ಶನಿವಾರ, ಸೆಪ್ಟೆಂಬರ್ 19, 2020
27 °C
ಮಾದರಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕನಿಗೊಲಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ

ಮೂರು ದಶಕಗಳ ಕಾಲ ಗುಣಾತ್ಮಕ ಶಿಕ್ಷಕ ನಾಗಣ್ಣಗೆ ರಾಜ್ಯ ಪ್ರಶಸ್ತಿಯ ಗರಿ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೂವತ್ತು ವರ್ಷದಿಂದ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಶಿಕ್ಷಕರೊಬ್ಬರಿಗೆ ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಒಲಿದಿದೆ.

ಶಿಕ್ಷಕರ ದಿನಾಚರಣೆ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲಾ ವಿಭಾಗದಲ್ಲಿ ರಾಜ್ಯದ ವಿವಿಧೆಡೆಯ 20 ಶಿಕ್ಷಕರಿಗೆ ಪ್ರಶಸ್ತಿ ಘೋಷಿಸಿದ್ದು; ಮೈಸೂರು ಉತ್ತರ ಶೈಕ್ಷಣಿಕ ವಲಯದ ಹೆಬ್ಬಾಳು(ಕುಂಬಾರ ಕೊಪ್ಪಲಿನ) ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ನಾಗಣ್ಣ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಮೈಸೂರಿಗರಿಗೆ ಹೆಮ್ಮೆಯ ವಿಷಯವಾಗಿದೆ.

ನಾಗಣ್ಣ ನಾಲ್ಕು ವರ್ಷದಿಂದ ಈ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾಗಿದ್ದಾರೆ. ಒಂದರಿಂದ ಎಂಟನೇ ತರಗತಿಯವರೆಗೆ ಇಲ್ಲಿ ಶಾಲೆ ನಡೆಯುತ್ತಿದ್ದು, ಒಟ್ಟು 619 ಮಕ್ಕಳು ವ್ಯಾಸಂಗ ನಿರತರಾಗಿದ್ದಾರೆ. ಇವರಲ್ಲಿ 570 ಮಕ್ಕಳಿಗೆ ಸರ್ಕಾರ, ಖಾಸಗಿ ಸಂಸ್ಥೆಗಳ ವಿವಿಧ ಯೋಜನೆಗಳಡಿ ವಿದ್ಯಾರ್ಥಿ ವೇತನ ಸಿಕ್ಕಿರುವುದು ಸಂತಸದ ವಿಷಯ.

2019–20ನೇ ಶೈಕ್ಷಣಿಕ ಸಾಲಿನಲ್ಲೇ ಈ ಶಾಲೆಗೆ ಒಟ್ಟು 145 ವಿದ್ಯಾರ್ಥಿಗಳು ಹೊಸದಾಗಿ ದಾಖಲಾಗಿದ್ದಾರೆ. ಇವರಲ್ಲಿ 70 ವಿದ್ಯಾರ್ಥಿಗಳು ಖಾಸಗಿ ಶಾಲೆಯಿಂದ ಹೊರಬಂದು ಸರ್ಕಾರಿ ಶಾಲೆ ಸೇರಿದವರಾಗಿದ್ದಾರೆ. ಒಂದನೇ ತರಗತಿಗೆ 43 ವಿದ್ಯಾರ್ಥಿಗಳು ದಾಖಲಾಗಿರುವುದು ವಿಶೇಷ. ಖಾಸಗಿ ಶಾಲೆಗಳ ಪೈಪೋಟಿ ನಡುವೆಯೂ ಈ ಶಾಲೆ ವಿದ್ಯಾರ್ಥಿಗಳನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಖಾಸಗಿ ಶಾಲೆಗೆ ಪೈಪೋಟಿ: ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ನಾಗಣ್ಣ ಸರ್ಕಾರಿ ಶಾಲೆಯೊಂದನ್ನು ಖಾಸಗಿ ಶಾಲೆಗೆ ಸೆಡ್ಡು ಹೊಡೆಯುವಂತೆ ಕಟ್ಟಿದ್ದಾರೆ.

ಜವಾಬ್ದಾರಿ ಹೊತ್ತ ನಾಲ್ಕು ವರ್ಷದ ಅವಧಿಯಲ್ಲಿ ₹ 65 ಲಕ್ಷಕ್ಕೂ ಹೆಚ್ಚು ಮೊತ್ತದ ದೇಣಿಗೆ ಸಂಗ್ರಹಿಸಿ, ಅತ್ಯಾಧುನಿಕ ಸೌಲಭ್ಯಗಳನ್ನು ಶಾಲೆಗೆ ಕಲ್ಪಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಇದರ ಪ್ರತಿಫಲವಾಗಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಶಾಲೆಯಲ್ಲಿರುವ ಸೌಲಭ್ಯಗಳು

₹28 ಲಕ್ಷ ವೆಚ್ಚದಲ್ಲಿ ಫ್ಲ್ಯಾನ್ಸಿ ಹೈ ಪರ್ಫಾಮೆನ್ಸ್‌ ಮೆಟಿರಿಯಲ್ ಇಂಡಿಯಾ ಸಂಸ್ಥೆ ವತಿಯಿಂದ ಹೈಟೆಕ್‌ ಶೌಚಾಲಯ ನಿರ್ಮಾಣ

₹18 ಲಕ್ಷ ವೆಚ್ಚದಲ್ಲಿ ‘ಕಲಿಸು’ ಫೌಂಡೇಷನ್‌ನಿಂದ ಯೋಗ ಭವನ ನಿರ್ಮಾಣ

1000 ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಉಜ್ಜೀವನ್‌ ಫೌಂಡೇಷನ್‌ ವತಿಯಿಂದ

₹4 ಲಕ್ಷ ವೆಚ್ಚದಲ್ಲಿ ಕೈ ತೊಳೆಯುವ ತೊಟ್ಟಿ ನಿರ್ಮಾಣ

ಶಾಲಾ ಆವರಣಕ್ಕೆ ಸೋಲಾರ್ ಬೇಲಿ

₹ 1.5 ಲಕ್ಷ ವೆಚ್ಚದಲ್ಲಿ ಅತ್ಯಾಧುನಿಕ ಗ್ರಂಥಾಲಯ, 5800 ಪುಸ್ತಕಗಳು ಲಭ್ಯ

ಸ್ಮಾರ್ಟ್ ಕ್ಲಾಸ್‌ ಸಭಾಂಗಣ ಶಾಸಕರ ಅನುದಾನದಲ್ಲಿ

ಅಗಸ್ತ್ಯ ಫೌಂಡೇಷನ್‌ ಸಹಕಾರದಿಂದ ಹೈಟೆಕ್‌ ವಿಜ್ಞಾನ ಪ್ರಯೋಗಾಲಯ

ಶಾಲೆಯ ಹೊರ ಆವರಣದಲ್ಲಿ ಇಂಟರ್‌ಲಾಕ್‌ ಅಳವಡಿಕೆ

ಪ್ರತಿ ತರಗತಿ ಕೊಠಡಿಗೂ ಇಂಟರ್‌ಕಾಮ್‌ ಸೌಲಭ್ಯ

15 ಪತ್ರಿಕೆಗಳು ನಿತ್ಯವೂ

20 ಶಿಕ್ಷಕರ ತಂಡದ ಒಗ್ಗಟ್ಟಿನ ಕಾರ್ಯಾಚರಣೆ

2007ರಲ್ಲಿ ರಾಜ್ಯ ಮಟ್ಟದ ಉತ್ತಮ ಪ್ರಶಸ್ತಿ ಈ ಶಾಲೆಗೆ

ಹಲವು ಸಂಘ–ಸಂಸ್ಥೆಗಳ ಸಹಕಾರ ನಿರಂತರ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು