ಮಂಗಳವಾರ, ಆಗಸ್ಟ್ 20, 2019
25 °C
ಮೊದಮೊದಲು ಮಸಾಜ್, ನಂತರ ಹೆಣ್ಣಿನ ಆಮಿಷ, ಬಲೆಗೆ ಬಿದ್ದರೆ ಮುಗಿಯಿತು

ಆಯುರ್ವೇದಿಕ್ ‘ಸ್ಪಾ’ನಲ್ಲಿ ವೇಶ್ಯಾವಾಟಿಕೆ; 7 ಮಂದಿ ಬಂಧನ

Published:
Updated:

ಮೈಸೂರು: ಮೈಕೈ ನೋವಿಗೆ ಹಾಗೂ ದೇಹ ಹಗುರವಾಗಲು ಆಯುರ್ವೇದಿಕ್‌ ಶೈಲಿಯಲ್ಲಿ ಮಸಾಜ್ ಮಾಡುವುದಾಗಿ ನಂಬಿಸಿ, ನಂತರ ಕ್ರಮೇಣ ವೇಶ್ಯಾವಾಟಿಕೆಗೆ ಸಾರ್ವಜನಿಕರನ್ನು ಸೆಳೆಯುತ್ತಿದ್ದ ಬೃಹತ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ನಗರ ಅಪರಾಧ ಪತ್ತೆ (ಸಿಸಿಬಿ) ವಿಭಾಗದ ಪೊಲೀಸರು ದಾಳಿ ನಡೆಸಿ, 7 ಮಂದಿಯನ್ನು ಬಂಧಿಸಿದ್ದಾರೆ. ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಮೈಸೂರು- ಬೆಂಗಳೂರು ರಸ್ತೆಯಲ್ಲಿರುವ ಸಮುದ್ರ ಮೈಸೂರು ಹೋಟೆಲ್‍ನ 4ನೇ ಮಹಡಿಯಲ್ಲಿರುವ ‘ಆಯುರ್ ಟಚ್’ ಎಂಬ ಆಯುರ್ವೇದಿಕ್ ಸ್ಪಾನಲ್ಲಿ ಈ ಬಗೆಯ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿದ ಬೆನ್ನಲ್ಲೇ ಕಾರ್ಯೋನ್ಮುಖರಾದ ಸಿಸಿಬಿ ಇನ್‌ಸ್ಪೆಕ್ಟರ್ ಮಲ್ಲೇಶ್ ಈ ದಾಳಿ ನಡೆಸಿ, ಸ್ಪಾದ ಮ್ಯಾನೇಜರ್ ಸಿ.ಎಂ.ಮನು ಫಿಲಿಪ್ (30) ಅವರನ್ನು ಬಂಧಿಸಿದರು.

ಇವರ ಜತೆಗೆ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಕೇರಳದ ಮೃದುಲ್ ರಾಜ್(27), ಸುಧೀರ್ ಬಾಬು(46),ಪ್ರಜೇಶ್(41), ಸುಜೀತ್(42), ಪ್ರದೀಪ(42), ರಿಜೇಶ್(36), ಬಿಹಾರ ಮೂಲದ ಮೈಸೂರಿನ ನೋಟು ಮುದ್ರಣಾ ನಗರದ ನಿವಾಸಿ ಧನೀಶ್‍ಕರ್ ಅವರನ್ನೂ ಬಂಧಿಸಲಾಗಿದೆ. ₹ 15 ಸಾವಿರ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಕೇರಳದ ಪ್ರವಾಸಿಗರೇ ಇವರ ಗುರಿಯಾಗಿದ್ದರು. ಅಲ್ಲಿಂದ ಬರುವವರಿಗೆ ಮೊದಲು ಆಯುರ್ವೇದಿಕ್ ಮಸಾಜ್ ಎಂದು ನಂಬಿಸುತ್ತಿದ್ದರು. ಮಸಾಜ್ ಮಾಡುತ್ತಲೇ ವೇಶ್ಯಾವಾಟಿಕೆಯ ಆಮಿಷ ಒಡ್ಡುತ್ತಿದ್ದರು. ವ್ಯಕ್ತಿ ಬಯಸಿದರೆ ಸ್ಪಾದ ಮತ್ತೊಂದು ಕೋಣೆಯಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಇದಕ್ಕೆ ಬೇರೆಯದೇ ಆದ ದರ ವಿಧಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ‌ಈ ಕುರಿತು ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಬಿಯ ಎಸಿಪಿ ಲಿಂಗಪ್ಪ ಅವರು ಈ ಕಾರ್ಯಾಚರಣೆ ನಡೆಸಲು ಸೂಚಿಸಿದ್ದರು. ಸಿಸಿಬಿ ಇನ್‌ಸ್ಪೆಕ್ಟರ್ ಮಲ್ಲೇಶ್ ಜತೆಗೆ ಲಷ್ಕರ್‌ ಇನ್‌ಸ್ಪೆಕ್ಟರ್‌ ಮುನಿಯಪ್ಪ, ಎಸ್‌ಐ ಪೂಜಾ ಹತ್ತರಕಿ ಹಾಗೂ ಸಿಬ್ಬಂದಿಯಾದ ಜೋಸೆಫ್‌ನರೋನ, ಪುರುಷೋತ್ತಮ, ಅರುಣ್‌ಕುಮಾರ್, ರಘು, ಮಹದೇವಸ್ವಾಮಿ, ಪರಶಿವಮೂರ್ತಿ, ಲಿಂಗರಾಜು, ಆದಂ, ಲೋಕೇಶ್, ಪ್ರದೀಪ, ಕಾಳಪ್ಪ, ಶ್ರೀನಿವಾಸ್, ಶಿವರಾಜು, ರಾಜಶ್ರೀ ಜಾಲವಾದಿ, ಮಂಜುಳಾ, ಮಂಗಳಮ್ಮ ಇದ್ದರು.

Post Comments (+)