರಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಕಾದು ನೋಡುವ ತಂತ್ರ

ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌, ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌, ಪಕ್ಷದ ಮುಖಂಡ ಕೃಷ್ಣ ಬೈರೇಗೌಡ ನಡುವೆ ನಡೆದಿದ್ದ ಐದು ವರ್ಷದ ಅವಧಿಯ ಒಪ್ಪಂದದಂತೆ, ಮೂರನೇ ಅವಧಿಯ ಮೇಯರ್‌ ಪಟ್ಟ ಕಾಂಗ್ರೆಸ್‌ಗೆ ಸಿಗಬೇಕು. ಉಳಿದ ಎರಡು ಅವಧಿಯ ಪಟ್ಟ ಜೆಡಿಎಸ್‌ ಪಾಲು.ಇದೀಗ ಕಾಂಗ್ರೆಸ್‌ ಸರದಿ ಬಂದಿದೆ. ಜೆಡಿಎಸ್‌ ಬೆಂಬಲಿಸಬೇಕಿದೆ.

ಬಿಜೆಪಿ ಅಧಿಕಾರದ ಚುಕ್ಕಾಣಿಗಾಗಿ ತಂತ್ರಗಾರಿಕೆ ಹೆಣೆಯಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್‌ ಸಹ ಎಚ್ಚೆತ್ತುಕೊಂಡಿದೆ. ಶತಾಯ–ಗತಾಯ ಪಾಲಿಕೆಯ ಗದ್ದುಗೆಯಲ್ಲಿ ಕಮಲ ಅರಳುವುದನ್ನು ತಡೆಗಟ್ಟಲು ಎಲ್ಲ ತ್ಯಾಗಕ್ಕೂ ಸಿದ್ಧವಿದೆ ಎಂಬುದು ಉನ್ನತ ಮೂಲಗಳಿಂದ ಖಚಿತಪಟ್ಟಿದೆ. ಇದು ಪಾಲಿಕೆಯಲ್ಲಿ ಹಳೆಯ ಒಪ್ಪಂದ ಮುಂದುವರೆಯುತ್ತದೋ? ಹೊಸ ಮೈತ್ರಿ ಏರ್ಪಡಲಿದೆಯೋ? ಅಥವಾ ಅಧಿಕಾರ ಹಂಚಿಕೆಯಲ್ಲಿ ಕೊಂಚ ಬದಲಾವಣೆ ತರಲಿದೆಯೋ? ಎಂಬ ಚರ್ಚೆಗೆ ಗ್ರಾಸವೊದಗಿಸಿದೆ.

ರಾಷ್ಟ್ರೀಯ ಪಕ್ಷಗಳೆರಡು ಅಧಿಕಾರಕ್ಕಾಗಿ ತನ್ನ ಜೊತೆ ಕೈ ಜೋಡಿಸುವ ಅನಿವಾರ್ಯದಲ್ಲಿರುವುದನ್ನು ಅರಿತಿರುವ ಜೆಡಿಎಸ್‌, ಕಾದು ನೋಡುವ ತಂತ್ರಕ್ಕೆ ಮೊರೆಯೋಗಿದೆ. ಹೀಗಾಗಿ, ಅಧಿಕೃತವಾಗಿ ಏನೊಂದನ್ನು ಘೋಷಿಸಲು ಮುಂದಾಗಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಗಳಸ್ಯ–ಕಂಠಸ್ಯ ಗೆಳೆಯರು. ಮೀಸಲಾತಿ ನಿಗದಿಯಲ್ಲಿ ಉಸ್ತುವಾರಿ ಸಚಿವರು ನಡೆಸುವ ‘ಕಮಲ ಕಮಾಲ್‌’ ಗಮನಿಸಿ ಮುಂದಿನ ಹೆಜ್ಜೆಯಿಡುವ ನಿರ್ಧಾರ ಜೆಡಿಎಸ್‌ದ್ದಾಗಿದೆ ಎಂಬುದು ಗೊತ್ತಾಗಿದೆ.

ಪಟ್ಟು ಬೇಡ: ಗದ್ದುಗೆ ಸಿಗಲಿ

‘ವರಿಷ್ಠರು ಮೇಯರ್‌ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಅವರ ನಿರ್ಧಾರವೇ ಅಂತಿಮ. ಆದರೆ, ಸದಸ್ಯರದ್ದು ಬೇಡಿಕೆಯಿದೆ. ಎಷ್ಟೇ ಸ್ಥಾನ ಗಳಿಸಿದ್ದರೂ ಚುಕ್ಕಾಣಿ ಹಿಡಿಯೋದು ಜೆಡಿಎಸ್‌. ಸಂಖ್ಯೆ ಇಲ್ಲಿ ಮುಖ್ಯವಾಗಲ್ಲ. ಪಟ್ಟು ಹಿಡಿದು ಪಟ್ಟ ಕಳೆದುಕೊಳ್ಳುವುದಕ್ಕಿಂತ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿ ಭಾಗಿಯಾಗುವುದು ಮುಖ್ಯ’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಬಿಜೆಪಿಯ ಪಾಲಿಕೆ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT