ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಜಾತಿ ಮೀಸಲಾತಿಗೆ ಒಕ್ಕೊರಲ ವಿರೋಧ

ದುಂಡುಮೇಜಿನ ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
Last Updated 31 ಜನವರಿ 2019, 18:02 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ವತಿಯಿಂದ ಇಲ್ಲಿನ ಸಿದ್ಧಾರ್ಥ ಹೋಟೆಲ್‌ನಲ್ಲಿ ಗುರುವಾರ ನಡೆದ ‘ದುಂಡು ಮೇಜಿನ ಸಭೆ’ಯಲ್ಲಿ ಕೇಂದ್ರ ಸರ್ಕಾರ ಮೇಲ್ಜಾತಿಗೆ ನೀಡಿದ ಶೇ 10ಷ್ಟು ಮೀಸಲಾತಿಯನ್ನು ಒಕ್ಕೊರಲಿನಿಂದ ವಿರೋಧಿಸಲಾಯಿತು. ಜನಸಂಖ್ಯೆಗೆ ಅನುಗುಣವಾಗಿ ಮೇಲ್ಜಾತಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಲಾಯಿತು.

ಸಭೆಯಲ್ಲಿ ಪಾಲ್ಗೊಂಡ ಬಹುತೇಕ ಮಂದಿ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ನರೇಂದ್ರ ಮೋದಿ ಅವರ ನೀತಿಗಳನ್ನು ಖಂಡಿಸಿದರು.

ಆರಂಭದಲ್ಲಿ ಮಾತನಾಡಿದ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು, ‘ಮೇಲ್ಜಾತಿಗೆ ಮೀಸಲಾತಿ ಕಲ್ಪಿಸಿರುವುದು ಚುನಾವಣಾ ಗಿಮಿಕ್ ಅಲ್ಲದೇ ಬೇರೆನೂ ಅಲ್ಲ’ ಎಂದು ವಿಶ್ಲೇಷಿಸಿದರು.

ಶೇ 97ರಷ್ಟು ಮಂದಿ ಈಗಾಗಲೇ ಮೀಸಲಾತಿ ಪಡೆಯುತ್ತಿದ್ದಾರೆ. ಇದರಿಂದ ಹೊರಗಿದ್ದವರು ಕೇವಲ ಶೇ 3ರಷ್ಟು ಮಂದಿ ಮಾತ್ರ. ಅದೂ ಕೇವಲ ನಾಲ್ಕೇ ನಾಲ್ಕು ಜಾತಿಗಳು. ಇವರಿಗೆ ಶೇ 10ರಷ್ಟು ಮೀಸಲಾತಿ ನೀಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ. ಇವರಿಗೆ ಶೇ 15ರಷ್ಟು ಮೀಸಲಾತಿ ಇದೆ. ಪ್ರವರ್ಗ 1ರ 28 ಜಾತಿಗಳಿಗೆ ಶೇ 4ರಷ್ಟು, ಪ್ರವರ್ಗ 2 (ಎ)ನಲ್ಲಿ 102 ಜಾತಿಗಳಿಗೆ ಶೇ 15, 2 (ಬಿ)ಗೆ ಶೇ 4, 3 (ಎ)ನಲ್ಲಿ 48 ಜಾತಿಗಳಿಗೆ ಶೇ 4 ಹಾಗೂ 3 (ಬಿ)ನಲ್ಲಿನ 30 ಜಾತಿಗಳಿಗೆ ಶೇ 5ರಷ್ಟು ಮೀಸಲಾತಿ ಇದೆ. ಆದರೆ, ಕೇವಲ ನಾಲ್ಕೇ ಜಾತಿ ಇರುವ ಮೇಲ್ವರ್ಗದವರಿಗೆ ಶೇ 10ರಷ್ಟು ಮೀಸಲಾತಿ ನೀಡಿರುವುದು ಸರಿಯಲ್ಲ ಎಂದು ಮಾಹಿತಿ ನೀಡಿದರು.

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿರುವ ಪ್ರಾಧ್ಯಾಪಕರಲ್ಲಿ 2,434 ಮಂದಿ ಸಾಮಾನ್ಯ ವರ್ಗದಿಂದ ಬಂದವರು. ಪರಿಶಿಷ್ಟ ಜಾತಿಯಿಂದ 130, ಪರಿಶಿಷ್ಟ ಪಂಗಡದಿಂದ 34 ಮಂದಿ ಇದ್ದರೆ, ಹಿಂದುಳಿದ ವರ್ಗದವರಿಂದ ಒಬ್ಬರೂ ಪ್ರಾಧ್ಯಾಪಕರೂ ಇಲ್ಲ ಎಂದು ಅವರು ಅಂಕಿ ಅಂಶ ನೀಡಿದರು.

ಮೇಲ್ಜಾತಿಯವರಿಗೆ ಅವೈಜ್ಞಾನಿಕ ಮೀಸಲಾತಿ ತಂದಾಗ ಸಂಸತ್ತಿನಲ್ಲಿರುವ ದಲಿತ ಸಂಸದರು ಪ್ರತಿಭಟಿಸಲಿಲ್ಲ. ಹಾಗೆ ನೋಡಿದರೆ, ಅವರು ರಾಜೀನಾಮೆ ಕೊಟ್ಟು ಹೊರಬರಬೇಕಿತ್ತು ಎಂದರು.

ಪಿಯುಸಿಎಲ್‌ನ ಡಾ.ಲಕ್ಷ್ಮಿನಾರಾಯಣ, ಪ್ರಗತಿಪರ ಚಿಂತಕರಾದ ರತಿರಾವ್, ಕೆ.ಸಿ.ಪುಟ್ಟಸಿದ್ಧಶೆಟ್ಟಿ, ಶಂಭಯ್ಯ, ವರದಯ್ಯ, ಸ್ವಾಮಿ ಕಾಡನಹಳ್ಳಿ, ಅಮ್ಜದ್, ದೇವನೂರ ಪುಟ್ಟನಂಜಯ್ಯ, ಅರಸು ಮಹಾಸಭಾ ಅಧ್ಯಕ್ಷ ನಂದೀಶ್‌ ಅರಸ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ಸವಿತಾ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ವಿ.ಮಂಜುನಾಥ್ ಭಾಗವಹಿಸಿದ್ದರು.

**

ಕುಲಪತಿ ಕಚೇರಿಯಲ್ಲಿ ನಾಲ್ವಡಿ ಚಿತ್ರವೇ ಇರಲಿಲ್ಲ– ಮಾನೆ

‘ಮೈಸೂರು ವಿ.ವಿ ಕುಲಪತಿ ಕಚೇರಿಯಲ್ಲಿ ನಾನು ಪ್ರಭಾರ ಕುಲಪತಿಯಾಗಿ ಹೋದಾಗ ಅಲ್ಲಿ ವಿ.ವಿ ಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರವೇ ಇರಲಿಲ್ಲ’ ಎಂದು ಪ್ರಾಧ್ಯಾಪಕ ದಯಾನಂದ ಮಾನೆ ತಿಳಿಸಿದರು.

ಅಲ್ಲೆಲ್ಲ ಕೇವಲ ವಿಶ್ರಾಂತ ಕುಲಪತಿಗಳ ಚಿತ್ರಗಳೇ ಇದ್ದವು. ಅದನ್ನೆಲ್ಲ ತೆಗೆಸಿ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ನಾಲ್ವಡಿ ಹಾಗೂ ಕುವೆಂಪು ಅವರ ಭಾವಚಿತ್ರ ಹಾಕಿಸಿದೆ ಎಂದು ಹೇಳಿದರು.

ಕುಲಸಚಿವರೊಬ್ಬರು ತಮ್ಮ ಕಚೇರಿಯಲ್ಲಿದ್ದ ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿದರು. ಆಗ ಹಠಕ್ಕೆ ಬಿದ್ದು 40 ದಿನಗಳಲ್ಲಿ ₹ 40 ಲಕ್ಷ ಖರ್ಚು ಮಾಡಿ ಅಂಬೇಡ್ಕರ್ ಪ್ರತಿಮೆ ಮಾಡಿಸಿದೆ. ಈ ಕಾರ್ಯಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರಾಧ್ಯಾಪಕರೇ ಹಣ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

**

ನರೇಂದ್ರ ಮೋದಿ ಸರ್ಕಾರ ಬಡವರ ವಿರೋಧಿಯಾಗಿದೆ. ಈ ಮೂಲಕ ಅದು ದೇಶ ವಿರೋಧಿಯೂ ಆಗಿದೆ. ಹಾಗಾಗಿ, ಅದನ್ನು ಬದಲಿಸಬೇಕಿದೆ.
-ಮಹೇಶ್‌ಚಂದ್ರ ಗುರು, ಮೈಸೂರು ವಿ.ವಿ ಪ್ರಾಧ್ಯಾಪಕ

**

ಮೇಲ್ಜಾತಿಯವರಿಗೆ ಹೆಚ್ಚಿನ ಪ್ರಮಾಣದಲ್ಲಿ ಮೀಸಲಾತಿ ನೀಡಿದಾಗ ಜನರು ಏಕೆ ಪ್ರತಿಕ್ರಿಯಿಸಲಿಲ್ಲ
-ಯಮುನಾ,ಒಕ್ಕಲಿಗರ ವಿಕಾಸ ವೇದಿಕೆಯ ಅಧ್ಯಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT