ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣ ಜನ್ಮಾಷ್ಟಮಿ: ಬಾಲ ಲೀಲೆಗಳಲ್ಲಿ ಕೃಷ್ಣ ರೂಪ

Last Updated 31 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

‘ಯಶೋದೆಯೇ ಅಮ್ಮ...
ನನ್ನನು ಎತ್ತಿ ಕೊಳ್ಳಮ್ಮ...’

ಎಂದು ಕೃಷ್ಣ ಅಮ್ಮನಲ್ಲಿ ರಚ್ಚೆ ಹಿಡಿಯುವ ಸುಂದರ ಕ್ಷಣವನ್ನು ಪುರಂದರದಾಸರು ತಮ್ಮ ಪದ್ಯವೊಂದರಲ್ಲಿ ಕಟ್ಟಿ ಕೊಟ್ಟಿದ್ದಾರೆ. ಪುಟ್ಟ ಮಕ್ಕಳ ಒಂದು ಸಾಮಾನ್ಯ ಗುಣ ಎತ್ತಿಕೋ ಎಂದು ಅಮ್ಮನಲ್ಲಿ ದುಂಬಾಲು ಬೀಳುವುದು. ಸ್ನಾನ ಮಾಡಲು ಒಲ್ಲೆಯೆನ್ನುವುದು, ಊಟ-ತಿಂಡಿ ಬೇಡ ಎನ್ನುವುದು.. ಹೀಗೆ ಎಲ್ಲ ಮಕ್ಕಳಲ್ಲೂ ಕಾಣುವ ಬಾಲಲೀಲೆಗಳ ಮೂರ್ತ ರೂಪವೇ ಕೃಷ್ಣ.

ಕೃಷ್ಣ ಎಂಬ ವ್ಯಕ್ತಿ ಇದ್ದನೋ ಇಲ್ಲವೋ ಎಂಬುದಿಲ್ಲಿ ಮುಖ್ಯವಲ್ಲ. ಆದರೆ ಪ್ರತಿ ತಾಯಿಯ ಮನದಲ್ಲೂ ಕೃಷ್ಣನ ರೂಪ ಅಚ್ಚೊತ್ತಿರುವ ಬಗೆ ಮಾತ್ರ ಅದ್ಭುತ. ಬಹುಶಃ ಬೇರ‍್ಯಾವ ದೇವರ ರೂಪವೂ ಜಾತಿ-ಪಂಥಗಳ ಭೇದವಿಲ್ಲದೇ ಅಮ್ಮನ ಮನವನ್ನು ಕದ್ದಿರುವ ಉದಾಹರಣೆ ಕಂಡು ಬರುವುದು ವಿರಳ. ಆ ನವಿಲುಗರಿಯ ಕಿರೀಟ, ಪೀತಾಂಬರ, ಕೊಳಲು ಧರಿಸಿದ ಪುಟ್ಟ ಕೃಷ್ಣನ ಚಿತ್ರಣ ಈಗಲೂ ಪ್ರತಿ ಮನೆಯಲ್ಲೂ ಮನಸ್ಸಿನಲ್ಲೂ ಜಾಗ ಮಾಡಿಕೊಂಡಿವೆ.

ಪುರಾಣಗಳಲ್ಲಿ ಕೃಷ್ಣನ ಪಾತ್ರ ವಿಸ್ತಾರ ಬಹುದೊಡ್ಡದು, ಬೆಣ್ಣೆಕಳ್ಳ, ದನ ಕಾಯುವವ, ಗೋಪಿಕೆಯರ ಮುದ್ದು ಮಗು, ಅಸುರರ ಹಂತಕ, ಯುವಪ್ರೇಮಿ, ನಾಯಕ ಹಾಗೂ ಮಾರ್ಗದರ್ಶಕನಾಗಿ ಕೃಷ್ಣನ ಪಾತ್ರ ಚಿತ್ರಿತವಾಗಿದೆ. ಜನರ ಆರಾಧನೆಯಲ್ಲಿ ಮಾತ್ರ ಬಾಲಕೃಷ್ಣನೇ ಹೆಚ್ಚು ಜನಪ್ರಿಯ. ಎಲ್ಲ ಅಮ್ಮಂದಿರಿಗೂ ಮಗುವಿಗೆ ಕೃಷ್ಣನ ವೇಷ ಹಾಕಿ ಕಣ್ತುಂಬಿಕೊಳ್ಳುವ ಇಚ್ಛೆ. ಹೀಗಾಗಿ ಕೃಷ್ಣನ ಬಗೆಬಗೆ ಸಿದ್ಧ ಉಡುಪುಗಳೂ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

ಒತ್ತಡದಲ್ಲೇ ಬದುಕುವ ಇಂದಿನ ಜನರಿಗೆ ಕೃಷ್ಣ ಇನ್ನಷ್ಟು ಪ್ರಸ್ತುತ. ಎಂಥೆಂಥ ಕಷ್ಟ ಬಂದಾಗಲೂ ಆತನ ಮೊಗದ ಮೋಹಕ ನಗು ಮಾಸುವುದಿಲ್ಲ. ಕಷ್ಟಗಳಿಗೆ ಹೆದರಿ ಓಡದೇ, ಅಪವಾದಕ್ಕೆ ಜಗ್ಗದೇ ಜೀವನವೆಂಬ ಸಾಗರವನ್ನು ತಾಳ್ಮೆ ಹಾಗೂ ಧೈರ್ಯದಿಂದ ಈಸುವ ಬಗೆಯನ್ನು ತನ್ನ ಜೀವನದಿಂದಲೇ ಹೇಳಿಕೊಟ್ಟ ಕೃಷ್ಣ ಪ್ರತಿಯೊಬ್ಬರಿಗೂ ಗುರುವಾಗಬಲ್ಲ.

ನಾಳೆ ಕೃಷ್ಣ ಜನ್ಮಾಷ್ಟಮಿ

ಈ ಬಾರಿ ಸೆಪ್ಟೆಂಬರ್ 2 ರಂದು ಅಷ್ಟಮಿ ತಿಥಿ ಆರಂಭವಾಗುತ್ತದೆ. ಕೃಷ್ಣನ ಜನ್ಮದಿನವಾದ ಅಂದು ಕೃಷ್ಣನ ಮೂರ್ತಿಯನ್ನು ತೊಟ್ಟಿಲಿನಲ್ಲಿ ಹಾಕಿ ತೂಗುವ ಸಂಭ್ರಮ ಎಲ್ಲೆಡೆಯೂ ಕಾಣುತ್ತೇವೆ. ಮಕ್ಕಳಿಗೆ ಕೃಷ್ಣನ ವೇಷ ಹಾಕುವ ಸ್ಪರ್ಧೆಯನ್ನು ಏರ್ಪಡಿಸುವ ಪರಿಪಾಠವನ್ನೂ ಕಾಣುತ್ತೇವೆ.

ವಿಷ್ಣುವಿನ 8ನೇ ಅವತಾರವಾದ ಕೃಷ್ಣನ ಬಗ್ಗೆ ಭಾರತೀಯ ಹಲವು ಪುರಾಣಗಳಲ್ಲಿ ವಿವರಗಳು ಇವೆ. ಭಾಗವತ ಪುರಾಣ, ಗರ್ಗ ಸಂಹಿತೆ, ವಿಷ್ಣು ಪುರಾಣ, ಬ್ರಹ್ಮ ವೈವರ್ತ ಪುರಾಣ, ಮಹಾಭಾರತ, ಹರಿವಂಶ ಪುರಾಣಗಳು ಇವುಗಳಲ್ಲಿ ಕೆಲವು.

5000 ವರ್ಷಗಳ ಹಿಂದಿನ ಕಥೆ

ಸುಮಾರು 5000 ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಕೃಷ್ಣ ಅವತರಿಸಿದ ದಿನವನ್ನು ನೆನಪಿಸುವ ಜನ್ಮಾಷ್ಟಮಿಯನ್ನು ನಾವು ಆಚರಿಸುತ್ತೇವೆ.ನಮ್ಮ ದೃಷ್ಟಿಗೆ ವಸುದೇವ-ದೇವಕಿಯರ ಕಂದನಾಗಿ ಕೃಷ್ಣ ಜನಿಸಿ, 125 ವರ್ಷಗಳ ನಂತರ ಕಣ್ಮರೆಯಾದ. ಆದರೆ ಭಾಗವತದಲ್ಲಿ ಭಕ್ತರು ಕೇಳುತ್ತಾರೆ- ‘ಕೃಷ್ಣ ಇಲ್ಲಿಂದ ಎಲ್ಲಿ ಹೋಗಿದ್ದಾನೆ? ನಾವು ಧಾರ್ಮಿಕ ತತ್ವಗಳನ್ನು ಎಲ್ಲಿ ಪಡೆಯುವುದು? ಇದಕ್ಕೆ ಉತ್ತರ ಭಾಗವತದಲ್ಲಿ ಉತ್ತರವಿದೆ. ಕೃಷ್ಣನ ಲೀಲೆಗಳನ್ನು ಪಠಿಸುವುದು, ಇದರಿಂದ ಕೃಷ್ಣನಿಗೆ ಮುಖಾಮುಖಿಯಾದಷ್ಟೇ ನೇರವಾಗಿ ಕೃಷ್ಣ ಸಾಂಗತ್ಯ ಹೊಂದಬಹುದು. ಅದನ್ನೇ ಲೀಲಾಸ್ಮರಣ ಎನ್ನುವುದು. ಬೃಂದವನದಲ್ಲಿ ಕೃಷ್ಣಲೀಲೆಗಳನ್ನು ನೆನಪಿಸಿಕೊಳ್ಳುವುದೆಂದರೆ ಅವುಗಳೊಂದಿಗೆ ಇದ್ದ ಹಾಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT