ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸ್ಪೃಶ್ಯತೆ ನಿವಾರಣೆ; ಬಸವಣ್ಣನವರದು ವೈಜ್ಞಾನಿಕ ನೆಲೆ’

ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಂಶೋಧಕ ಎನ್.ಎಸ್.ತಾರಾನಾಥ ಅಭಿಮತ
Last Updated 7 ಮೇ 2019, 20:02 IST
ಅಕ್ಷರ ಗಾತ್ರ

ಮೈಸೂರು: ವೈಜ್ಞಾನಿಕ ನೆಲೆಗಟ್ಟಿನಲ್ಲಿ ಬಸವಣ್ಣನವರುಅಸ್ಪೃಶ್ಯತಾ ನಿವಾರಣೆಗೆ ಶ್ರಮಿಸಿದರು ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾನಾಥ್ ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ, ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟವು ಇಲ್ಲಿನ ಕಲಾಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ನಡೆದ ‘ಶರಣಧರ್ಮ – ಸಮನ್ವಯತೆ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೊದಲಿಗೆ ಬಸವಣ್ಣನವರು ದಲಿತರ ಹೆಸರನ್ನು ಪದೇ ಪದೇ ಸಂಸ್ಮರಣ ಮಾಡಿದರು. ಅವರ ವಚನಗಳಲ್ಲಿ ಇದರ ಸುಳಿವನ್ನು ಕಾಣಬಹುದು. ನಂತರ, ಇವರು ದಲಿತರನ್ನು ದರ್ಶನ ಮಾಡಿದರು. ಅವರೊಂದಿಗೆ ಸಂಭಾಷಣೆ ನಡೆಸಿದರು ಎಂದು ಅವರು ತಿಳಿಸಿದರು.

ಅಸ್ಪೃಶ್ಯರು ಶರಣು ಎಂದು ಹೇಳಿದರೆ, ಬಸವಣ್ಣ ಶರಣು ಶರಣಾರ್ಥಿ ಎಂದರು. ನಂತರ, ಇವರು ಅನುಸರಿಸಿದ್ದು ಸಹಭೋಜನ. ಸಂಬೋಳಿ ನಾಗಿದೇವನ ಮನೆಯಲ್ಲಿ ಇವರು ಊಟ ಮಾಡಿದರು ಎಂಬ ಪ್ರಸ್ತಾಪ ಹರಿಹರನ ಬಸವರಾಜದೇವರ ರಗಳೆಯಲ್ಲಿದೆ. ಪಾಲ್ಕುರಿಕೆ ಸೋಮನಾಥನೂ ಈ ವಿಷಯವನ್ನು ತನ್ನ ಕೃತಿಯಲ್ಲಿ ಹೇಳಿದ್ದಾನೆ ಎಂದು ಅವರು ಹೇಳಿದರು.

ಇದಾದ ನಂತರ ಬಸವಣ್ಣ ಅಂತರಜಾತಿ ವಿವಾಹದ ಮೂಲಕ ಅಸ್ಪೃಶ್ಯತೆ ತೊಡೆದು ಹಾಕಲು ಯತ್ನಿಸಿದರು. ಅಸ್ಪೃಶ್ಯರನ್ನು ನೋಡುವುದೇ ಪಾಪ ಎನ್ನುವಂತಹ ಕಾಲಘಟ್ಟದಲ್ಲಿ ಬಸವಣ್ಣ ಅವರನ್ನು ನೋಡಿ, ಪದೇ ಪದೇ ನೆನಪಿಸಿಕೊಂಡು, ಅವರೊಂದಿಗೆ ಮಾತನಾಡಿ, ಅವರ ಜತೆ ಸಹಪಂಕ್ತಿ ಭೋಜನ ಮಾಡಿದ್ದು ನಿಜಕ್ಕೂ ಒಂದು ದೊಡ್ಡ ವೈಜ್ಞಾನಿಕ ವಿಧಾನ ಎಂದು ಅವರು ವಿವರಿಸಿದರು.

ಬಸವಣ್ಣನವರನ್ನು ಕುರಿತಾಗಿ ಇರುವ ಅಪ್ರಕಟಿತ ಸಾಹಿತ್ಯದ ಕುರಿತು ವಿದ್ವಾಂಸರು ಲಕ್ಷ್ಯ ನೀಡಿಲ್ಲ. ಇನ್ನಾದರೂ ಅವರ ಕುರಿತು ಇರುವ ಇನ್ನೂ ಪ್ರಕಟವಾಗದೇ ತಾಳೆಗರಿಯಲ್ಲೇ ಉಳಿದಿರುವ ಸಾಹಿತ್ಯದ ಕಡೆಗೆ ಸಂಶೋಧಕರು ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಆಯುರ್ವೇದ ವೈದ್ಯರಾದ ಡಾ.ಬಿ.ನಂಜುಂಡಸ್ವಾಮಿ ಅವರು ಸಾಮಾಜಿಕ ಸಮನ್ವಯತೆ ಕುರಿತು ಮಾತನಾಡಿದರು. ಕುಂದೂರುಮಠದ ಶೈವ ಸಂಶೋಧನಾ ಸಂಸ್ಥೆಯ ನಿರ್ದೇಶಕ ವಿದ್ವಾನ್ ಡಾ.ಶರತ್‌ಚಂದ್ರ ಸ್ವಾಮಿ ಧಾರ್ಮಿಕ ಸಮನ್ವಯತೆ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT