ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟ್ಟೆಗಳ ಲೋಕದೊಳಗೆ...

Last Updated 18 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕಾರಂಜಿಕೆರೆ ಉದ್ಯಾನದಲ್ಲಿ ಈಗ ಪ್ರೇಮದ ಕಾರಂಜಿ ಚಿಮ್ಮುತ್ತಿದೆ. ವಲಸೆ ಹಕ್ಕಿಗಳ ಚಿಲಿಪಿಲಿಯೂ ಜೋರಾಗಿದೆ. ಚಿಟ್ಟೆ ಉದ್ಯಾನಕ್ಕೆ ಹೊಸ ಸ್ಪರ್ಶ ಲಭಿಸಿದ್ದು, ಪ್ರವಾಸಿಗರನ್ನು, ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ. ಅದಕ್ಕೆ ಬೋನಸ್‌ ಎಂಬಂತೆ ಕೆರೆಯಲ್ಲಿ ಚಿಮ್ಮುವ ಕಾರಂಜಿ ನಡುವೆ ದೋಣಿ ವಿಹಾರ ಮಾಡುವವರ ಸಂಖ್ಯೆ
ಹೆಚ್ಚಿದೆ.

ಹಿಂದೆ ನಿರ್ಮಿಸಲಾಗಿದ್ದ ಒಂದು ಗುಂಟೆ ವಿಸ್ತೀರ್ಣದ ಪುಟ್ಟ ದ್ವೀಪದಲ್ಲೇ ಚಿಟ್ಟೆ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ. 25ಕ್ಕೂ ಹೆಚ್ಚಿನ ಪ್ರಭೇದಗಳ ಸಾವಿರಾರು ಪಾತರಗಿತ್ತಿಗಳ ಕಲರವ ಪ್ರವಾಸಿಗರ ಮನಸೂರೆಗೊಳ್ಳುತ್ತಿದೆ. ಕಪ್ಪು, ಕಂದು, ನೀಲಿ, ಕೆಂಪು, ಹಸಿರು, ಹಳದಿ ಹೀಗೆ ಹಲವು ವರ್ಣಗಳಿಂದ ಕೂಡಿ, ರೆಕ್ಕೆಗಳ ಮೇಲೆ ನೂರಾರು ಪುಟ್ಟ–ಪುಟ್ಟ ಕಣ್ಣುಗಳು, ಹುಲಿಯಂತೆ ಕಾಣುವ ಚಿಟ್ಟೆಗಳು ನೋಡುಗರಿಗೆ ಆಕರ್ಷಕ ವಾತಾವರಣ ಸೃಷ್ಟಿಸುತ್ತಿವೆ. ಉದ್ಯಾನದಲ್ಲಿ ಚಿಟ್ಟೆಗಳ ಮನೆಗಳನ್ನು ನಿರ್ಮಿಸಿ ಸಂತಾನೋತ್ಪತ್ತಿಗೂ ಅವಕಾಶ ಕಲ್ಪಿಸಲಾಗುತ್ತಿದೆ.

ಚಿಟ್ಟೆ ಉದ್ಯಾನ ವೀಕ್ಷಣೆಗೆ ಅವಕಾಶ ಕಲ್ಪಿಸಿರುವುದು ಪರಿಸರ ಪ್ರೇಮಿಗಳಲ್ಲಿ ಹರ್ಷ ತಂದಿದೆ. ಇದರಲ್ಲಿ ಮೈಸೂರು ಮೃಗಾಲಯದ ಪ್ರಯತ್ನದ ಜೊತೆಗೆ ಪ್ರವಾಸೋದ್ಯಮ ಇಲಾಖೆಯ ಕೊಡುಗೆಯೂ ಇದೆ. ಸೆಲ್ಫಿ ಪಾಯಿಂಟ್‌, ಚಿಟ್ಟೆಯ ಮುಖವುಳ್ಳ ಅಡವಿ ದೇವಿಯ ಮುಖ ಇರುವ ಪ್ರತಿಮೆ, ಸಣ್ಣ ಝರಿ ಜೊತೆಗೆ ಹೂವಿನ ಗಿಡ ಹಾಗೂ ಹಣ್ಣಿನ ಗಿಡವನ್ನು ಬೆಳೆಸಲಾಗುತ್ತಿದೆ. ಚಿಟ್ಟೆಯಾಕಾರದ ಬೆಂಚ್‌ ಕೂಡ ಇದೆ.

ಕಾರಂಜಿಕೆರೆಯ ಆವರಣದಲ್ಲಿ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಕಟ್ಟಡಕ್ಕೆ ಹೊಂದಿಕೊಂಡಂತೆ ಎಂಟು ವರ್ಷಗಳ ಹಿಂದೆಯೇ ಚಿಟ್ಟೆಗಳ ಉದ್ಯಾನವನ ನಿರ್ಮಿಸಲಾಗಿತ್ತು. ಬಣ್ಣಬಣ್ಣದ ಚಿಟ್ಟೆಗಳೂ ಇದ್ದವು. ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತಿತ್ತು. ಆದರೆ, ಮೂರು ವರ್ಷಗಳ ಹಿಂದೆ ಕಾರಂಜಿಕೆರೆಗೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬರು ಚಿಟ್ಟೆ ಉದ್ಯಾನದ ಬಳಿ ಆತ್ಮ‌ಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ, ಚಿಟ್ಟೆ ಉದ್ಯಾನಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಕ್ರಮೇಣ ನಿರ್ವಹಣೆ ಇಲ್ಲದೆ ಸೊರಗಿ ಹೋಗಿತ್ತು. ಅದಿಕ್ಕೀಗ ಪುನಶ್ಚೇತನ ಭಾಗ್ಯ
ಲಭಿಸಿದೆ.

ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ವಿಶ್ವದರ್ಜೆಯ ಅಕ್ವೇರಿಯಂ (ಮತ್ಸ್ಯಾಲಯ) ನಿರ್ಮಾಣಕ್ಕೆ ಪ್ರಕ್ರಿಯೆ ಆರಂಭವಾಗಿದೆ. ಇದು ಆರಂಭವಾದರೆ ಮತ್ತಷ್ಟು ಆಕರ್ಷಣೀಯವಾಗಲಿದೆ. ಜೊತೆಗೆ ಮೃಗಾಯಲಯದಿಂದ ಕಾರಂಜಿ ಕೆರೆ ಪ್ರಕೃತಿ ಉದ್ಯಾನಕ್ಕೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗವೂ ಇದೆ.

‘ಹಿಂದೆ ಇದ್ದ ಚಿಟ್ಟೆ ಉದ್ಯಾನವನ್ನು ಅಭಿವೃದ್ಧಿಪಡಿಸಿ ಹೊಸ ರೂಪ ನೀಡಿದ್ದೇವೆ. ಆಕರ್ಷಣೆಗಿಂತ ಜನರಿಗೆ ಅರಿವು ಮೂಡಿಸುವ ಉದ್ದೇಶ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಚಿಟ್ಟೆಗಳ ಕುರಿತು ಅಕ್ಷರ ರೂಪದಲ್ಲೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು’ ಎನ್ನುತ್ತಾರೆ ಮೈಸೂರು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್‌ ಕುಲಕರ್ಣಿ.

ಕುಕ್ಕರಹಳ್ಳಿ ಕೆರೆಯಲ್ಲೂ ಚಿಟ್ಟೆ ಉದ್ಯಾನ ಆರಂಭಿಸಲು ಬಹಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತು. ಆದರೆ, ಅದಕ್ಕೆ ಕಾಲ ಕೂಡಿ ಬಂದಿಲ್ಲ. ಅದೇನೇ ಇರಲಿ, ಚಿಟ್ಟೆ ಉದ್ಯಾನ ಅಭಿವೃದ್ಧಿ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮೈಸೂರು ನಗರಿಯ ಮತ್ತೊಂದು ಹೊಸ ಬಾಗಿಲು ತೆರೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT