ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ ದಿನಕ್ಕೆ ಕಾಂಗ್ರೆಸ್ ವಿರೋಧ ಸರಿಯಲ್ಲ: ರವಿಕುಮಾರ್

Last Updated 19 ಜೂನ್ 2022, 12:55 IST
ಅಕ್ಷರ ಗಾತ್ರ

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೈಸೂರಿನಲ್ಲಿ ಜೂನ್‌ 21ರಂದು ನಡೆಯಲಿರುವ ಯೋಗ ದಿನಕ್ಕೆ ಕಾಂಗ್ರೆಸ್‌ನವರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ‘ಕಾಂಗ್ರೆಸ್, ಜೆಡಿಎಸ್‌ನಂತೆ ನಮ್ಮ ಪಕ್ಷ ಇಲ್ಲ. ಯೋಗ ಮತ್ತು ಧರ್ಮವನ್ನು ಅಳವಡಿಸಿಕೊಂಡಿದೆ. ಯೋಗದ ಬಗ್ಗೆ ವಿಶ್ವದಾದ್ಯಂತ ಜಾಗೃತಿಗೆ ಪ್ರಯತ್ನ ಮಾಡಲಾಗುತ್ತಿದೆ. ಯೋಗದಿಂದಾಗಿ ಇಡೀ ಜಗತ್ತು ಭಾರತದತ್ತ ನೋಡುತ್ತಿರುವುದನ್ನು ವಿರೋಧಪಕ್ಷಗಳ ನಾಯಕರು ಗಮನಿಸಬೇಕು’ ಎಂದರು.

‘ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳ ಜೊತೆ ಸಂವಾದ, ಸಮಾವೇಶ ಪಕ್ಷದ ಕಾರ್ಯಕ್ರಮವಲ್ಲ. ಅದೊಂದು ಸರ್ಕಾರಿ ಕಾರ್ಯಕ್ರಮ. ವಿರೋಧ ಪಕ್ಷದವರು ಕರೆದುಕೊಂಡು ಬರುತ್ತೇವೆ ಎಂದರೂ ಜನರು ಬರುವುದಿಲ್ಲ. ಆದರೆ, ಮೋದಿ ಅವರ ಕಾರ್ಯಕ್ರಮಕ್ಕೆ ತಾವಾಗಿಯೇ ಬರುತ್ತಿದ್ದಾರೆ. ಫಲಾನುಭವಿಗಳ ಸಮಾವೇಶ ಮಾಡುತ್ತಿರುವುದಕ್ಕೆ ವಿರೋಧ ಪಕ್ಷದವರಿಗೆ ಹೊಟ್ಟೆನೋವು ಶುರುವಾಗಿದೆ’ ಎಂದು ಟೀಕಿಸಿದರು.

‘ಮೋದಿ ಆಗಮಿಸುತ್ತಿರುವ ಕಾರಣ ನಗರದ 34 ವೃತ್ತಗಳಲ್ಲಿ ಬಂಟಿಂಗ್‌, ಬ್ಯಾನರ್‌ಗಳನ್ನು ಕಟ್ಟಲಾಗಿದೆ. ಕಾರ್ಯಕ್ರಮ ಮುಗಿದ ಬಳಿಕ ಕಾರ್ಯಕರ್ತರೇ ತೆರವುಗೊಳಿಸಲಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಕಾರ್ಯಕರ್ತರು ನಿಂತು ಸ್ವಾಗತ ಕೋರಲಿದ್ದಾರೆ. ಪಕ್ಷದ ಬಾವುಟಗಳನ್ನು ಹಿಡಿದು ದಾರಿಯುದ್ದಕ್ಕೂ ಘೋಷಣೆ ಕೂಗಿ ಶುಭ ಕೋರಲು ಸಜ್ಜಾಗಿದ್ದಾರೆ’ ಎಂದರು.

‘ವಿಧಾನಪರಿಷತ್ ದಕ್ಷಿಣ ಪದವೀಧರರ ಹಾಗೂ ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ‍ಪಕ್ಷದ ಸೋಲಿನ ಬಗ್ಗೆ ಹಿರಿಯ ನಾಯಕರ ತಂಡ ರಚಿಸಿ ಪರಾಮರ್ಶೆ ಮಾಡುತ್ತೇವೆ. ಪಾಠ ಕಲಿಯುವುದೂ ಇದೆ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೂ ಮತ ಗಳಿಕೆಯಲ್ಲಿ ಹಿನ್ನಡೆ ಆಗಿರುವುದು ಅರ್ಥವಾಗುತ್ತಿಲ್ಲ. ಕಾಂಗ್ರೆಸ್‌ನವರು ವಿಪರೀತ ದುಡ್ಡು ಹಂಚಿದ್ದಾರೆ’ ಎಂದು ಆರೋಪಿಸಿದರು.

ಪಕ್ಷದ ನಗರ ಘಟಕದ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಗ್ರಾಮಾಂತರ ಅಧ್ಯಕ್ಷೆ ಮಂಗಳಾ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ದೇವನೂರು ಪ್ರತಾಪ್, ಮಾಧ್ಯಮ ವಕ್ತಾರರಾದ ಮಹೇಶ್‌ರಾಜೇ ಅರಸ್ ಹಾಗೂ ಎಂ.ಪ್ರದೀಪ್ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT