ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖಿಲ್‌ ಹೆಸರು ಪ್ರಸ್ತಾಪಕ್ಕೆ ಆಕ್ರೋಶ

ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರ ಗದ್ದಲ
Last Updated 9 ಏಪ್ರಿಲ್ 2019, 19:07 IST
ಅಕ್ಷರ ಗಾತ್ರ

ಕೆ.ಆರ್.ನಗರ: ಚುನಾವಣಾ ಪ್ರಚಾರ ಕ್ಕಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಏ.13ರಂದು ಕೆ.ಆರ್.ನಗರಕ್ಕೆ ಬರಲಿದ್ದು, ಈ ಸಂಬಂಧ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ನಾಮಧಾರಿಗೌಡ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಭೆ ಆಯೋಜಿಸಲಾಗಿತ್ತು.

ರಾಹುಲ್ ಗಾಂಧಿ ಅವರ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು. ಹೈಕಮಾಂಡ್ ಆದೇಶ ದಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಕೆಲಸ ಮಾಡಬೇಕಾಗಿದೆ ಎಂದು ಕೆಪಿಸಿಸಿ ಕಾರ್ಯಕಾರಣಿ ಸಮಿತಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.

ಇದಕ್ಕೆ ಮುಖಂಡರು ಹಾಗೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಭೆಯಲ್ಲಿ ರಾಹುಲ್‌ ಗಾಂಧಿ ಬಗ್ಗೆ ಮಾತ್ರ ಮಾತನಾಡಬೇಕು. ನಿಖಿಲ್ ಕುಮಾರಸ್ವಾಮಿಯಾಗಲಿ, ಸಚಿವ ಡಿ.ಕೆ.ಶಿವಕುಮಾರ್‌ ಆಗಲಿ ಯಾರ ಹೆಸರನ್ನೂ ಪ್ರಸ್ತಾಪಿಸಬಾರದು ಎಂದು ಪುರಸಭೆ ಮಾಜಿ ಸದಸ್ಯ ಸುಬ್ರಹ್ಮಣ್ಯ ಏರುಧ್ವನಿಯಲ್ಲಿ ಕೂಗಿದರು.

ಇದಕ್ಕೆ ಧ್ವನಿಗೂಡಿಸಿದ ಕಾರ್ಯಕರ್ತರು, ಮುಖಂಡರು ವೇದಿಕೆ ಬಳಿ ತೆರಳಿ ಪಕ್ಷದ ನಾಯಕರೊಂದಿಗೆ ವಾಗ್ವಾದ ನಡೆಸಿದರು.

ಕಾಂಗ್ರೆಸ್ ಸಮಿತಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್, ದೊಡ್ಡಸ್ವಾಮೇ ಗೌಡ, ಜಿ.ಪಂ ವಿರೋಧ ಪಕ್ಷದ ನಾಯಕ ಡಿ.ರವಿಶಂಕರ್, ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್ ಕಾರ್ಯಕರ್ತರನ್ನು ಸಮಾಧಾನ ಮಾಡಲು ಮುಂದಾದರು. ಆದರೂ ಅವರ ಮಾತಿಗೆ ಯಾವುದೇ ಮನ್ನಣೆ ನೀಡದ ಕಾರ್ಯಕರ್ತರು ಏರುಧ್ವನಿಯಲ್ಲಿ ಗದ್ದಲ, ಗಲಾಟೆ ಮಾಡಿದರು. ಇದರಿಂದ ಸಭೆ ಕೆಲ ಹೊತ್ತು ಗೊಂದಲದ ಗೂಡಾಗಿತ್ತು.

ಕೆಲ ಹೊತ್ತಿನ ಬಳಿಕ ಮಾತನಾಡಿದ ದೊಡ್ಡಸ್ವಾಮೇಗೌಡ, ‘ರಾಹುಲ್ ಗಾಂಧಿ ಅವರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಬೇಕಾಗಿದೆ. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ಮಟ್ಟದ ನಾಯಕರು ಪಾಲ್ಗೊಳ್ಳಲಿದ್ದಾರೆ. ಅಲ್ಲಿ ಗೊಂದಲ ಮಾಡಿದರೆ ನಮ್ಮ ಮರ್ಯಾದೆ ಹೋಗುತ್ತದೆ. ಅದಕ್ಕೆ ಅವಕಾಶ ನೀಡಬಾರದು’ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಉಸ್ತುವಾರಿ ಅಶ್ವಿನ್ ಕುಮಾರ್ ರೈ, ಜಿ.ಪಂ ಸದಸ್ಯರಾದ ಡಿ.ರವಿಶಂಕರ್, ಅಚ್ಯುತಾನಂದ, ಮುಖಂಡರಾದ ಎಸ್.ಪಿ.ತಮ್ಮಯ್ಯ, ಸಿ.ಪಿ.ರಮೇಶ್, ಲಾಲನಹಳ್ಳಿ ರವಿಕುಮಾರ್, ಶ್ರೀನಿವಾಸ್, ಜಿ.ಆರ್.ರಾಮೇಗೌಡ, ಕೋಳಿ ಪ್ರಕಾಶ್, ಗಂಧನಹಳ್ಳಿ ಹೇಮಂತ್, ವಕ್ತಾರ ಸೈಯದ್ ಜಾಬೀರ್, ಮೂಡಲಕೊಪ್ಪಲು ಕೃಷ್ಣೇಗೌಡ, ಕಾಳೇನಹಳ್ಳಿ ಅಪ್ಪಾಜಿಗೌಡ, ಬಸವರಾಜ್ ಹಾಗೂ ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT