ಶನಿವಾರ, ಸೆಪ್ಟೆಂಬರ್ 25, 2021
22 °C
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ; ಯುವಕ ಸಾವು

ಉದಯಗಿರಿಯಲ್ಲಿ ನಿಲ್ಲದ ರಕ್ತದೋಕುಳಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಉದಯಗಿರಿಯಲ್ಲಿ ಒಂದು ಕೊಲೆಯ ಬೆನ್ನಿಗೆ ಮತ್ತೊಂದು ಕೊಲೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ಭಾನುವಾರ ಸಂಜೆ ರಾಜಕುಮಾರ ರಸ್ತೆಯ ಇಂದಿರಾ ಕ್ಯಾಂಟೀನ್‌ ಬಳಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಯುವಕ ಮೃತಪಟ್ಟಿದ್ದಾರೆ. ಮತ್ತೊಬ್ಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿನ ಅಜೀಜ್‌ಸೇಠ್‌ ನಗರದ ನಿವಾಸಿ ಯಾಸ್ಮಿನ್ (21) ಕೊಲೆಯಾದವರು. ಇವರ ಸ್ನೇಹಿತ ಅಬ್ದುಲ್ ರಹೀಂ ಚೂರಿ ಇರಿತಕ್ಕೆ ಒಳಗಾದವರು. ಇವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಾದ ಇಮ್ರಾನ್, ಮಜ್ಜು ಹಾಗೂ ಇಮ್ರಾನ್ ಪರಾರಿಯಾಗಿದ್ದಾರೆ. ಇವರ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ಕಳೆದಿದ್ದ ಮೊಬೈಲ್‌ ಕೇಳಿದ್ದಕ್ಕೆ ಕೊಲೆ!: ಅಬ್ದುಲ್ ರಹೀಂ ಅವರ ಸೋದರ ಇಬ್ರಾಹಿಂ ಅವರ ಮೊಬೈಲ್‌ ಕಳೆದ ಕೆಲ ದಿನಗಳ ಹಿಂದೆ ಕಳೆದು ಹೋಗಿತ್ತು. ಈ ಮೊಬೈಲ್ ಆರೋಪಿ ಇಮ್ರಾನ್‌ಗೆ ಸಿಕ್ಕಿತ್ತು. ಇದನ್ನು ವಾಪಸ್ ಕೊಡುವಂತೆ ರಹೀಂ ಮತ್ತು ಇವರ ಸ್ನೇಹಿತ ಯಾಸಿನ್ ಒತ್ತಾಯಿಸಿದ್ದಾರೆ. ಈ ವಿಚಾರದಲ್ಲಿ ಭಾನುವಾರ ಸಂಜೆ 7 ಗಂಟೆ ಸುಮಾರಿನಲ್ಲಿ ರಾಜಕುಮಾರ್ ರಸ್ತೆಯ ಇಂದಿರಾ ಕ್ಯಾಂಟೀನ್ ಬಳಿ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿದೆ. ಆರೋಪಿಗಳು ಯಾಸಿನ್‌ ಹೊಟ್ಟೆಗೆ ಎರಡು ಬಾರಿ ಹಾಗೂ ಅಬ್ದುಲ್ ರಹೀಂಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಗಾಯಗೊಂಡಿದ್ದ ಇಬ್ಬರನ್ನೂ ಇಲ್ಲಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಯಾಸಿನ್ ಸೋಮವಾರ ಬೆಳಿಗ್ಗೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾನುವಾರವಷ್ಟೇ ಇಲ್ಲಿನ ರಾಜೀವನಗರ 3ನೇ ಹಂತದ ನಿವಾಸಿ ಮಹಮ್ಮದ್ ಸರಾನ್ (27)  ಅವರನ್ನು ಕೊಲೆ ಮಾಡಿದ  ಬಾವಮೈದುನ ಕದೀರ್ ಪಾಷಾ ಪೊಲೀಸ್‌ ಠಾಣೆಗೆ ಬಾವನ ಬಲಗೈ ತೆಗೆದುಕೊಂಡು ಬಂದು ಶರಣಾಗಿದ್ದ. ಅದರ ಬೆನ್ನಿಗೆ ಈ ಭಾಗದಲ್ಲಿ ಮತ್ತೊಂದು ಕೊಲೆ ನಡೆದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಮಾರಾಮಾರಿ

ಇಲ್ಲಿನ ಪಡುವಾರಹಳ್ಳಿಯಲ್ಲಿ ಅವಿನಾಶ್ ಎಂಬ ಯುವಕನ ಮೇಲೆ ಮೂವರು ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತಲೆಗೆ ಪೆಟ್ಟಾಗಿರುವ ಅವಿನಾಶ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೆ ಹಳೆಯ ದ್ವೇಷ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಸರಗಳವು

ಇಲ್ಲಿನ ದೇವಲಾಪುರ ರಸ್ತೆಯ ಹಡಜನ ಗ್ರಾಮದ ಸಮೀಪ ಬೈಕಿನ ಹಿಂಬದಿ ಕುಳಿತಿದ್ದ ಗೀತಾ (45) ಎಂಬುವವರ ಕುತ್ತಿಗೆಯಲ್ಲಿದ್ದ 30 ಗ್ರಾಂ ತೂಕದ ಚಿನ್ನದ
ಸರವನ್ನು ಬೈಕ್ ಚಲಿಸುತ್ತಿರುವಾಗಲೇ ಕಸಿದ ಕಳ್ಳರು
ಪರಾರಿಯಾಗಿದ್ದಾರೆ.

ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಕಳ್ಳರು ಹಿಂದಿನಿಂದ ಕಾರೊಂದು ಬರುತ್ತಿದ್ದು, ನಿಧಾನವಾಗಿ ಹೋಗುವಂತೆ ಹೇಳಿದ್ದಾರೆ. ಇದರಿಂದ ವಿಚಲಿತರಾದ ಗೀತಾ ಅವರ ಪತಿ ಬೈಕ್‌ನ ವೇಗವನ್ನು ಕಡಿಮೆಗೊಳಿಸಿದ್ದಾರೆ. ಈ ಅವಧಿಯಲ್ಲಿ ಕಳ್ಳರು ಸರ ಕಿತ್ತುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ಬಗೆಯ ಸರಗಳ್ಳತನ ಕಳೆದ ವಾರ ಹೆಬ್ಬಾಳದ ಸೂರ್ಯ ಬೇಕರಿ ಸಮೀಪ ನಡೆದಿತ್ತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು