ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ಪ್ರತಿಷ್ಠೆಯ ಕಣ- ಪೈಪೋಟಿಯ ತಾಣ

ಹೆಚ್ಚು ಕ್ಷೇತ್ರಗಳನ್ನು ಹೊಂದಿದ ಹೆಗ್ಗಳಿಕೆ
Last Updated 12 ಜುಲೈ 2021, 3:39 IST
ಅಕ್ಷರ ಗಾತ್ರ

ಮೈಸೂರು: ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆಲವೊಂದು ಪ್ರದೇಶ ಒಳಗೊಂಡಿರುವ ನಂಜನಗೂಡು ತಾಲ್ಲೂಕಿನಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯ ಚಟುವಟಿಕೆ ನಿಧಾನವಾಗಿ ಗರಿಗೆದರುತ್ತಿದೆ.

ತಾಲ್ಲೂಕಿನಲ್ಲಿ ತಮ್ಮ ಪ್ರಾಬಲ್ಯವನ್ನು ಮತ್ತಷ್ಟು ಬಿಗಿಪಡಿಸಿಕೊಳ್ಳುವ ಇರಾದೆ ಸಂಸದ ವಿ.ಶ್ರೀನಿವಾಸ ಪ್ರಸಾದ್‌, ಶಾಸಕ ಬಿ.ಹರ್ಷವರ್ಧನ್‌ (ಮಾವ–ಅಳಿಯ) ಅವರದ್ದಾಗಿದ್ದರೆ; ಕಾಂಗ್ರೆಸ್‌ನಲ್ಲಿ ನಾಯಕತ್ವ, ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್‌ಗಾಗಿ ಈಗಿನಿಂದಲೇ ಮಾಜಿ ಸಚಿವ, ಮಾಜಿ ಶಾಸಕ, ಮಾಜಿ ಸಂಸದರ ನಡುವೆ ತೀವ್ರ ಪೈಪೋಟಿ ನಡೆದಿದೆ.

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲಿಕ್ಕಾಗಿಯೇ ಕ್ಷೇತ್ರ ನಿಗದಿ ಮಾಡಿಕೊಂಡು; ಶಾಸಕರು–ಸಂಸದರ ಆಶೀರ್ವಾದ ಗಿಟ್ಟಿಸಿಕೊಳ್ಳುವ ಜೊತೆಗೆ ಟಿಕೆಟ್‌ನ ಭರವಸೆಯನ್ನು ಪಡೆದು ಈಗಾಗಲೇ ಚುನಾವಣೆಯ ಸಿದ್ಧತೆ ನಡೆಸಿದ್ದ ಬಿಜೆಪಿಯ ಕೆಲವೊಬ್ಬರಿಗೆ ಮೀಸಲಾತಿ ನಿಗದಿಯಾಗದಿರುವುದು ನುಂಗಲಾರದ ಬಿಸಿತುಪ್ಪವಾಗಿದೆ ಎಂಬ ಮಾತು ತಾಲ್ಲೂಕಿನ ರಾಜಕೀಯ ಪಡಸಾಲೆಯಿಂದ ಕೇಳಿ ಬರುತ್ತಿದೆ.

‘ಮೀಸಲಾತಿ ನಿಗದಿಯಾಗದಿದ್ದರೇನು? ಸಾಮಾನ್ಯ ಕ್ಷೇತ್ರದಿಂದಲೇ ಸ್ಪರ್ಧಿಸಲು ಸಜ್ಜಾಗಿದ್ದೇನೆ. ನನಗೆ ಹುಲ್ಲಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಟಿಕೆಟ್‌ ಸಿಗದಿದ್ದರೆ ಪಕ್ಷ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಯಾಗುವೆ’ ಎಂದು ಬಿಜೆಪಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ತಾಲ್ಲೂಕಿನಲ್ಲಿ ಈಗಾಗಲೇ ತಮ್ಮ ಬೆಂಬಲಿಗರ ಸಭೆ ನಡೆಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಸಹ ತಮ್ಮದೇ ಬೆಂಬಲಿಗರ ಪಡೆ ಹೊಂದುವ ಜೊತೆಗೆ ಹಿಡಿತವನ್ನಿಟ್ಟುಕೊಂಡಿದ್ದಾರೆ. ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಸಿದ್ದರಾಮಯ್ಯ ಸೂಚನೆಗೆ ಕಾದು ಕೂತಿದ್ದಾರೆ ಎಂಬುದು ಗೊತ್ತಾಗಿದೆ.

ಮಿಂಚಿನ ಸಂಚಲನದ ನಿರೀಕ್ಷೆ: ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಅನಿವಾರ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲಿನದ್ದಾಗಿದ್ದರೆ; ಮಿಂಚಿನ ಸಂಚಲನ ಸೃಷ್ಟಿಯ ನಿರೀಕ್ಷೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ ಬೆಂಬಲಿಗರದ್ದಾಗಿದೆ.

ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರ ಪುತ್ರರೇ ತಮ್ಮ ಭವಿಷ್ಯದ ಅಸ್ತಿತ್ವಕ್ಕಾಗಿ ಜಿದ್ದಾಜಿದ್ದಿಯ ಹಣಾಹಣಿ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

ವಿಜಯೇಂದ್ರ ಅಖಾಡ ಪ್ರವೇಶಿಸಿದರೆ ಚುನಾವಣೆಯ ಚಿತ್ರಣವೇ ಬದಲಾಗಲಿದೆ. ಅವರ ಬೆಂಬಲಿಗರು ಸಹ ಟಿಕೆಟ್‌ಗಾಗಿ ಈಗಾಗಲೇ ತಮ್ಮ ನಾಯಕನ ಬಳಿ ಲಾಬಿ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಸೂಚನೆಯೇ ಅಂತಿಮ ಎಂಬುದು ಮೂಲಗಳಿಂದ ಖಚಿತಪಟ್ಟಿದೆ.

ನಂಜನಗೂಡಿನಲ್ಲೇ ಹೆಚ್ಚು ಕ್ಷೇತ್ರ

ಜಿಲ್ಲೆಯಲ್ಲೇ ಅತಿ ಹೆಚ್ಚು ಜಿಲ್ಲಾ, ತಾಲ್ಲೂಕು ಪಂಚಾಯಿತಿಯ ಕ್ಷೇತ್ರಗಳನ್ನೊಂದಿದ ಹೆಗ್ಗಳಿಕೆ ನಂಜನಗೂಡು ತಾಲ್ಲೂಕಿನದ್ದು.

53 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ 10 ಕ್ಷೇತ್ರಗಳು ನಂಜನಗೂಡು ತಾಲ್ಲೂಕಿನಲ್ಲಿವೆ. ಉಳಿದ 43 ಕ್ಷೇತ್ರಗಳು ಎಂಟು ತಾಲ್ಲೂಕುಗಳಲ್ಲಿ ಹಂಚಿಕೆಯಾಗಿವೆ.

ತಾಲ್ಲೂಕು ಪಂಚಾಯಿತಿಯಲ್ಲೂ ಅತಿ ಹೆಚ್ಚು ಕ್ಷೇತ್ರ ಹೊಂದಿರುವ ಹೆಗ್ಗಳಿಕೆ. 27 ಕ್ಷೇತ್ರಗಳು ಈ ತಾಲ್ಲೂಕಿನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT