ಭಾನುವಾರ, ಸೆಪ್ಟೆಂಬರ್ 19, 2021
26 °C
ಜಿಲ್ಲೆಯಲ್ಲಿ ಹಲವೆಡೆ ಕಸ ಸುರಿಯುತ್ತಿರುವ ಮಾಫಿಯಾ

ಕೇರಳ ಕಸಕ್ಕೆ ಮೈಸೂರಿನಲ್ಲಿ ಏಜೆಂಟರು

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಸ್ವಚ್ಛ ಕೇರಳ’ ಪರಿಕಲ್ಪನೆ ಬಲಗೊಳ್ಳುತ್ತಿದ್ದಂತೆಯೇ, ಅಲ್ಲಿನ ಕಸವನ್ನು ರಾಜ್ಯಕ್ಕೆ ತರುವ ಮಾಫಿಯಾ ಮೈಸೂರು ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ.

ಈಗಾಗಲೇ 5ಕ್ಕೂ ಹೆಚ್ಚು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದರೂ, ಕಸ ತಂದು ಸುರಿಯುವ ದಂದೆ ಅವ್ಯಾಹತವಾಗಿ ಸಾಗಿದೆ.

ಕಳೆದ ವರ್ಷ ಎಚ್.ಡಿ.ಕೋಟೆ ಹಾಗೂ ಗುಂಡ್ಲುಪೇಟೆ ಭಾಗಗಳಲ್ಲಿ ಕಸ ಸುರಿದು ಹೋಗಲಾಗುತ್ತಿತ್ತು. ಇದಕ್ಕೆ ತಡೆಯೊಡ್ಡಿದ ಮೇಲೆ, ಹಣವನ್ನೂ ಕೊಟ್ಟು ಕಸ ನೀಡುವ ಮಾಫಿಯಾ ಆರಂಭವಾಗಿದೆ.

ಮೈಸೂರಿನ ಉದಯಗಿರಿ ಭಾಗದಲ್ಲೇ ಹೆಚ್ಚಿನ ಏಜೆಂಟರು ಇದ್ದಾರೆ. ಇವರಿಗೆ, ಕೇರಳದ ಸ್ಥಳೀಯ ಸಂಸ್ಥೆಗಳಲ್ಲಿ ಕಸ ವಿಲೇವಾರಿಯ ಗುತ್ತಿಗೆ ಪಡೆದಿರುವವರು ಹಣ ಕೊಟ್ಟು, ಕಸ ಸಾಗಿಸುತ್ತಾರೆ. ಈಗ ಈ ಕಸದ ವಿಲೇವಾರಿ ಹೊಣೆ ಈ ಏಜೆಂಟರದು. ನಗರದ ಹೊರವಲಯದಲ್ಲಿನ ತುಂಡು ಜಮೀನನ್ನು ಬಾಡಿಗೆಗೆ ಪಡೆಯುವ ಅವರು ಆ ಕಸವನ್ನು ಅಲ್ಲಿಗೆ ತಂದು ಸುರಿಯುತ್ತಾರೆ.

ಮೊದಲಿಗೆ, ಇವರು ಇಲ್ಲೊಂದು ಪ್ಲಾಸ್ಟಿಕ್ ಕೊಡ ಹಾಗೂ ಇತರ ವಸ್ತುಗಳ ತಯಾರಿಕಾ ಘಟಕವನ್ನು ತೆರೆಯಲಾಗುವುದು ಎಂದು ಗ್ರಾಮಸ್ಥರನ್ನು ನಂಬಿಸುತ್ತಾರೆ. ಇದರಿಂದ ಗ್ರಾಮದಲ್ಲಿ ಅನೇಕರಿಗೆ ಉದ್ಯೋಗ ದೊರೆಯುತ್ತದೆ ಎಂಬ ಆಮಿಷ ಒಡ್ಡುತ್ತಾರೆ. 8ರಿಂದ 10 ಮಂದಿಯನ್ನು ಕೆಲಸಕ್ಕೆ ತೆಗೆದುಕೊಂಡು ಕೇರಳದಿಂದ ತರಿಸಿದ ಕಸದಲ್ಲಿರುವ ಪ್ಲಾಸ್ಟಿಕ್‌ ವಸ್ತುಗಳ ವಿಂಗಡಣೆ ಆರಂಭಿಸುತ್ತಾರೆ. ಪ್ಲಾಸ್ಟಿಕ್‌ ವಸ್ತುಗಳೆಲ್ಲವನ್ನೂ ಸಂಗ್ರಹಿಸಿ ಅದನ್ನು ಮಂಡ್ಯ ಹಾಗೂ ತಿ.ನರಸೀಪುರ ಭಾಗಗಳಲ್ಲಿರುವ ಆಲೆಮನೆಗಳಿಗೆ ರವಾನಿಸುತ್ತಾರೆ.

ಕಸ ತೆಗೆದುಕೊಳ್ಳುವುದಕ್ಕೆ ಹಣ ಪಡೆಯುವ ಏಜೆಂಟರು, ಕಸ ನೀಡುವುದಕ್ಕೂ ಹಣ ತೆಗೆದುಕೊಳ್ಳುವ ಮೂಲಕ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.

‘ತಿ.ನರಸೀಪುರ ತಾಲ್ಲೂಕಿನ ಕಗ್ಗಲೀಪುರದ ಸಾ ಮಿಲ್‌ ಒಂದರ ಭೂಮಿಯನ್ನು ಮಾಸಿಕ ₹ 15 ಸಾವಿರಕ್ಕೆ ಬಾಡಿಗೆಗೆ ಪಡೆದ ಜಾಫರ್ ಎಂಬಾತ, ಇಲ್ಲಿ ಪ್ಲಾಸ್ಟಿಕ್‌ ಕೊಡ ತಯಾರಿಸುವ ನೆವವೊಡ್ಡಿ ಕಸ ತಂದು ಸುರಿಯುತ್ತಿದ್ದ. ಪ್ಲಾಸ್ಟಿಕ್‌ ವಿಂಗಡಿಸಿ ಬೇರೆಲ್ಲೋ ಸಾಗಿಸುತ್ತಿದ್ದ. ಇದನ್ನು ವಿರೋಧಿಸಿ ಗ್ರಾಮಸ್ಥರು ದೂರು ನೀಡಿದರು. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪ್ರಕರಣ ದಾಖಲಿಸಿದ ನಂತರ ಕಸ ತಂದು ಸುರಿಯುವುದು ನಿಂತಿತು’ ಎಂದು ಗ್ರಾಮದ ಮಂಜೇಶ್‌ಗೌಡ ಹೇಳಿದರು.

ಇದೇ ರೀತಿ ತಿ.ನರಸೀಪುರ ಸೋಸಲೆ ಹೋಬಳಿಯ ಕರ್ಗಹಳ್ಳಿ ಹಾಗೂ ಹೊರಳಹಳ್ಳಿಯ ಜಮೀನಿನಲ್ಲಿ ತ್ಯಾಜ್ಯ ಸಂಗ್ರಹಿಸಿದ್ದಕ್ಕೆ 6 ಮಂದಿಯ ವಿರುದ್ಧ ತಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯಪುರದಲ್ಲೂ ಈಚೆಗೆ ಇಂತಹುದೇ ದೊಡ್ಡ ಕಸ ಸಂಗ್ರಹಾಗಾರವನ್ನು ಪತ್ತೆ ಹಚ್ಚಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನಲ್ಲಿ, ಸ್ವತಃ ಮೇಯರ್ ಪುಷ್ಪಾಲತಾ ಜಗನ್ನಾಥ್ ಅವರೇ ಕಳೆದ ತಿಂಗಳು ಕೇರಳದಿಂದ ಕಸ ಸಾಗಿಸುತ್ತಿದ್ದ ಲಾರಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ನಿತ್ಯ ಕನಿಷ್ಠ ಎಂದರೂ 5–6 ಲಾರಿಗಳಲ್ಲಿ ಕೇರಳದಿಂದ ಪ್ಲಾಸ್ಟಿಕ್, ಜೈವಿಕ ಮತ್ತು ವೈದ್ಯಕೀಯ ತ್ಯಾಜ್ಯ ಮೈಸೂರಿಗೆ ಬರುತ್ತಿದೆ. ಇದನ್ನು ರಾಜೀವ್ ನಗರ, ಭಾರತ್ ನಗರ, ಬನ್ನೂರು ರಸ್ತೆಯಲ್ಲಿ ಹಾಗೂ ಇತರೆಡೆ ಇರುವ ಡಂಪಿಂಗ್ ಯಾರ್ಡ್‌ಗಳಿಗೆ ರವಾನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

***

ಕೇರಳದಿಂದ ಕಸ ತಂದು ಸುರಿಯುತ್ತಿರುವ ಕುರಿತು ಜಯಪುರ, ಉದಯಗಿರಿ, ತಿ.ನರಸೀಪುರ, ಬನ್ನೂರು ಮತ್ತು ಮೈಸೂರು ದಕ್ಷಿಣ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕಸ ಸುರಿಯುವುದು ಕಂಡು ಬಂದರೆ ಸಾರ್ವಜನಿಕರು ದೂರು ನೀಡಬಹುದು

– ಪ್ರಕಾಶ್, ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು