ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಡಿ. ಕೋಟೆ: ಕಬಿನಿ ಹಿನ್ನೀರಿನ ಬಳಿ ಬೃಹತ್‌ ಕಟ್ಟಡ, ಗ್ರಾ.ಪಂ.ನಿಂದ ನೋಟಿಸ್‌

ಅರಣ್ಯ ಇಲಾಖೆಯಿಂದಲೂ ಕ್ರಮ ಸಿದ್ಧತೆ
Last Updated 13 ಜುಲೈ 2020, 18:41 IST
ಅಕ್ಷರ ಗಾತ್ರ

ಎಚ್‌.ಡಿ.ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಬಿನಿ ಹಿನ್ನೀರಿನ ಬಳಿಯ ಪರಿಸರ ಸೂಕ್ಷ್ಮ ವಲಯದಲ್ಲಿ ಬೃಹತ್‌ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಎನ್‌.ಬೆಳತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರಾಪುರ ಗ್ರಾಮದಲ್ಲಿ ಕಾಮಗಾರಿ ನಡೆದಿದೆ. ಗಣಿ ಉದ್ಯಮಿಯೊಬ್ಬರು ಬೇನಾಮಿ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ ಎನ್ನಲಾದ ಈ ಕಟ್ಟಡ ಕೆಲಸಕ್ಕೆ ಬಿಹಾರ ರಾಜ್ಯದ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ.

ಮನೆ ನಿರ್ಮಾಣಕ್ಕೆಂದು ಪರವಾನಗಿ ಪಡೆದು ರೆಸಾರ್ಟ್‌ ನಿರ್ಮಿಸುತ್ತಿರುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈಜುಕೊಳ ನಿರ್ಮಾಣಕ್ಕೂ ಸಿದ್ಧತೆ ನಡೆದಿದ್ದಾಗಿ ಸ್ಥಳೀಯ ಮುಖಂಡ ಜವರ ನಾಯಕ ಆರೋಪಿಸಿದ್ದಾರೆ.

ಐದು ಬೆಡ್‌ ರೂಂ ಇರಬಹುದಾದ ಕಟ್ಟಡ ಒಂದು ಕಡೆ ನಿರ್ಮಾಣವಾಗುತ್ತಿದ್ದರೆ, ಮತ್ತೊಂದೆಡೆ ಕನಿಷ್ಠ 3 ಕೊಠಡಿಗಳಿರುವ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

ಅಲ್ಲದೇ, ಹಿನ್ನೀರಿನಿಂದ ಈ ಜಮೀನಿನವರೆಗೆ ಅಕ್ರಮವಾಗಿ ಕಾಲುವೆ ತೋಡಿರುವುದು ಕಂಡುಬಂದಿದೆ. ಸಮೀಪದಲ್ಲಿರುವ ಕುರುಚಲು ಗಿಡದ ಪ್ರದೇಶಕ್ಕೆ ಬೆಂಕಿ ಹಚ್ಚಿ ನಾಶ ಮಾಡಲಾಗಿದೆ. ಇದು ನೀರು ನಾಯಿಗಳ ಆವಾಸ ಸ್ಥಾನ ಕೂಡ ಎಂದು ಗ್ರಾಮಸ್ಥ ರಾಜ ನಾಯಕ ಹೇಳಿದ್ದಾರೆ.

‘ಕಾರಾಪುರ ಗ್ರಾಮದ ಸರ್ವೆ ನಂಬರ್‌ 142, 144ರಲ್ಲಿ ವಾಸದ ಮನೆ ಹೊರತುಪಡಿಸಿ ಹೆಚ್ಚಿನ ವಿಸ್ತೀರ್ಣದಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದಾಗ ವಾಸ್ತವ ಸ್ಥಿತಿ ಅರಿವಾಗಿದೆ. ಹೀಗಾಗಿ, ಭೂ ಪ‍ರಿವರ್ತನೆ ಆದೇಶ, ಕಟ್ಟಡ ಪರವಾನಗಿ, ನಿರಾಕ್ಷೇಪಣಾ ಪತ್ರವನ್ನು ಮೂರು ದಿನಗಳೊಳಗೆ ಕಚೇರಿಗೆ ನೀಡಬೇಕು’ ಎಂದು ಜುಲೈ 1ರಂದು ನರಸಿಂಹಮೂರ್ತಿ ಎಂಬುವವರ ಹೆಸರಿಗೆ, ಎನ್‌.ಬೆಳತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಹಾಗೂ ಪಿಡಿಒ ಸ್ವಾಮಿ ನೋಟಿಸ್‌ ನೀಡಿದ್ದಾರೆ.

ಮಾಲೀಕರ ಪರಿಶೀಲನೆ: ‘ಅಕ್ರಮ ಕಟ್ಟಡ ನಿರ್ಮಾಣ ಸಂಬಂಧ ಅರಣ್ಯ ಇಲಾಖೆಯಿಂದಲೂ ನೋಟಿಸ್‌ ನೀಡಲಿದ್ದೇವೆ. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಕಟ್ಟಡ ಹಾಗೂ ಜಮೀನಿನ ನಿಜವಾದ ಮಾಲೀಕರು ಯಾರೆಂಬುದನ್ನು ಪರಿಶೀಲಿಸುತ್ತಿದ್ದೇವೆ’ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿಸಿಎಫ್‌ ಡಿ.ಮಹೇಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT