ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ನಗರದ ಕಲಾವಿದರಿಗೂ ತಟ್ಟಿದ ಕೊರೊನಾ ಬಿಸಿ

ಗೌರಿ- ಗಣೇಶ ಮೂರ್ತಿಗೆ ತಗ್ಗಿದ ಬೇಡಿಕೆ
Last Updated 20 ಆಗಸ್ಟ್ 2020, 6:02 IST
ಅಕ್ಷರ ಗಾತ್ರ

ಕೆ.ಆರ್.ನಗರ: ವಿಘ್ನನಿವಾರಕ ಗಣೇಶೋತ್ಸವಕ್ಕೂ ಕೊರೊನಾ ಛಾಯೆ ಆವರಿಸಿದ್ದು, ಪಾರಂಪರಿಕವಾಗಿ ಗಣೇಶ ಮೂರ್ತಿ ತಯಾರಿಸಿವ ಜೀವನ ಸಾಗಿಸಿಕೊಂಡು ಬರುತ್ತಿದ್ದ ಕಲಾವಿದರಿಗೂ ಆರ್ಥಿಕ ಬಿಸಿ ತಟ್ಟಿದೆ.

ಸ್ವರ್ಣ ಗೌರಿವ್ರತ, ಗಣೇಶ ಚತುರ್ಥಿ ಎಂದರೆ ಹಿಂದೂಗಳಿಗೆ ಎಲ್ಲಿಲ್ಲದ ಸಡಗರ, ಸಂಭ್ರಮ. ಯುವಕರ ಉತ್ಸಾಹಕ್ಕೆ ಸಾಟಿಯೇ ಇರುವುದಿಲ್ಲ. ಇಂತಹ ಸಂಭ್ರಮಕ್ಕೆ ಮೂರ್ತಿಗಳನ್ನು ಒದಗಿಸಲು ತಿಂಗಳುಗಟ್ಟಲೆ ದುಡಿಯುವ ವರ್ಗಕ್ಕೆ ಈ ವರ್ಷ ಆರ್ಥಿಕ ನಷ್ಟದ ಭೀತಿ ಎದುರಾಗಿದೆ.

ರಾಜ್ಯ ಸರ್ಕಾರದ ಪರಿಷ್ಕೃತ ಮಾರ್ಗಸೂಚನೆ ಪ್ರಕಾರ ಈ ವರ್ಷ 4 ಅಡಿಗಳಿಗಿಂತ ಹೆಚ್ಚು ಎತ್ತರ ಇರುವ ಗಣೇಶ ಮೂರ್ತಿಗಳನ್ನು ಕೊಳ್ಳುವವರು ಇಲ್ಲದೇ ಮನೆಯಲ್ಲೇ ಉಳಿಯಲಿವೆ ಎಂಬ ಚಿಂತೆ ಆವರಿಸಿದೆ.

‘ಹಿರಿಯರ ಕಾಲದಿಂದಲೂ ಮೂರ್ತಿ ತಯಾರಿಸುತ್ತಿದ್ದೇವು. ಮೂರು ತಿಂಗಳಿಂದ ಮನೆಯಲ್ಲಿ ನಾಲ್ಕೈದು ಜನ ಸೇರಿಕೊಂಡು ಮೂರ್ತಿ ಮಾಡುತ್ತಿದ್ದೇವೆ. ಪ್ರತಿವರ್ಷ ಸುಮಾರು ₹ 2 ಲಕ್ಷ ಮೌಲ್ಯದ ಹಲವು ಮೂರ್ತಿ ತಯಾರಿಸುತ್ತಿದ್ದೇವು, ಕೊರೊನಾದಿಂದಾದಗಿ ಈ ಬಾರಿ ಸುಮಾರು ₹ 50 ಸಾವಿರ ಮೌಲ್ಯದ ಮೂರ್ತಿ ತಯಾರಿಸಿದ್ದೇವೆ’ ಎಂದು ಕುಂಬಾರರ ಸಂಘದ ನಗರ ಘಟಕದ ಅಧ್ಯಕ್ಷ, ಕಲಾವಿದ ಸುಭಾಷ್ ಹೇಳಿದರು.

‘ತಾಲ್ಲೂಕಿನಲ್ಲಿ ಸುಮಾರು 20 ಕುಟುಂಬ ಗೌರಿ-ಗಣೇಶ ವಿಗ್ರಹಗಳನ್ನು ತಯಾರಿಸುತ್ತಾರೆ. ಇದೇ ವ್ಯಾಪಾರ ನಂಬಿಕೊಂಡು ಜೀವನ ನಿರ್ವಹಣೆಗಾಗಿ ಸಾಕಷ್ಟು ಸಾಲವೂ ಮಾಡಿಕೊಂಡಿದ್ದಾರೆ. ಸರ್ಕಾರದ ಮಾರ್ಗ ಸೂಚನೆಯಿಂದ ವ್ಯಾಪಾರಕ್ಕೆ ಕತ್ತರಿ ಬಿದ್ದಿದೆ. ಕುಂಬಾರರ ಕುಟುಂಬಗಳಿಗೂ ಸರ್ಕಾರ ಧನ ಸಹಾಯ ನೀಡಬೇಕು’ ಎಂದು ಸುಭಾಷ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

‘ಶ್ರೀ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಇಲ್ಲಿನ ರೇಡಿಯೊ ಮೈದಾನದಲ್ಲಿ 25 ವರ್ಷಗಳಿಂದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು. ಉತ್ಸವಕ್ಕಾಗಿಯೇ ₹ 4 ರಿಂದ 5 ಲಕ್ಷವರೆಗೂ ಖರ್ಚು ಮಾಡಿ ಮನರಂಜನಾ ಕಾರ್ಯಕ್ರಮ, ಪ್ರಸಾದ ವಿತರಣೆ ಮಾಡಲಗುತ್ತಿತ್ತು. ಆದರೆ, ಕೊರೊನಾದಿಂದಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಸ್ಥಳೀಯವಾಗಿ ತಯಾರಿಸಿದ 4 ಅಡಿ ಎತ್ತರದ ಮೂರ್ತಿವನ್ನೇ ಪ್ರತಿಸ್ಥಾಪನೆ ಮಾಡಲಾಗುತ್ತದೆ. ಸಂಪ್ರದಾಯ ಬಿಡಬಾರದು ಎಂದು ಈ ಬಾರಿ ಕೇವಲ 5 ದಿನಗಳಿಗೆ ಮಾತ್ರ ಸೀಮಿತಗೊಳಿಸಿದ್ದು ಪ್ರಸಾದ ವಿನಿಯೋಗ ಇರಲಿದೆ. ಉಳಿದಂತೆ ಯಾವುದೇ ಕಾರ್ಯಕ್ರಮ ನಡೆಸುವುದಿಲ್ಲ’ ಎಂದು ಸಮಿತಿ ಅಧ್ಯಕ್ಷ ತಮ್ಮನಾಯಕ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT