ಮಂಗಳವಾರ, ಡಿಸೆಂಬರ್ 1, 2020
21 °C
ಕೋವಿಡ್-19 ಮಾರ್ಗಸೂಚಿ ಅನುಷ್ಠಾನ ಪ್ರತಿನಿಧಿ ನೇಮಕಕ್ಕೆ ಸೂಚನೆ

ಸಾರ್ವಜನಿಕ ಕಾರ್ಯಕ್ರಮಗಳಿಗೆ ಎಸಿಪಿ ಅನುಮತಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ನಗರದಲ್ಲಿ ನಡೆಯುವ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಆಯಾ ವ್ಯಾಪ್ತಿಯ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ರಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ಒಳಾಂಗಣ ಮತ್ತು ಹೊರಾಂಗಣ ಕಾರ್ಯಕ್ರಮವಾದರೂ ಅನುಮತಿ ಪಡೆಯಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಜವಾಬ್ದಾರಿಯುತ ಪ್ರತಿನಿಧಿಯೊಬ್ಬರನ್ನು ಕಾರ್ಯಕ್ರಮದ ಆಯೋಜಕರೇ ನೇಮಕ ಮಾಡಿಕೊಂಡು ಅವರ ಮೂಲಕ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಒಳಾಂಗಣ ಸ್ಥಳಗಳಲ್ಲಿ 200 ಮಂದಿ ಮೀರದಂತೆ, ಸಭಾಭವನದ ಒಟ್ಟು ಸಾಮರ್ಥ್ಯದ ಗರಿಷ್ಠ ಶೇ 50ರಷ್ಟು ಹಾಗೂ ಹೊರಾಂಗಣ ಸ್ಥಳಗಳಲ್ಲಿ, ಮೈದಾನ, ಸ್ಥಳದ ವಿಸ್ತೀರ್ಣವನ್ನು ಗಮನದಲ್ಲಿಟ್ಟುಕೊಂಡು ಪರಸ್ಪರ ಅಂತರದ ಕಟ್ಟುನಿಟ್ಟಿನ ಪಾಲನೆಯ ಅನುಗುಣವಾಗಿ ಅನುಮತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ವ್ಯಾಪಾರ ಮಳಿಗೆ, ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ಧಾರ್ಮಿಕ ಸ್ಥಳ, ಸಿನಿಮಾ ಮಂದಿರ, ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಒಬ್ಬರು ಜವಾಬ್ದಾರಿಯುತ ‘ಕೋವಿಡ್ ಮಾರ್ಗಸೂಚಿ ಅನುಷ್ಠಾನ ಪ್ರತಿನಿಧಿ’ಯನ್ನು ನೇಮಿಸಿ ಅವರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು. ಠಾಣಾಧಿಕಾರಿಗಳು ಈ ಪಟ್ಟಿಯನ್ನು ಠಾಣಾವಾರು ನಿರ್ವಹಿಸಿ ಅನುಷ್ಠಾನ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜಿಸುವವರು ಸಂಬಂಧಪಟ್ಟ ಇಲಾಖೆಯಿಂದ ಒಬ್ಬ ಜವಾಬ್ದಾರಿಯುತ ಅಧಿಕಾರಿಯನ್ನು ‘ಕೋವಿಡ್-19 ಮಾರ್ಗಸೂಚಿ ಅನುಷ್ಠಾನ ಅಧಿಕಾರಿ’ಯನ್ನಾಗಿ ನೇಮಿಸಿ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆದು ಮಾರ್ಗಸೂಚಿಗಳು ಉಲ್ಲಂಘನೆಯಾಗದಂತೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.