ಮೈಸೂರು: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಶುಕ್ರವಾರ ಆಷಾಢ ಅಮಾವಾಸ್ಯೆ ಆಚರಿಸಲಾಯಿತು.
ನಸುಕಿನ 5.30ಕ್ಕೆ ನಾಡದೇವತೆಗೆ ವಿಶೇಷ ಪೂಜೆ, ಅಭಿಷೇಕ ಮಾಡಲಾಯಿತು. ಬೆಳಿಗ್ಗೆ 7.30ರ ವೇಳೆಗೆ ಮಹಾ ಮಂಗಳಾರತಿ ನಡೆಯಿತು.
ದೇಗುಲದ ಪ್ರಾಂಗಣದಲ್ಲೇ ದೇವಾಲಯದ ಅರ್ಚಕರು ಉತ್ಸವ ಮೂರ್ತಿಯ ಮೆರವಣಿಗೆ ಮಾಡಿದರು. 7.45ರ ವೇಳೆಗೆ ಕೋವಿಡ್ ಲಾಕ್‌ಡೌನ್ ನಿಯಮಾವಳಿಯಂತೆ ದೇಗುಲದ ಬಾಗಿಲಿಗೆ ಬೀಗ ಹಾಕಲಾಯಿತು.
ಸಂಜೆಯೂ ದೇವಿಗೆ ವಿಶೇಷ ಪೂಜೆಗೈದು, ಮಹಾಮಂಗಳಾರತಿ ಅರ್ಪಿಸಲಾಯಿತು.
ಜಿಲ್ಲಾಡಳಿತ ಆಷಾಢ ಅಮಾವಾಸ್ಯೆಯಂದು ಚಾಮುಂಡೇಶ್ವರಿಯ ದರ್ಶನವನ್ನು ಸಾರ್ವಜನಿಕರಿಗೆ ನಿರ್ಬಂಧಿಸಿದ್ದರೂ; ಅಸಂಖ್ಯಾತ ಭಕ್ತರು ಚಾಮುಂಡಿ ಬೆಟ್ಟಕ್ಕೆ ದೇವಿ ದರ್ಶನ ಪಡೆಯಲಿಕ್ಕಾಗಿ ನಸುಕಿನಲ್ಲೇ ದೌಡಾಯಿಸಿದ್ದರು.
ಜಿಲ್ಲಾಡಳಿತದ ಆದೇಶದಂತೆ ಪೊಲೀಸರು ಬೆಟ್ಟ ಪ್ರವೇಶಿಸುವ ಎಲ್ಲ ರಸ್ತೆಗಳಲ್ಲೂ ನಾಕಾಬಂದಿ ಹಾಕಿದ್ದರು. ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಯಾರೊಬ್ಬರು ಬೆಟ್ಟ ಪ್ರವೇಶಿಸದಂತೆ ಕಾವಲು ಕಾದ ಚಿತ್ರಣ ಶುಕ್ರವಾರ ದಿನವಿಡಿ ಗೋಚರಿಸಿತು.
ಆಷಾಢ ಇಂದಿನಿಂದ: ‘ಆಷಾಢ ಮಾಸ ಶನಿವಾರದಿಂದ ಆರಂಭ. ಶಕ್ತಿ ದೇವತೆ ಆರಾಧನೆಯ ಪುಣ್ಯ ಕಾಲವಿದು. ಈ ತಿಂಗಳಲ್ಲಿ ಚಾಮುಂಡೇಶ್ವರಿಯ ಆರಾಧನೆಯಿಂದ ಭಕ್ತರ ಸಕಲ ಇಷ್ಟಾರ್ಥ ನೆರವೇರಲಿವೆ’ ಎಂದು ದೇಗುಲದ ಪ್ರಧಾನ ಅರ್ಚಕ ಎನ್.ಶಶಿಶೇಖರ ದೀಕ್ಷಿತ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆಷಾಢ ಮಾಸದಲ್ಲಿ ದೇವಿಗೆ ನಿತ್ಯವೂ ಎಂದಿನಂತೆ ಅಭಿಷೇಕ, ವಿಶೇಷ ಪೂಜೆ ಮಾಡುತ್ತೇವೆ. ಜುಲೈ 16, 23 (ಆಷಾಢ ಶುಕ್ರವಾರ), ಜುಲೈ 30 (ಅಮ್ಮನವರ ಜನ್ಮೋತ್ಸವ), ಆಗಸ್ಟ್ 6 (ಆಷಾಢ ಶುಕ್ರವಾರ)ರಂದು ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಮಾಡಿ ಚಾಮುಂಡೇಶ್ವರಿಯನ್ನು ಆರಾಧಿಸಲಾಗುತ್ತದೆ’ ಎಂದು ಅವರು ಹೇಳಿದರು.
‘ಉಳಿದ ದಿನಗಳಂದು ದೇಗುಲದಲ್ಲಿ ಎಂದಿನ ಪೂಜೆ ನಡೆಯಲಿದೆ. ಕೋವಿಡ್ ನಿಯಮಾವಳಿ ಪಾಲಿಸಿಕೊಂಡು ಭಕ್ತರು ಅಮ್ಮನವರ ದರ್ಶನ ಪಡೆಯಬಹುದು. ಆಷಾಢ ಶುಕ್ರವಾರ ಜಿಲ್ಲಾಡಳಿತದ ಆದೇಶದಂತೆ ಸಾರ್ವಜನಿಕರಿಗೆ ದರ್ಶನದ ಅವಕಾಶವಿರಲ್ಲ’ ಎಂದು ದೀಕ್ಷಿತ್ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.