ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದೇವದಲ್ಲಿ 4ನೇ ಕ್ಯಾಥ್‌ಲ್ಯಾಬ್: ಮಂಜುನಾಥ್‌

Last Updated 20 ಜುಲೈ 2022, 14:15 IST
ಅಕ್ಷರ ಗಾತ್ರ

ಮೈಸೂರು:‌ ‘ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಹೃದಯ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ, ಮತ್ತಷ್ಟು ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಒಂದೂವರೆ ತಿಂಗಳಲ್ಲಿ 4ನೇ ಕ್ಯಾಥ್‌ಲ್ಯಾಬ್ ಅನ್ನು ಪ್ರಾರಂಭಿಸಲಾಗುವುದು’ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರನ್ನಾಗಿ ಸರ್ಕಾರವು ಒಂದು ವರ್ಷದವರೆಗೆ ಮುಂದುವರಿಸಿದ ಹಿನ್ನೆಲೆಯಲ್ಲಿ, ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಕೆ.ಎಸ್.ಸದಾನಂದ ಅವರಿಂದ ಬೆಂಗಳೂರಿನಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಮೈಸೂರು ಆಸ್ಪತ್ರೆಗೆ ಈಗಾಗಲೇ ನಿತ್ಯ 700ರಿಂದ 800 ಹೊರ ರೋಗಿಗಳು ಬರುತ್ತಿದ್ದಾರೆ. ಪ್ರತಿದಿನ 35ರಿಂದ 40 ಕ್ಯಾಥ್‌ಲ್ಯಾಬ್ ಪ್ರಕ್ರಿಯೆ (‍ಪ್ರೊಸೀಸರ್ಸ್‌)ಗಳು ನಡೆಯುತ್ತಿವೆ. ಇದರಿಂದ ಜನಸಾಮಾನ್ಯರು ಕಾಯುವುದನ್ನು ಕಡಿಮೆ ಮಾಡಲು ಮತ್ತು ತಜ್ಞ ವೈದ್ಯರ ಮೇಲಿನ ಒತ್ತಡ ತಗ್ಗಿಸಲು ಹೊಸ ಕ್ಯಾಥ್‌ಲ್ಯಾಬ್ ಪ್ರಾರಂಭಿಸಲಿದ್ದೇವೆ’ ಎಂದು ಹೇಳಿದರು.

‘ಆಗಸ್ಟ್ 4ನೇ ವಾರದಲ್ಲಿ ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಜಯದೇವ ಸ್ಯಾಟಲೈಟ್ ಕೇಂದ್ರ ತೆರೆಯಲಾಗುತ್ತದೆ. ಇದರಲ್ಲಿ ಕ್ಯಾಥ್‌ಲ್ಯಾಬ್, ಹೊರ ರೋಗಿಗಳ ವಿಭಾಗ ಹಾಗೂ ಐಸಿಯು ಇರುತ್ತದೆ. ಇದರಿಂದ ಆಭಾಗದ ಜನರಿಗೆ ಅನುಕೂಲ ಆಗುತ್ತದೆ. ಕಲಬುರ್ಗಿಯಲ್ಲಿ 150 ಹಾಸಿಗೆಗಳ ಸಾಮರ್ಥ್ಯ ಜಯದೇವ ಆಸ್ಪತ್ರೆ ಕಾಮಗಾರಿ ಪ್ರಗತಿಯಲ್ಲಿದ್ದು, ವರ್ಷದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ಹುಬ್ಬಳಿಯಲ್ಲಿ 400 ಹಾಸಿಗೆಗಳ ಸಾಮರ್ಥ್ಯದ ಜಯದೇವ ಆಸ್ಪತ್ರೆ ಕಾಮಗಾರಿ ಪ್ರಾರಂಭಿಸಬೇಕಿದೆ. ಇದಕ್ಕೆ ಆಡಳಿತಾತ್ಮಕ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆಗಸ್ಟ್ ಕೊನೆ ವಾರದಲ್ಲಿ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ’ಎಂದರು.

‘ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ದೊರಕಿಸುತ್ತಿರುವುದು ಸಂತೋಷದ ವಿಷಯ. ಸರ್ಕಾರವು ನಮ್ಮ ಕಾರ್ಯವೈಖರಿ ಹಾಗೂ ಸಾಧನೆ ಗುರುತಿಸಿ ಸೇವಾವಧಿಯನ್ನು ವರ್ಷದ ಅವಧಿಗೆ ವಿಸ್ತರಿಸಿದೆ’ ಎಂದು ಹೇಳಿದರು.

ಡಾ.ಅನುಸೂಯಾ ಮಂಜುನಾಥ್, ನರ್ಸಿಂಗ್ ಸೂಪರಿಂಟೆಂಡೆಂಟ್‌ ಹರೀಶ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT