ಮಂಗಳವಾರ, ಏಪ್ರಿಲ್ 7, 2020
19 °C
ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಗಮನ ಸೆಳೆದ ಸದಸ್ಯೆ ರಾಜೇಂದ್ರಬಾಯಿ

ಕೊರೊನಾ ವೈರಸ್ ಭೀತಿ : ಪಕ್ಷಿರಾಜಪುರ ನಿವಾಸಿಗಳಿಗೆ ಸಾಮೂಹಿಕ ಬಹಿಷ್ಕಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಕೊರೊನಾ ವೈರಸ್ ಸೋಂಕಿನ ಶಂಕೆಯ ಮೇರೆಗೆ, ತಾಲ್ಲೂಕಿನ ಪಕ್ಷಿರಾಜಪುರ ಕಾಲೊನಿಯ ನಿವಾಸಿಗಳ ಮೇಲೆ ಸುತ್ತಮುತ್ತಲಿನ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.

ನಗರದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ರಾಜೇಂದ್ರಬಾಯಿ ಅವರು ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

‘ಕೆಲಸ ಅರಸಿ ವಿದೇಶಕ್ಕೆ ಹೋಗಿದ್ದ ಪಕ್ಷಿರಾಜಪುರ ಕಾಲೊನಿಯ 15–20 ಮಂದಿ ಇತ್ತೀಚೆಗೆ ಸ್ವಗ್ರಾಮಕ್ಕೆ ಮರಳಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ವತಿಯಿಂದ ಅವರ ತಪಾಸಣೆ ನಡೆಸಲಾಗಿತ್ತು. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇಡೀ ಕಾಲೊನಿಯ ಜನರಿಗೆ ಬಹಿಷ್ಕಾರ ಹಾಕಲಾಗಿದೆ’ ಎಂದು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಿರೀಶ್‌, ‘ಕಾಲೊನಿಯ ನಿವಾಸಿಗಳ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆಯೇ ಎಂಬುದನ್ನು ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತೇವೆ. ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುವುದು’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಗಣಪತಿ ಇಂಡೋಳ್ಕರ್ ಮಾತನಾಡಿ, ‘ಕೋವಿಡ್‌– 19 ಭೀತಿಯಿಂದಾಗಿ ಜನರು ಮಾಸ್ಕ್‌ಗಳ ಮೊರೆ ಹೋಗುತ್ತಿ ದ್ದಾರೆ. ಆದರೆ, ತಾಲ್ಲೂಕಿನಲ್ಲಿ ಮಾಸ್ಕ್‌ ಗಳ ಕೊರತೆ ಎದುರಾಗಿದೆ. ಇವುಗಳ ಪೂರೈಕೆಗೆ ಆರೋಗ್ಯ ಇಲಾಖೆ ಗಮನ ಹರಿಸುತ್ತಿಲ್ಲ’ ಎಂದು ದೂರಿದರು.

ಆರೋಗ್ಯಾಧಿಕಾರಿ ಮಹದೇವ್ ಮಾತನಾಡಿ, ‘ನಗರದ 5 ಅಂಗಡಿಗಳಲ್ಲಿ 140 ಮಾಸ್ಕ್‌ಗಳು ಲಭ್ಯ ಇವೆ. ಪ್ರತಿ ಮಾಸ್ಕ್‌ ಅನ್ನು ₹30ಕ್ಕೆ ಮಾರಾಟ ಮಾಡಲಾಗುತ್ತಿದೆ’ ಎಂದರು.

ವೈದ್ಯರ ನೇಮಿಸಲಿ: ಕಾಡಂಚಿನ ಗ್ರಾಮವಾದ ನೇರಳಕುಪ್ಪೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಇದರಿಂದ ಗಿರಿಜನರು ಸೇರಿದಂತೆ ಇತರರು ಸಮಸ್ಯೆ ಎದುರಿ ಸುತ್ತಿದ್ದಾರೆ. ಈ ಸಂಬಂಧ ಶಾಸಕರ ಗಮನಕ್ಕೆ ತರಲಾಗಿದೆ. ಈ ವಿಷಯವನ್ನು ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೆ ತರಬೇಕು ಎಂದು ಸದಸ್ಯೆ ಪುಷ್ಪಾ ಗಣಪತಿ ಮನವಿ ಮಾಡಿದರು.

ಕೋವಿಡ್‌–19 ವೈರಸ್‌ನಿಂದಾಗಿ 10ನೇ ತರಗತಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿಶೇಷ ತರಬೇತಿಗೆ ತಡೆ ಬಿದ್ದಿದೆ. ತಾಲ್ಲೂಕಿನಲ್ಲಿ ಮೂರು ಪೂರ್ವ ಪರೀಕ್ಷೆಗಳನ್ನು ನಡೆಸಿದ್ದು, ಶೇ 96ರಷ್ಟು ಫಲಿತಾಂಶ ಪಡೆದಿದೆ. ಶೈಕ್ಷಣಿಕವಾಗಿ ಹಿಂದುಳಿದ 121 ವಿದ್ಯಾರ್ಥಿಗಳನ್ನು ಪಾಸ್ ಮಾಡಿಸಲು ಶಿಕ್ಷಕರು ಶ್ರಮಿಸ ಬೇಕು ಎಂದು ಪುಷ್ಪಾ ಸಲಹೆ ನೀಡಿದರು.

ಮಾರ್ಚ್‌ 27ರಿಂದ ಆರಂಭ ವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಾಲ್ಲೂಕಿನ 4,025 ವಿದ್ಯಾರ್ಥಿಗಳು ಹಾಜರಾಗುತ್ತಿದ್ದು, ಈ ಪೈಕಿ 2,039 ಬಾಲಕರು, 1,989 ಬಾಲಕಿಯರಿದ್ದಾರೆ ಎಂದರು.

ಎಸ್‌ಟಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಕಾಣಿಸಿ ಕೊಂಡ ಚರ್ಮರೋಗಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ತಂಡ ಭೇಟಿ ನೀಡಿ ಪರಿಶೀಲಿಸಿದೆ. ನಿಲಯವನ್ನು ತಾತ್ಕಾಲಿಕವಾಗಿ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯದ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಅಧಿಕಾರಿ ಚಂದ್ರಶೇಖರ್ ತಿಳಿಸಿದರು.

ವಿದ್ಯಾರ್ಥಿ ನಿಲಯದ ನಿರ್ಮಾಣಕ್ಕೆ ಬಸ್ ಡಿಪೊ ಹಿಂಭಾಗ ದಲ್ಲಿ 1 ಎಕರೆ 20 ಗುಂಟೆ ನಿವೇಶನ ವನ್ನು ತಹಶೀಲ್ದಾರ್ ಮಂಜೂರು ಮಾಡಿದ್ದಾರೆ ಎಂದು ಹೇಳಿದರು.

ಹಕ್ಕಿಜ್ವರ: ಎಚ್ಚರ ವಹಿಸಲು ಸೂಚನೆ

ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ತಾಲ್ಲೂಕಿನಲ್ಲಿ 35 ಕೋಳಿ ಸಾಕಣೆ ಮಾಡುತ್ತಿರುವವರು ಎಚ್ಚರಿಕೆ ಕ್ರಮ ಅನುಸರಿಸಬೇಕು. ಕೋಳಿ ಸಾಕಣೆ ಮತ್ತು ಕೋಳಿ ಮಾಂಸ ಮಾರುವವರು ಎಚ್ಚರಿಕೆಯಿಂದ ಇರಬೇಕು. ಕೋಳಿಯೊಂದಿಗೆ ಸಂಪರ್ಕ ಹೊಂದಿರುವವರಿಗೆ ಎಚ್‌5 ಎನ್1 ಮತ್ತು ಎಚ್‌7 ಎನ್‌1 ಎಂಬ ವೈರಸ್ ತಗಲುವ ಸಾಧ್ಯತೆ ಇದೆ ಎಂದು ಪಶುವೈದ್ಯಾಧಿಕಾರಿ ಡಾ.ಲಿಂಗರಾಜು ದೊಡ್ಡಮನಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು