ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಧಾರೆ: ಬಂಪರ್ ಬೆಳೆಯ ನಿರೀಕ್ಷೆ

ತಂಬಾಕಿನ ಕೊಯ್ಲು– ಹದಗೊಳಿಸುವಿಕೆ ಕಾರ್ಯ ಚುರುಕು: ಶುಂಠಿ ಕೃಷಿಯೂ ಇಲ್ಲುಂಟು
Last Updated 20 ಆಗಸ್ಟ್ 2021, 2:33 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ತಾಲ್ಲೂಕಿನಲ್ಲಿ ವಾಡಿಕೆಗಿಂತ ಕೊಂಚ ಕಡಿಮೆ ಮಳೆಯಾಗಿದ್ದರೂ ಉತ್ತಮ ಬೆಳೆ ಬಂದಿದ್ದು, ಇನ್ನೊಂದು ಹದ ಮಳೆಯಾದರೆ ಬಂಪರ್ ಬೆಳೆ ಸಿಗಲಿದೆ ಎಂಬ ನಿರೀಕ್ಷೆ ರೈತರದ್ದು.

ಮುಂಗಾರು ಮಳೆ ತಾಲ್ಲೂಕಿನಾದ್ಯಂತ ಉತ್ತಮ ಆರಂಭ ಕಂಡಿದ್ದರಿಂದ ವಿವಿಧ ಬೆಳೆಗೆ ಅನುಕೂಲವಾಗಿದ್ದು, ತಂಬಾಕು ಹೆಚ್ಚಿದೆ. ಕೊಯ್ಲು ನಡೆದಿದ್ದು, ಇದೇ ಭೂಮಿಯಲ್ಲಿ ರಾಗಿ, ಅಲಸಂದೆ ಇನ್ನಿತರ ಬೆಳೆ ಬೆಳೆಯಲು ರೈತರು ಸಿದ್ಧತೆ ನಡೆಸಿದ್ದಾರೆ. 8,400 ಹೆಕ್ಟೇರ್‌ನಲ್ಲಿ ಹಾರಂಗಿ ಜಲಾಶಯದಿಂದ ನೀರಾವರಿ ಸೌಲಭ್ಯ ಬಳಸಿಕೊಂಡು, ಭತ್ತ ಬೆಳೆಯಲು ಸಸಿಮಡಿ ತಯಾರಿಸಲಾಗಿದೆ.

ವಾಣಿಜ್ಯ ಬೆಳೆಗಳಾದ ತಂಬಾಕು, ಶುಂಠಿ, ಮುಸುಕಿನ ಜೋಳ ಪ್ರಮುಖ ಪಾತ್ರ ವಹಿಸುತ್ತಿದ್ದು, ತಂಬಾಕು ಬೆಳೆಯಲು ಕೃಷಿ ಕೂಲಿ ಕಾರ್ಮಿಕರು ದೊರಕದೆ ರೈತರು ತಂಬಾಕು ಕೃಷಿಯಿಂದಲೇ ವಿಮುಖರಾಗುತ್ತಿದ್ದಾರೆ. ಬೆಳೆಗಾರರು ಈ ಹಿಂದೆ ಆಂಧ್ರದಿಂದ ಕಾರ್ಮಿಕರನ್ನು ಕರೆ ತರುತ್ತಿದ್ದರು. ಕೋವಿಡ್‌ನಿಂದಾಗಿ ಅಲ್ಲಿನ ಕಾರ್ಮಿಕರು ಬರುತ್ತಿಲ್ಲ.

ರೋಗ ಬಂದ ಶುಂಠಿಗೆ ಕ್ರಿಮಿನಾಶಕ ಸಿಂಪಡಿಸಿ ರೈತರು ಬೆಳೆ ಉಳಿಸಿಕೊಂಡಿದ್ದರು. ಇದೀಗ ಕೊಯ್ಲು ನಡೆದಿದ್ದು ಧಾರಣೆ ದೊರಕುತ್ತಿಲ್ಲ. ಹಳೆಯ ಶುಂಠಿ 60 ಕೆ.ಜಿ. ಚೀಲಕ್ಕೆ ₹1,200ರಿಂದ ₹1,500 ದರದಲ್ಲಿ ಮಾರಾಟವಾಗುತ್ತಿದೆ. ಇನ್ನೂ ಹೊಸ ಶುಂಠಿಯ ಬೆಲೆ ಕೇಳೋರೇ ಇಲ್ಲ. ಉತ್ತಮ ಬೆಲೆ ದೊರೆಯದಿದ್ದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ರೈತರು ಹಿಂದಿನ ವರ್ಷದಲ್ಲಿ ಬೆಳೆದಿದ್ದ 1,94,000 ಕ್ವಿಂಟಲ್ ರಾಗಿಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಿದ್ದರು. ಆದರೆ, ಸರ್ಕಾರ ರಾಗಿ ಖರೀದಿಸಿದ್ದರೂ, ₹70 ಕೋಟಿ ಹಣವನ್ನು ರೈತರ ಖಾತೆಗಳಿಗೆ ಇನ್ನೂ ಜಮೆ ಮಾಡಿಲ್ಲ. ಅದರಲ್ಲಿ ಶೇ 20ಕ್ಕೂ ಹೆಚ್ಚು ರಾಗಿಯನ್ನು ವ್ಯಾಪಾರಸ್ಥರು ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪಿರಿಯಾಪಟ್ಟಣ ತಾಲ್ಲೂಕಿನ ಕೃಷಿ ಚಿತ್ರಣ

62,690 ಹೆಕ್ಟೇರ್‌ನಲ್ಲಿ ವಿವಿಧ ಬೆಳೆ

25,650 ಹೆಕ್ಟೇರ್‌ನಲ್ಲಿ ತಂಬಾಕು

10,460 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ

8 ಸಾವಿರ ಹೆಕ್ಟೇರ್‌ನಲ್ಲಿ ರಾಗಿ

55 ಹೆಕ್ಟೇರ್‌ನಲ್ಲಿ ಪುಷ್ಪಕೃಷಿ

1120 ಹೆಕ್ಟೇರ್‌ನಲ್ಲಿ ಶುಂಠಿ

150 ಹೆಕ್ಟೇರ್‌ನಲ್ಲಿ ಬಾಳೆ

180 ಹೆಕ್ಟೇರ್‌ನಲ್ಲಿ ತರಕಾರಿ

ಮಳೆ ವಿವರ

50 ಸೆಂ.ಮೀ:ವಾಡಿಕೆ ಮಳೆ

46.40 ಸೆಂ.ಮೀ: ಇದುವರೆಗಿನ ಮಳೆ

ಶೇ 7.3: ಮಳೆ ಕೊರತೆ

ಆಧಾರ: ಕೃಷಿ–ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT