ರಂಗಾಯಣದಲ್ಲಿ ಚಿಣ್ಣರ ಚಿಲಿಪಿಲಿ

ಸೋಮವಾರ, ಏಪ್ರಿಲ್ 22, 2019
31 °C
ಚಿಣ್ಣರಿಗೆ ಸಂಗೀತ ದೀಕ್ಷೆ ನೀಡಿದ ಗಾಯಕ ರಾಮಚಂದ್ರ ಹಡಪದ

ರಂಗಾಯಣದಲ್ಲಿ ಚಿಣ್ಣರ ಚಿಲಿಪಿಲಿ

Published:
Updated:
Prajavani

ಮೈಸೂರು: ವನರಂಗದ ತುಂಬ ಮಕ್ಕಳ ಕಲರವ. ನಿಮಿಷಕ್ಕೊಮ್ಮೆ ಓಹೋ... ಎಂಬ ಹರ್ಷೋದ್ಗಾರ. ಪೋಷಕರಂತೂ ಮಕ್ಕಳನ್ನು ಸಮಾಧಾನಪಡಿಸುವಲ್ಲಿ ನಿರತರಾಗಿದ್ದುರ. ಅಷ್ಟರಲ್ಲಿ ವೇದಿಕೆ ಹಿಂದಿನಿಂದ ಕಂಸಾಳೆಯ ಸದ್ದು. ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ ವಿದ್ಯಾರ್ಥಿಗಳು ಸಾಹಸ ದೃಶ್ಯಗಳನ್ನು ಪ್ರದರ್ಶಿಸಿದರು. ಇದನ್ನು ಕಂಡ ಮಕ್ಕಳು ಕುಳಿತಲ್ಲೇ ಚಪ್ಪಾಳೆ ಹೊಡೆಯುತ್ತಾ ಸಂಭ್ರಮಿಸಿದರು.

ರಂಗಾಯಣದ ವನರಂಗದಲ್ಲಿ ಶನಿವಾರ ಚಾಲನೆಗೊಂಡ ‘ಚಿಣ್ಣರ ಮೇಳ’ದಲ್ಲಿ ಕಂಡ ದೃಶ್ಯವಿದು. ಕಲಾವಿದ ಬಾರುಲ್‌ ಇಸ್ಲಾಂ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಮೇಳ ಉದ್ಘಾಟಿಸಿದರು. ಈ ಸಂಭ್ರಮದಲ್ಲಿ ಚಿಣ್ಣರೂ ಭಾಗಿಯಾಗಿದರು. ಕೈಗೆ ನೀರು ಹಾಕಿಕೊಂಡು ಎರಚಾಡುತ್ತಾ ಕುಣಿದು ಕುಪ್ಪಳಿಸಿದರು. ರಂಗಾಯಣದ ನಿರ್ದೇಶಕರಾದ ಭಾಗೀರಥಿಬಾಯಿ ಕದಂ, ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಹಾಜರಿದ್ದರು.

ಗಾಯಕ ರಾಮಚಂದ್ರ ಹಡಪದ ಅವರು ‘ಕಾಯೌ ಶ್ರೀಗೌರಿ’, ‘ಕರುಣಾಳು ಬಾ ಬೆಳಕೆ’ ಹಾಗೂ ‘ಲೊಳ ಲೊಟ್ಟೆ’ ಗೀತೆಗಳನ್ನು ಹೇಳಿಕೊಡುವ ಮೂಲಕ ಸಾಂಕೇತಿಕವಾಗಿ ಚಿಣ್ಣರ ಮೇಳ ಉದ್ಘಾಟಿಸಿದರು.

ಬೇಸಿಗೆ ಬಂತೆಂದರೆ ನಗರದಲ್ಲಿ ಮಕ್ಕಳ ಮನೋವಿಕಾಸಕ್ಕೆ ಬೇಕಾದ ನೂರೆಂಟು ಚಟುವಟಿಕೆಗಳು ಗರಿಗೆದರುತ್ತವೆ. ವರ್ಷವಿಡೀ ಪಠ್ಯದ ಗುಂಗಿನಲ್ಲಿ ಕಳೆದುಹೋದ ಮಕ್ಕಳನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ಯುವ ಸಮಯವೂ ಇದಾಗಿದೆ. ಹಾಡುತ್ತ, ಕುಣಿಯುತ್ತ ಕಲಿಯುವುದೆಂದರೆ ಮಕ್ಕಳಿಗಂತೂ ಅಚ್ಚುಮೆಚ್ಚು. ಹೀಗಾಗಿಯೇ ಮೈಸೂರಿನ ರಂಗಾಯಣವೂ ಏ.13ರಿಂದ ಮೇ 8ರ ವರೆಗೆ ‘ಚಿಣ್ಣರ ಮೇಳ’ವನ್ನು ಹಮ್ಮಿಕೊಂಡಿದೆ.

ಈ ಬಾರಿ ‘ಕಾಯಕ ಕೌಶಲ ಕರ್ತವ್ಯ’ ಎಂಬ ಘೋಷವಾಕ್ಯದೊಂದಿಗೆ ಮೇಳ ಆರಂಭಿಸಿದ್ದು, 6ರಿಂದ 14 ವರ್ಷ ವಯೋಮಾನದ ಸುಮಾರು 450 ಮಕ್ಕಳು ಭಾಗವಹಿಸಿದ್ದಾರೆ. ರಂಗಾಯಣ ಆವರಣವನ್ನು ವಿಶಿಷ್ಟ ವಸ್ತುಗಳಿಂದ ವಿನ್ಯಾಸಗೊಳಿಸಿದ್ದು, ಮಕ್ಕಳು ತಂಗಲು ಗುಡಿಸಲು ಮಾದರಿಯ ಸೂರುಗಳನ್ನು ಸಿದ್ಧಪಡಿಸಲಾಗಿದೆ.

ಮಕ್ಕಳ ಕ್ರಿಯಾಶೀಲತೆಯನ್ನು ಮಾನಸಿಕವಾಗಿ ಸದೃಢಗೊಳಿಸಲು ರಂಗ ಚಟುವಟಿಕೆಗಳ ಜೊತೆಗೆ, ಮಕ್ಕಳಿಂದ ಅಡುಗೆ ಮಾಡಿಸುವುದು, ಹೊಲಿದ ಬಟ್ಟೆಯನ್ನು ಬಿಡಿಸುವುದು, ವಿಡಿಯೋ ಮೇಕಿಂಗ್‌, ರೈತರೊಂದಿಗೆ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು, ಆಲೆ ಮನೆಗೆ ಭೇಟಿ ನೀಡಿ ಕಬ್ಬಿನ ಹಾಲಿನಿಂದ ಬೆಲ್ಲ ತಯಾರಾಗುವ ಬಗ್ಗೆ ತಿಳಿದುಕೊಳ್ಳವುದು, ಸೈಕಲ್‌ ರಿಪೇರಿ ಮಾಡುವುದು ಇತ್ಯಾದಿ ಚಟುವಟಿಕೆಗಳು ನಡೆಯಲಿವೆ. ಇಂತಹ ಚಿಣ್ಣರ ಮೇಳದ ಸೊಬಗನ್ನು ಮೈಸೂರಿಗರು ಕಣ್ತುಂಬಿಕೊಳ್ಳಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !