ಗುರುವಾರ , ಜೂನ್ 17, 2021
27 °C
ಕಾವಾ ಹಳೆ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ; ಹಲವು ಧ್ಯೇಯೋದ್ದೇಶ

ಕಲಾ ನಗರಿ ನಿರ್ಮಾಣ: ಕಾವಾ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಸಾಂಸ್ಕೃತಿಕ ನಗರಿ ಮೈಸೂರನ್ನು ಕಲಾ ನಗರಿಯನ್ನಾಗಿ ಬಿಂಬಿಸುವ ಜೊತೆಗೆ, ಕಾವಾ ಅಭಿವೃದ್ಧಿಗೊಳಿಸುವ ಸದುದ್ದೇಶದಿಂದ ಕಾವಾ ಹಳೆ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸಲಾಗಿದೆ’ ಎಂದು ಕಾವಾ ಅಲುಮ್ನಿ ಅಸೋಸಿಯೇಷನ್‌ನ ಅಧ್ಯಕ್ಷ ಎ.ಪಿ.ಚಂದ್ರಶೇಖರ್ ತಿಳಿಸಿದರು.

ಸಂಘದ ಮೊದಲ ಅವಧಿಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಮೈಸೂರನ್ನು ಕಲಾತ್ಮಕವಾಗಿ ಬಿಂಬಿಸುವುದು ನಮ್ಮ ಆಶಯ. ಜಿಲ್ಲಾಡಳಿತ, ಪಾಲಿಕೆ ಸಾಥ್ ನೀಡಿದರೆ ಆಯ್ದ ಸ್ಥಳಗಳಲ್ಲಿ ಚಿತ್ರ ಬಿಡಿಸುವಿಕೆ, ಕಲಾಕೃತಿ ರಚನೆಗೆ ನಾವು ಸಿದ್ಧರಿದ್ದೇವೆ’ ಎಂದು ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಂಘದ ಕಾರ್ಯದರ್ಶಿ ವೈರಮುಡಿ (ಸೂರ್ಯ) ಮಾತನಾಡಿ, ‘ಮೈಸೂರಿನಲ್ಲಿ ಅಸಂಖ್ಯಾತ ಪ್ರತಿಮೆಗಳಿವೆ. ಆದರೆ ಬಹುತೇಕ ಪ್ರತಿಮೆಗಳು ಸಮರ್ಪಕವಾಗಿಲ್ಲ. ಸ್ವಾಮಿ ವಿವೇಕಾನಂದರು, ವರನಟ ಡಾ.ರಾಜ್‌ಕುಮಾರ್‌ ಪ್ರತಿಮೆಯನ್ನೇ ಸರಿಯಾಗಿ ನಿರ್ಮಿಸಿಲ್ಲ. ಇಂತಹ ಲೋಪಗಳನ್ನು ಸರಿಪಡಿಸಲು ಸ್ಥಳೀಯ ಆಡಳಿತ ಮುಂದಾಗಬೇಕು’ ಎಂದು ಆಗ್ರಹಿಸಿದರು.

’ದಸರಾ ಕಲಾಕೃತಿ ರಚನೆಯಲ್ಲೂ ಇದೇ ಅಭಾಸವಾಗುತ್ತಿದೆ. ಕಲಾಕೃತಿ ರಚಿಸುವಿಕೆಯನ್ನು ಕಲಾವಿದರಿಗೆ ನೀಡಬೇಕು. ಸಂಬಂಧ ಪಡದವರಿಗೆ ಟೆಂಡರ್ ನೀಡುವ ಫಲವದು’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಂಘದ ವತಿಯಿಂದ ಕಾವಾ ವಿದ್ಯಾರ್ಥಿಗಳಿಗೆ ಕಲಾ ಶಿಕ್ಷಣ ಕುರಿತ ಪ್ರಾತ್ಯಕ್ಷಿಕೆಗಳು, ಕಲಾ ಸಂವಾದ, ಕಲಾ ಪ್ರದರ್ಶನ ಏರ್ಪಡಿಸುವುದು, ದೃಶ್ಯಕಲಾ ಅಭ್ಯಾಸಗಳಿಗೆ ಪೂರಕವಾಗುವಂತೆ ಕಾಲೇಜಿನ ಪರಿಸರವನ್ನು ಕಲಾತ್ಮಕವಾಗಿ ರೂಪಿಸಬಲ್ಲ ಕಾರ್ಯ ಚಟುವಟಿಕೆ ನಡೆಸುವುದು ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು, ಸಂಘದ ಸದಸ್ಯರ ಹಿತ ಹಾಗೂ ಗಂಭೀರ ಆರೋಗ್ಯಕ್ಕೆ ತುತ್ತಾದಾಗ ಧನ ಸಹಾಯವನ್ನು ಮಾಡುವುದು ಸೇರಿದಂತೆ ವಿವಿಧ ಚಟುವಟಿಕೆ ನಡೆಸುವುದು ಸಂಘದ ಧ್ಯೇಯೋದ್ದೇಶವಾಗಿದೆ‘ ಎಂದು ಖಜಾಂಚಿ ಡಾ.ಲಕ್ಷ್ಮಣಸಿಂಗ್ ಆರ್.ರಾಥೋಡ್‌ ಮಾಹಿತಿ ನೀಡಿದರು.

ಸಂಘದ ಪದಾಧಿಕಾರಿಗಳು: ಅಧ್ಯಕ್ಷ–ಎ.ಪಿ.ಚಂದ್ರಶೇಖರ್‌, ಉಪಾಧ್ಯಕ್ಷ–ಎನ್.ಚಾಂದಿನಿ, ಕಾರ್ಯದರ್ಶಿ–ವೈರಮುಡಿ, ಸಹ ಕಾರ್ಯದರ್ಶಿ–ಪಿ.ಬಿ.ಅನಿಲ್ ಕುಮಾರ್, ಖಜಾಂಚಿ–ಡಾ.ಲಕ್ಷ್ಮಣಸಿಂಗ್ ಆರ್.ರಾಥೋಡ್, ನಿರ್ದೇಶಕರಾಗಿ ರೇವಣ್ಣ, ಎಚ್.ಎಸ್.ವಿನಯ, ಎಸ್.ಎಸ್.ಮಲ್ಲಿಕಾರ್ಜುನ, ಎಂ.ಎಸ್.ಧರ್ಮೇಶ್, ಕೆ.ಶ್ವೇತಾ, ಎಂ.ಪಿ.ಹರಿದತ್, ಹರೀಶ್ ಗಂಗಾಧರ ಹೆಗಡೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.