ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಪದಗ್ರಹಣ; ಕಾರ್ಯಕರ್ತರ ಸಂಭ್ರಮ

ನಗರದ ವಿವಿಧೆಡೆ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆ
Last Updated 2 ಜುಲೈ 2020, 14:20 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್‌ ಅಧಿಕಾರ ಸ್ವೀಕರಿಸುವ ಸಮಾರಂಭದ ನೇರ ಪ್ರಸಾರವನ್ನು ಗುರುವಾರ ಪಕ್ಷದ ಕಾರ್ಯಕರ್ತರು, ಮುಖಂಡರು ವೀಕ್ಷಿಸಿದರು.

ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧೆಡೆ ಪಕ್ಷದ ಕಚೇರಿ, ಸಮುದಾಯ ಭವನ, ಮುಖಂಡರ ನಿವಾಸ ಮತ್ತು ಸಭಾಂಗಣಗಳಲ್ಲಿ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ನಗರದ ಕಾಂಗ್ರೆಸ್‌ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖಂಡರು, ಕಾರ್ಯಕರ್ತರು ಒಳಗೊಂಡಂತೆ ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡರು. ಎರಡು ಬೃಹತ್‌ ಸ್ಕ್ರೀನ್‌ಗಳನ್ನು ಅಳವಡಿಸಲಾಗಿತ್ತು. ಒಂದರಲ್ಲಿ ಜೂಮ್‌ ಆ್ಯಪ್‌ ಮೂಲಕ ಲೈವ್‌ ಕಾರ್ಯಕ್ರಮ ಹಾಗೂ ಇನ್ನೊಂದರಲ್ಲಿ ಟಿವಿ ಚಾನೆಲ್‌ಗಳಲ್ಲಿ ಬಿತ್ತರವಾಗುತ್ತಿದ್ದ ನೇರ ಪ್ರಸಾರ ಕಾರ್ಯಕ್ರಮವನ್ನು ತೋರಿಸಲಾಯಿತು.

ಆರಂಭದಲ್ಲಿ ಡಿ.ಕೆ.ಶಿವಕುಮಾರ್‌ ಅವರ ರಾಜಕೀಯ ಜೀವನದ ಹಾದಿಯನ್ನು ಕಿರುಚಿತ್ರದ ಮೂಲಕ ಪ್ರಸಾರ ಮಾಡಲಾಯಿತು. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮತ್ತು ದಿನೇಶ್‌ ಗುಂಡೂರಾವ್‌ ಅವರ ಭಾಷಣಗಳ ಬಳಿಕ ಪದಗ್ರಹಣ ನೆರವೇರಿತು.

ದಿನೇಶ್ ಗುಂಡೂರಾವ್ ಅವರಿಂದ ಪಕ್ಷದ ಧ್ವಜವನ್ನು ಪಡೆದ ಡಿ.ಕೆ.ಶಿವಕುಮಾರ್‌ ಅವರು ಅದನ್ನು ಎತ್ತಿಹಿಡಿಯುತ್ತಿದ್ದಂತೆಯೇ ಕಾರ್ಯಕರ್ತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಎಲ್ಲರೂ ಸಂವಿಧಾನ ಪೀಠಿಕೆ ಪಠಣ ಮಾಡಿದರು. ಇದೇ ವೇಳೆ ಸಾಮೂಹಿಕ ಪ್ರತಿಜ್ಞೆ ಕೈಗೊಳ್ಳಲಾಯಿತು. ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ ಅವರು ಸಂವಿಧಾನದ ಪೀಠಿಕೆಯನ್ನು ಹಾಗೂ ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದ ಉದ್ಘಾಟನೆ ವೇಳೆ ಪಕ್ಷದ ಮುಖಂಡರು ಮತ್ತು ಮೈಸೂರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳ ಜತೆ ಒಬ್ಬರು ಪೌರಕಾರ್ಮಿಕ, ಆಟೊ ಚಾಲಕ ಮತ್ತು ಹೋಟೆಲ್‌ ಮಾಣಿ ಕೂಡಾ ದೀಪ ಬೆಳಗಿಸಿದರು.

ಕಾಂಗ್ರೆಸ್‌ ಮುಖಂಡ ವಾಸು ಮಾತನಾಡಿ, ‘ರಾಜ್ಯದಾದ್ಯಂತ 10 ಲಕ್ಷ ಕಾರ್ಯಕರ್ತರು ಆನ್‌ಲೈನ್‌ ವೇದಿಕೆ ಮೂಲಕ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ರೀತಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಅವಕಾಶ ಯಾರಿಗೂ ಲಭಿಸಿಲ್ಲ. ಡಿಕೆಶಿ ಅವರಿಗೆ ವಿಶೇಷ ಗೌರವ ದೊರೆತಿದೆ. ದೇಶದಲ್ಲೇ ಮೊದಲ ಬಾರಿ ಇಂತಹ ಕಾರ್ಯಕ್ರಮ ನಡೆದಿದೆ’ ಎಂದರು.

ಕೆಪಿಸಿಸಿ ವಕ್ತಾರರಾದ ಎಚ್‌.ಎ.ವೆಂಕಟೇಶ್, ಎಂ.ಲಕ್ಷ್ಮಣ, ಮಂಜುಳಾ ಮಾನಸ, ಮುಖಂಡರಾದ ಆತ್ಮಾನಂದ, ಎಂ.ಶಿವಣ್ಣ, ಶಂಕರೇಗೌಡ, ಪುಷ್ಪಲತಾ ಚಿಕ್ಕಣ್ಣ ಮತ್ತಿತರರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT