ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ತ್ಯಾಜ್ಯ ನಿರ್ವಹಣಾ ಘಟಕದ ಗಜಪ್ರಸವ

ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಭಾಗಿಯಾದ ಸಂಸದ ಪ್ರತಾಪಸಿಂಹ
Last Updated 29 ಡಿಸೆಂಬರ್ 2020, 13:33 IST
ಅಕ್ಷರ ಗಾತ್ರ

ಮೈಸೂರು: ಕಳೆದ ಕೆಲವು ಕೌನ್ಸಿಲ್‌ ಸಭೆಗಳಲ್ಲಿ ಅಂತಿಮ ನಿರ್ಣಯಕ್ಕೆ ಬಾರದೇ ಕಡತದಲ್ಲೇ ಉಳಿದಿದ್ದ ಕಟ್ಟಡ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಾಪನೆಗೆ ಸಂಸದ ಪ್ರತಾಪಸಿಂಹ ಅವರ ಮನವಿಯ ನಂತರ ಘಟಕ ಸ್ಥಾಪನೆಯ ಜವಾಬ್ದಾರಿಯನ್ನು ಸುಸ್ಥಿರ ಟ್ರಸ್ಟ್‌ಗೆ ನೀಡಲು ಕೌನ್ಸಿಲ್ ಸಭೆಯು ಮಂಗಳವಾರ ಸರ್ವಾನುಮತದ ಒಪ್ಪಿಗೆ ನೀಡಿತು.

ವಿಷಯ ಪ್ರಸ್ತಾಪವಾದಾಗ ಹಿಂದಿನ ಸಭೆಗಳಂತೆ ಕೆಲವು ಸದಸ್ಯರು ತಕರಾರು ತೆಗೆದರು. ‘ಘಟಕದ ಸ್ಥಾಪನೆಗೆ ಮುಕ್ತ ಆಹ್ವಾನ ನೀಡಿದ ಬಳಿಕ ಆಸಕ್ತಿ ತೋರಿಸಿದ 4 ಕಂಪನಿಗಳಿಗೆ ಅರ್ಹತೆ ಇರಲಿಲ್ಲ. ಹೀಗಾಗಿ, ಸುಸ್ಥಿರ ಟ್ರಸ್ಟ್‌ಗೆ ಅನುಮತಿ ನೀಡುವುದು ಅನಿವಾರ್ಯ’ ಎಂಬ ಅಧಿಕಾರಿಗಳ ಉತ್ತರವನ್ನು ಸದಸ್ಯರು ಒಪ್ಪಲಿಲ್ಲ.

ಸದಸ್ಯರಾದ ಪ್ರೇಮಾ ಹಾಗೂ ಎಸ್‌ಬಿಎಂ ಮಂಜು ಅವರು ಘಟಕದಿಂದ ಪಾಲಿಕೆಗೆ ಆದಾಯ ಬರುವಂತಾಗಬೇಕು. ಈ ನಿಯಮ ವಿಧಿಸಿ ಟೆಂಡರ್ ಕರೆಯಿರಿ ಎಂದು ಪಟ್ಟು ಹಿಡಿದರು.

ಸಂಸದ ಪ್ರತಾಪಸಿಂಹ ರಂಗ ಪ್ರವೇಶ

ಈ ವೇಳೆ ಸಭೆಗೆ ಬಂದ ಸಂಸದ ಪ್ರತಾಪಸಿಂಹ ಚರ್ಚೆಯಲ್ಲಿ ಭಾಗವಹಿಸುವ ಮೂಲಕ ಎಲ್ಲ ಸದಸ್ಯರನ್ನು ಒಪ್ಪಿಸಲು ಯತ್ನಿಸಿದರು.

‘ಸ್ವಚ್ಛ ಭಾರತ ಸಮೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಲು ಈ ಘಟಕ ಅನಿವಾರ್ಯ. ಪಾಲಿಕೆ ಸದಸ್ಯರೆಲ್ಲರೂ ತಮ್ಮ ಜವಾಬ್ದಾರಿ ಅರಿತು ಸಕರಾತ್ಮಕವಾಗಿ ಈ ಯೋಜನೆಯನ್ನು ಕಾಣಬೇಕು. ರಿಂಗ್ ರಸ್ತೆಯ ಸುತ್ತ ಇಡೀ ನಗರದ ಕಟ್ಟಡ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ರಿಂಗ್ ರಸ್ತೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಮೈಸೂರನ್ನು ಸ್ವಚ್ಛ ನಗರಿಯನ್ನಾಗಿಸಲು ಕನಿಷ್ಠ ಒಂದು ವರ್ಷಕ್ಕಾದರೂ ಸುಸ್ಥಿರ ಟ್ರಸ್ಟ್‌ಗೆ ನೀಡಿ’ ಎಂದು ಮನವಿ ಮಾಡಿದರು.

ಒಪ್ಪಿಗೆ ನೀಡಿದ ಸದಸ್ಯರು

ಪ್ರತಾಪಸಿಂಹ ಅವರ ಮನವಿಗೆ ಎಲ್ಲ ಸದಸ್ಯರೂ ಒಪ್ಪಿಗೆ ಸೂಚಿಸಿದರು. ಸದಸ್ಯ ಆರೀಫ್‌ ಮಾತನಾಡಿ, ‘ಕಟ್ಟಡ ತ್ಯಾಜ್ಯವನ್ನು ಅವರೇ ತೆಗೆದುಕೊಂಡು ಹೋಗುವ ನಿಯಮ ವಿಧಿಸಿ’ ಎಂದು ಹೇಳಿದರೆ,ಅಯೂಬ್‌ಖಾನ್ ‘ಇದೊಂದು ಒಳ್ಳೆಯ ಕೆಲಸ ಒಪ್ಪಿಗೆ ನೀಡೋಣ’ ಎಂದು ತಿಳಿಸಿದರು.

ಷರತ್ತುಗಳಿಗೆ ಒಳಪಟ್ಟು ಕಟ್ಟಣ ನಿರ್ವಹಣಾ ತ್ಯಾಜ್ಯ ಘಟಕವನ್ನು ಮುಂದಿನ 5 ವರ್ಷಗಳವರೆಗೆ ಸುಸ್ಥಿರ ಟ್ರಸ್ಟ್‌ಗೆ ಭೂಮಿ ನೀಡಲು ಮೇಯರ್ ತಸ್ನೀಂ ನಿರ್ಣಯ ಪ್ರಕಟಿಸಿದರು. ಎಲ್ಲ ಸದಸ್ಯರೂ ಮೇಜು ಕುಟ್ಟುವ ಮೂಲಕ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT