ಬುಧವಾರ, ಆಗಸ್ಟ್ 10, 2022
20 °C
ಮೈಸೂರಿನಲ್ಲಿ ಕೊರೊನಾ ವೈರಸ್‌ ಸೋಂಕು ಹರಡುವಿಕೆಯ ಪ್ರಮಾಣ ಇಳಿಮುಖದತ್ತ

ಕೋವಿಡ್‌: 12 ದಿನದಲ್ಲಿ 210 ಸಾವು

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೊರೊನಾ ವೈರಸ್‌ ಸೋಂಕು ಹರಡುವಿಕೆಯ ಪ್ರಮಾಣ ಜಿಲ್ಲೆಯಲ್ಲಿ ಪ್ರಸ್ತುತ ಇಳಿಮುಖದತ್ತ ಸಾಗಿದೆ. ಆದರೆ ಸಾವಿನ ದಾಖಲು ಪ್ರಮಾಣ ಮಾತ್ರ ಯಥಾಸ್ಥಿತಿ ಮುಂದುವರೆದಿದೆ. ಎರಡಂಕಿಯ ಕೆಳಗಿಳಿದಿಲ್ಲ.

ಜೂನ್‌ 1ರಿಂದ 12ರವರೆಗೂ ಜಿಲ್ಲಾಡಳಿತ ಪ್ರತಿ ದಿನವೂ ಪ್ರಕಟಿಸಿರುವ ಪ್ರಕಟಣೆಯಲ್ಲಿ 210 ಜನರು ಮೃತಪಟ್ಟಿದ್ದಾರೆ ಎಂಬುದನ್ನು ತಿಳಿಸಿದೆ.

ಗುರುವಾರದ (ಜೂನ್‌ 10) ಪ್ರಕಟಣೆಯಲ್ಲಿ 18 ಜನರ ಸಾವು ಘೋಷಿಸಿದ್ದು, ಇದರಲ್ಲಿ ಐವರಷ್ಟೇ ಜೂನ್‌ 1, 2ರಂದು ಮೃತಪಟ್ಟಿರುವುದು. ಉಳಿದ 13 ಜನರು ಮೇ ತಿಂಗಳಲ್ಲಿ ಮೃತಪಟ್ಟಿದ್ದಾರೆ ಎಂಬುದು ನಮೂದಾಗಿದೆ.

ಶುಕ್ರವಾರದ (ಜೂನ್‌ 11) ಪ್ರಕಟಣೆಯಲ್ಲಿ 20 ಜನರ ಸಾವು ಘೋಷಣೆಯಾಗಿದೆ. ಇದರಲ್ಲಿ 13 ಜನರು ಜೂನ್‌ 4, 5, 6, 7, 8ರಂದು ಮೃತಪಟ್ಟಿದ್ದರೆ, ಉಳಿದ ಏಳು ಮಂದಿ ಮೇ ತಿಂಗಳ ಕೊನೆ ವಾರದಲ್ಲಿ ಮೃತಪಟ್ಟಿದ್ದಾರೆ ಎಂಬುದನ್ನು ಜಿಲ್ಲಾಡಳಿತವೇ ಸ್ಪಷ್ಟಪಡಿಸಿದೆ.

ಶನಿವಾರದ (ಜೂನ್‌ 12) ಪ್ರಕಟಣೆಯಲ್ಲೂ 20 ಜನರ ಸಾವಿನ ಮಾಹಿತಿ ಪ್ರಕಟಗೊಂಡಿದೆ. ಇದರಲ್ಲೂ ಮೇ ತಿಂಗಳಲ್ಲಿ ಮೃತಪಟ್ಟ ಇಬ್ಬರ ಮಾಹಿತಿ ನೀಡಿದ್ದರೆ, ಉಳಿದ 18 ಜನರು ಜೂನ್‌ 1ರಿಂದ 9ರ ನಡುವಿನ ಅವಧಿಯಲ್ಲಿ ಮೃತಪಟ್ಟಿದ್ದಾರೆ.

ಮೇ ತಿಂಗಳಲ್ಲಿ ಮೃತಪಟ್ಟವರ ಮಾಹಿತಿಯನ್ನು ಇದೀಗ ಪ್ರಕಟಿಸಲಾಗುತ್ತಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಸಹ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಮಾಹಿತಿಯನ್ನು ಜಿಲ್ಲಾಡಳಿತವೇ ಮುಚ್ಚಿಡುತ್ತಿದೆ ಎಂದು ದಾಖಲೆ ಸಮೇತ ಆರೋಪಿಸಿದ್ದರು. ಇದಕ್ಕೆ ಹಲವರು ದನಿಗೂಡಿಸಿದ್ದರು.

ಜೂನ್‌ ತಿಂಗಳಲ್ಲೂ ಕೋವಿಡ್‌ನಿಂದ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚಿರುವುದು ನಗರವೂ ಸೇರಿದಂತೆ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ಪ್ರಸ್ತುತವೂ ಕೋವಿಡ್‌ ಬಾಧಿತರಾಗಿರುವ 13,411 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಮೇ ತಿಂಗಳಲ್ಲಿ ಮೃತಪಟ್ಟಿದ್ದ ಕೋವಿಡ್‌ ರೋಗಿಗಳ ಮಾಹಿತಿ
ಯನ್ನು ಇದೀಗ ಅಪ್‌ಡೇಟ್‌ ಮಾಡಲಾಗುತ್ತಿದೆ. ಕೆಲವೊಂದು ತಾಂತ್ರಿಕ ಕಾರಣದಿಂದ ಇದು ವಿಳಂಬವಾಗಿತ್ತು. ಇದರಿಂದ ಸಾವಿನ ಸಂಖ್ಯೆ ಹೆಚ್ಚಿದೆ ಎನ್ನಿಸುತ್ತಿದೆಯಷ್ಟೇ. ಪ್ರಸಕ್ತ ಸನ್ನಿವೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬರುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಡಿಎಂಒ ಡಾ.ಚಿದಂಬರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿತಾಗಾರದಲ್ಲಿ ಹಿಂದಿನಂತೆ ಅಂತ್ಯಕ್ರಿಯೆಗಳು ಹೆಚ್ಚಿನದಾಗಿ ನಡೆಯುತ್ತಿಲ್ಲ. ಆಸ್ಪತ್ರೆಗಳ ಮೇಲೆ ಒತ್ತಡವೂ ಕಡಿಮೆಯಾಗಿದೆ. ಸಾಕಷ್ಟು ಸಂಖ್ಯೆಯ ಆಮ್ಲಜನಕ ಸಹಿತ ಹಾಸಿಗೆಗಳು ಖಾಲಿಯಿವೆ. ಸೋಂಕಿನ ತೀವ್ರತೆ ಏಕಾಏಕಿ ಕಡಿಮೆಯಾಗಲ್ಲ. ಶೀಘ್ರದಲ್ಲೇ ನಿತ್ಯವೂ ದಾಖಲಾಗುವ ಪ್ರಕರಣಗಳ ಸಂಖ್ಯೆ ಮತ್ತಷ್ಟು ಕಡಿಮೆ ಆಗಲಿದೆ’ ಎಂದು ಅವರು
ಹೇಳಿದರು.

ಗುಣಮುಖರ ಸಂಖ್ಯೆ ಹೆಚ್ಚಳ

ಜೂನ್‌ 1ರಿಂದ 12ರವರೆಗೂ ಜಿಲ್ಲೆಯಲ್ಲಿ 13,730 ಜನರಿಗೆ ಹೊಸದಾಗಿ ಸೋಂಕು ತಗುಲಿದ್ದರೆ, 15,194 ಜನರು ಗುಣಮುಖರಾಗಿದ್ದಾರೆ. 13,411 ಜನರು ಕೋವಿಡ್‌ ಆರೈಕೆ ಕೇಂದ್ರ, ಕೋವಿಡ್‌ ಹೆಲ್ತ್‌ ಸೆಂಟರ್‌, ಕೋವಿಡ್‌ ಆಸ್ಪತ್ರೆ ಹಾಗೂ ಹೋಂ ಐಸೋಲೇಷನ್‌ನಲ್ಲಿ ಐಸೋಲೇಟ್‌ ಆಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.

ಏಪ್ರಿಲ್‌ ಅಂತ್ಯಕ್ಕೆ 10,775 ಸಕ್ರಿಯ ಪ್ರಕರಣಗಳಿದ್ದರೆ, ಮೇ ಕೊನೆಯಲ್ಲಿ 15,085 ಸಕ್ರಿಯ ಪ್ರಕರಣಗಳಿದ್ದವು. ಜೂನ್‌ 12ರಂದು ಸಕ್ರಿಯ ಪ್ರಕರಣಗಳ ಸಂಖ್ಯೆ 13,411ರಷ್ಟಿದೆ.

ಏಪ್ರಿಲ್‌ನಲ್ಲಿ 151 ಜನರು ಕೋವಿಡ್‌ನಿಂದ ಮೃತಪಟ್ಟಿದ್ದರೆ, ಮೇ ತಿಂಗಳಲ್ಲಿ 420 ಜನರು, ಜೂನ್‌ 12ರವರೆಗೂ 210 ಜನರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಮೂರು ದಿನವಷ್ಟೇ ಸಾವಿರಕ್ಕಿಂತ ಕಡಿಮೆ

ಮೈಸೂರು ಜಿಲ್ಲೆಯಲ್ಲಿ ಜೂನ್‌ 1ರಿಂದ 12ರವರೆಗೂ ನಿತ್ಯವೂ ಒಂದು ಸಾವಿರದ ಆಸುಪಾಸಿನಲ್ಲಿ ಹೊಸ ಕೋವಿಡ್‌ ಪ್ರಕರಣ ದೃಢಪಡುತ್ತಿವೆ.

ಜೂನ್‌ 8ರಂದು 974 ಪ್ರಕರಣ ದಾಖಲಾಗಿದ್ದರೆ, 11ರ ಶುಕ್ರವಾರ 817, 12ರ ಶನಿವಾರ 482 ಪ್ರಕರಣ ದೃಢಪಟ್ಟಿವೆ. ಈ ಮೂರು ದಿನವಷ್ಟೇ ಒಂದು ಸಾವಿರಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿರುವುದು. ಉಳಿದ ಒಂಬತ್ತು ದಿನವೂ ಸಾವಿರಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣ ದೃಢಪಟ್ಟಿವೆ. ಜೂನ್‌ ತಿಂಗಳಲ್ಲಿ ದಾಖಲಾದ ಪ್ರಕರಣಗಳ ಇದುವರೆಗಿನ ಸರಾಸರಿ 1140ರಷ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು