ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕಾಭಿವೃದ್ಧಿಗೆ ‘ಚಿಯಾ’ ಬೆಳೆ ವರದಾನ

ಕಾಡಂಚಿನ ರೈತರಿಗೆ ಮಾದರಿಯಾದ ಸ್ನಾತಕೋತ್ತರ ಪದವೀಧರ ಕೃಷಿಕ ತನುಜ್ ಗೌಡ
Last Updated 28 ಫೆಬ್ರುವರಿ 2021, 5:04 IST
ಅಕ್ಷರ ಗಾತ್ರ

ಹುಣಸೂರು: ಅರೆಮಲೆನಾಡು ಪ್ರದೇಶದಲ್ಲಿ ವಾಣಿಜ್ಯ ಬೇಸಾಯಕ್ಕೆ ಜಾರಿದ ಕೃಷಿಕರು ಶುಂಠಿ, ತಂಬಾಕು ಬೆಳೆಗೆ ಒತ್ತು ನೀಡಿ ಆರ್ಥಿಕ ಸ್ಥಿತಿವಂತರಾಗುವ ದಿಕ್ಕಿನಲ್ಲಿ ಮುಂದಾಗಿ ಏಳು ಬೀಳು ಕಂಡಿದ್ದು ಇದೀಗ ಬಹು ಬೇಡಿಕೆ ಬೆಳೆ ‘ಚಿಯಾ’ ಧಾನ್ಯ ಬೆಳೆಯುವ ಕಡೆಗೆ ಮುಖ ಮಾಡಿದ್ದಾರೆ.

ಹೌದು...! ಆರ್ಥಿಕವಾಗಿ ಸದೃಢರಾಗುವ ದಿಕ್ಕಿನಲ್ಲಿ ರೈತ ವಾಣಿಜ್ಯ ಬೇಸಾಯಕ್ಕೆ ಒಲವು ತೋರಿ, ರಾಗಿ ಬೇಸಾಯದ ಮಾದರಿಯಲ್ಲೇ ಬೆಳೆಯಬಹುದಾದ ‘ಚಿಯಾ’ ಬೇಸಾಯಕ್ಕೆ ಮುಂದಾಗಿದ್ದಾರೆ. ಔಷಧಿ ಗುಣಲಕ್ಷಣ ಹಾಗೂ ಪೌಷ್ಟಿಕಾಂಶ ಇರುವ ಚಿಯಾ, ದಕ್ಷಿಣ ಅಮೆರಿಕ ದೇಶದಿಂದ ವಿವಿಧ ದೇಶಗಳತ್ತ ವಾಲಿದೆ. ಈ ಬೆಳೆ ಜಾನುವಾರು ಅಥವಾ ಕಾಡುಪ್ರಾಣಿಗಳ ಹಾವಳಿ ಇಲ್ಲದೆ ನೆಮ್ಮದಿಯಿಂದ ರೈತ ಬೆಳೆಯಬಹುದಾಗಿದೆ.

ತಾಲ್ಲೂಕಿನ ಕಾಡಂಚಿನ ಹಳೆಪೆಂಜಹಳ್ಳಿ ಗ್ರಾಮದ ಸ್ನಾತಕೋತ್ತರ ಪದವೀಧರ ಯುವ ಪ್ರಗತಿಪರ ರೈತ ತನುಜ್ ಗೌಡ, ಕಾಡು ಪ್ರಾಣಿಗಳ ಹಾವಳಿಯಿಂದ ತತ್ತರಿಸಿ, ಅಂತರ್ಜಾಲದಲ್ಲಿ ಚಿಯಾ ಬೆಳೆ ಕುರಿತು ಮಾಹಿತಿ ಸಂಗ್ರಹಿಸಿ, ಬಿತ್ತನೆ ಬೀಜ ಖರೀದಿಸಿ ಈ ಬೆಳೆ ಬೆಳೆದು ಸ್ಥಳೀಯ ರೈತರಿಗೆ ಮಾದರಿಯಾಗಿದ್ದಾರೆ.

‘ರಾಗಿ ಬೇಸಾಯದ ಮಾದರಿಯಲ್ಲೇ ಚಿಯಾ ಬೆಳೆಯಬಹುದು. ಅತಿಯಾದ ನೀರಿನ ಅವಲಂಬನೆ ಇಲ್ಲದ ಬೆಳೆಯುವ ಬೆಳೆ ಇದಾಗಿದೆ’ ಎಂದು ತನುಜ್ ಹೇಳಿದರು.

ಬೇಸಾಯ: ಅಂತರರಾಷ್ಟ್ರಿಯ ಮಟ್ಟದಲ್ಲಿ ಬಹು ಬೇಡಿಕೆ ಇರುವ ಸಿರಿಧಾನ್ಯವಾಗಿದ್ದು, ಒಣ ಹವಾಮಾನದಲ್ಲಿ, ವಾರಕ್ಕೊಂದು ಬಾರಿ ತುಂತುರು ನೀರಾವರಿ ನೀಡಿದರೆ ಸಾಕು. 90 ರಿಂದ 100 ದಿನದಲ್ಲಿ ಫಸಲು ಪಡೆಯಬಹುದು. ಆದರೆ, ಮುಂಗಾರು ಬೇಸಾಯಕ್ಕೆ ಯೋಗ್ಯವಲ್ಲ.

ಒಂದು ಎಕರೆ ಪ್ರದೇಶಕ್ಕೆ ₹ 3 ರಿಂದ ₹ 4 ಸಾವಿರ ವೆಚ್ಚ ಬರಲಿದೆ. ಪೈರು ಬೆಳೆಸಿ ನಾಟಿ ಅಥವಾ ಬಿತ್ತನೆ ಬೀಜ ನೇರವಾಗಿ ಸಾಲು ಬಿಟ್ಟು ಬೆಳೆಯಬಹುದು. ಒಮ್ಮೆ ಮಾತ್ರ ರಾಸಾಯನಿಕ ಗೊಬ್ಬರ ನೀಡಿದೆ ಸಾಕು.

ಸ್ಥಳಿಯ ವಾತಾವರಣಕ್ಕೆ ಬೆಳೆಯಬಹುದಾದ ವಾಣಿಜ್ಯ ಬೆಳೆ ಚಿಯಾ ಎಕರೆಗೆ 4 ರಿಂದ 5 ಕ್ವಿಂಟಲ್ ಇಳುವರಿ ಸಿಗಲಿದೆ. ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹ 9 ಸಾವಿರದಿಂದ ₹ 20 ಸಾವಿರದವರೆಗೆ ಮಾರಾಟವಾಗಲಿದೆ ಎಂದರು ತನುಜ್‌ ಗೌಡ.

ಪ್ರಯೋಜನ: ಚಿಯಾ ಧಾನ್ಯದಲ್ಲಿ ಅಧಿಕ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಫಾಸ್ಫರಸ್ ಇರಲಿದೆ. 25 ಗ್ರಾಂ ಚಿಯಾ ಧಾನ್ಯದಲ್ಲಿ 131 ಕ್ಯಾಲರಿ, 8.4 ಗ್ರಾಂ ಕೊಬ್ಬು, 13.07 ಗ್ರಾಂ ಕಾರ್ಬೋಹೈಡ್ರೇಟ್, 11.2 ಗ್ರಾಂ ಫೈಬರ್ ಮತ್ತು 5.6 ಗ್ರಾಂ ಪೌಷ್ಟಿಕಾಂಶ ಸಿಗಲಿದೆ.

‘ಈ ಧಾನ್ಯ ಸೇವನೆಯಿಂದ ಮೂಳೆ ಗಟ್ಟಿ, ರಕ್ತದ ಒತ್ತಡ ನಿಯಂತ್ರಣ, ರಕ್ತದಲ್ಲಿ ಸಕ್ಕರೆ ಅಂಶ ನಿಯಂತ್ರಣ, ಸಕ್ಕರೆ ಕಾಯಿಲೆ ನಿಯಂತ್ರಣ, ಉತ್ತಮ ಪಚನಕ್ರಿಯೆಗೆ ಸಹಕಾರಿ ಆಗಲಿದೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿದೆ’ ಎಂಬುದನ್ನು ಅರಿತು ಬೆಳೆಯಲು ಶುರು ಮಾಡಿದೆ ಎಂದುಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT