ಶನಿವಾರ, ಫೆಬ್ರವರಿ 27, 2021
30 °C
ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ ಗ್ರಾಮ: ಮೂಲ ಸೌಕರ್ಯ ಕಲ್ಪಿಸದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

ಭಿಕ್ಷುಕನನ್ನು ಚುನಾವಣೆಗೆ ನಿಲ್ಲಿಸಿದ ಗ್ರಾಮಸ್ಥರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಜನಗೂಡು: ಈ ಹಿಂದೆ ಆಯ್ಕೆಯಾದವರು ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ತಾಲ್ಲೂಕಿನ ಬೊಕ್ಕಹಳ್ಳಿ ಯುವಕರು, ಗ್ರಾಮದ ಭಿಕ್ಷುಕರೊಬ್ಬರನ್ನು ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಿಸಿದ್ದಾರೆ.

ಸುಮಾರು 40 ವರ್ಷ ವಯಸ್ಸಿನ ಅಂಕ ನಾಯಕ, ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಬೊಕ್ಕಹಳ್ಳಿ ಗ್ರಾಮದಲ್ಲಿ ನಾಮಪತ್ರ ಸಲ್ಲಿಸಿರುವ ಭಿಕ್ಷುಕ. ಗ್ರಾಮದ ಕೆಲ ಯುವಕರು, ಈ ವ್ಯಕ್ತಿಗೆ ಹೊಸ ಬಟ್ಟೆ ತೊಡಿಸಿ, ಕನ್ನಡಕ ಹಾಕಿಸಿ, ಕಾರಿನಲ್ಲಿ ಕರೆದೊಯ್ದು ಉಮೇದುವಾರಿಕೆ ಸಲ್ಲಿಸಿದ್ದಾರೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನ ಇದಾಗಿದ್ದು, ಕ್ಯಾಮೆರಾ ಚಿಹ್ನೆ ಲಭಿಸಿದೆ. 

ಅವಿವಾಹಿತ ಅಂಕ ನಾಯಕ ಅಂಗವಿಕಲರಾಗಿದ್ದು, ಗ್ರಾಮದಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆಗಾಗ್ಗೆ ಊರಿನವರು ಊಟ, ಹಣ ಕೊಡುತ್ತಿರುತ್ತಾರೆ. ಸುತ್ತಮುತ್ತಲಿನ ಹೋಟೆಲ್‌ ಹಾಗೂ ಕೆಲ ಮನೆಗಳಿಗೆ ತೆರಳಿ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಿರುತ್ತಾರೆ.

‘5 ವರ್ಷಗಳಿಂದ ಗ್ರಾಮದ ಚರಂಡಿ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ಯಾವುದೇ ಮೂಲ ಸೌಲಭ್ಯ ಕಲ್ಪಿಸಿಲ್ಲ. ಆದರೆ, ಪ್ರತಿ ಬಾರಿ ಚುನಾವಣೆ ಬಂದಾಗ ಹಣ ಖರ್ಚು ಮಾಡಿ ಗೆಲ್ಲುತ್ತಾರೆ. ಚುನಾವಣೆಯಲ್ಲಿ ಹಣವಿಲ್ಲದ ವ್ಯಕ್ತಿಯೂ ಗೆಲ್ಲಬೇಕು. ಹೀಗಾಗಿ, ಈ ವ್ಯಕ್ತಿಯನ್ನು ಕಣಕ್ಕಿಳಿಸಿದ್ದೇವೆ’ ಎಂದು ಹೇಳುತ್ತಾರೆ ಗ್ರಾಮದ ಕೆಲ ಯುವಕರು. ವಿಷ್ಣುವರ್ಧನ್‌ ಅಭಿನಯದ ‘ಸಿಂಹಾದ್ರಿಯ ಸಿಂಹ’ ಸಿನಿಮಾದಲ್ಲಿ ಭಿಕ್ಷುಕನೊಬ್ಬನನ್ನು ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸುವ ದೃಶ್ಯದಿಂದ ಪ್ರೇರಣೆ ಪಡೆದಿದ್ದೇವೆ ಎನ್ನುತ್ತಾರೆ.

ಡಿ.27ರಂದು ಚುನಾವಣೆ ನಡೆಯಲಿದ್ದು, ಈ ಗ್ರಾಮದಲ್ಲಿ ನಾಲ್ಕು ಸ್ಥಾನಗಳಿವೆ. 9 ಮಂದಿ ಸ್ಪರ್ಧಿಸಿದ್ದಾರೆ.

‘ಅಂಕ ನಾಯಕ ಅವರಿಗೆ ಯುವಕರ ಬೆಂಬಲವಿದೆ. ಇಷ್ಟು ವರ್ಷಗಳಿಂದ  ಸೌಲಭ್ಯಗಳಿಂದ ವಂಚಿರಾಗಿರುವವರ ಮತ ಪಡೆದು ಗೆಲ್ಲುವ ಸಾಧ್ಯತೆ ಇದೆ’ ಎಂದು ಗ್ರಾಮದ ನಿವಾಸಿ ಹಾಗೂ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಬೊಕ್ಕಳ್ಳಿ ಲಿಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು