ಶುಕ್ರವಾರ, ಮೇ 14, 2021
25 °C

ಹಣ ಪಡೆದು ಕೋವಿಡ್ ಲಸಿಕೆ; ಪುಷ್ಪಾ ಅಮರ್‌ನಾಥ್ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಾರ್ವಜನಿಕರಿಂದ ಹಣ ಪಡೆದು ಕೋವಿಡ್ ಲಸಿಕೆ ಹಾಕುವ ಮೂಲಕ ಸರ್ಕಾರ ಹಗಲು ದರೋಡೆಗೆ ಇಳಿದಿದೆ ಎಂದು ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಕಿಡಿಕಾರಿದರು.

‌ಎಲ್ಲ ಸಾರ್ವಜನಿಕರಿಗೂ ಉಚಿತವಾಗಿ ಲಸಿಕೆ ನೀಡಬೇಕಿತ್ತು. ವಿದೇಶಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ನೀಡಿ, ನಮ್ಮ ದೇಶದ ಜನರಿಂದ ಹಣ ಪಡೆದು ಕೋವಿಡ್ ಲಸಿಕೆ ಹಾಕಲಾಗುತ್ತಿದೆ. ಇದರಲ್ಲೂ ‘ಕಿಕ್‌ಬ್ಯಾಗ್’ ಪಡೆದಿರಬಹುದೇನೋ ಎಂಬ ಸಂದೇಹ ಬರುತ್ತಿದೆ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅನುಮಾನ ವ್ಯಕ್ತಪಡಿಸಿದರು.

ಮಾಸ್ಕ್‌ನಿಂದ ಹಿಡಿದು ಕೋವಿಡ್ ಲಸಿಕೆ, ಆಕ್ಸಿಜನ್‌ವರೆಗೂ ಎಲ್ಲದ್ದಕ್ಕೂ ಸರ್ಕಾರ ಜಿಎಸ್‌ಟಿ ಹಾಕಿದೆ. ಕನಿಷ್ಠ ಸೋಪು, ಸ್ಯಾನಿಟೈಸರ್‌, ಮಾಸ್ಕ್‌ನ್ನಾದರೂ ಜಿಎಸ್‌ಟಿಯಿಂದ ಹೊರಗಿಡಬೇಕಿತ್ತು. ಇವುಗಳನ್ನು ಪಡಿತರ ವ್ಯವಸ್ಥೆಯಡಿ ಪೂರೈಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.‌

‘ನಮ್ಮ ಆರೋಗ್ಯ ಸಚಿವರು ನಿಜಕ್ಕೂ ಅನಾರೋಗ್ಯ ಸಚಿವರು. ‘ಊರು ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದಂತೆ’ ಈಗ ಲಾಕ್‌ಡೌನ್ ಮಾಡಲು ಹೊರಟಿದ್ದಾರೆ. ಕೊರೊನಾ 2ನೇ ಅಲೆ ಕುರಿತು ತಜ್ಞರ ಸಮಿತಿ ನೀಡಿದ್ದ ವರದಿಯನ್ನು ಅಲಕ್ಷಿಸಿ ಉಪಚುನಾವಣೆಗಳಲ್ಲಿ ತೊಡಗಿಸಿಕೊಂಡರು. ಕೊರೊನಾ ಉಲ್ಬಣಗೊಳ್ಳಲು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರೇ ಕಾರಣ’ ಎಂದು ಆರೋಪಿಸಿದರು.

ಈಗ ಸರ್ಕಾರ ಕೈಗೊಂಡಿರುವ ಕ್ರಮವು ಕೊರೊನಾದಿಂದ ಜನರು ಸಾಯುವುದರ ಜತೆಗೆ ಹಸಿವಿನಿಂದಲೂ ಸಾಯುವಂತೆ ಮಾಡಿದೆ. ಕಠಿಣ ನಿರ್ಬಂಧಗಳನ್ನು ಜಾರಿಗೆ ತರುವ ಮೊದಲು ಕನಿಷ್ಠ ಪೂರ್ವಸಿದ್ಧತೆಗಳನ್ನೂ ಮಾಡಿಕೊಂಡಿಲ್ಲ. ಇದೊಂದು ಹುಚ್ಚುತನದ ಸರ್ಕಾರ ಎಂದು ಹರಿಹಾಯ್ದರು.

ತಾಳಿಯನ್ನು ಅಡವಿಟ್ಟು ಶವಸಂಸ್ಕಾರ ಮಾಡುವಂತಹ ಸ್ಥಿತಿಗೆ ಭಾರತ ಮುಟ್ಟಿದೆ. ಕೊರೊನಾದಿಂದ ಜನರನ್ನು ಬದುಕಿಸಲಾಗದ ಸರ್ಕಾರ ಕನಿಷ್ಠ ಅವರ ಶವಗಳನ್ನಾದರೂ ಗೌರವಯುತವಾಗಿ ಸಂಸ್ಕಾರ ಮಾಡುವುದಕ್ಕೆ ಬೇಕಾದ ಸಿದ್ಧತೆಗಳನ್ನು ಕೈಗೊಳ್ಳಬೇಕು. ‘ಸಾವಿನ ಮನೆಯಲ್ಲೂ ಗಳ ಇರಿಯುವ’ವುದಕ್ಕೆ ಅವಕಾಶ ಮಾಡಿಕೊಡದೇ, ಹಣ ವಸೂಲಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.