ಶುಕ್ರವಾರ, ಡಿಸೆಂಬರ್ 9, 2022
21 °C
ನಿಗದಿಯಾಗದ ಬಹುಮಾನ ಮೊತ್ತ; ಸ್ಪರ್ಧೆಗಳ ಪಟ್ಟಿಯೂ ಇಲ್ಲ; ಕೂಟ ಮುಂದೂಡಿಕೆ

ದಸರಾ ಕ್ರೀಡಾಕೂಟಕ್ಕೆ ಅನುದಾನವಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೋವಿಡ್‌ ಬಳಿಕ ಅದ್ಧೂರಿ ದಸರಾ ಆಯೋಜನೆಗೊಂಡಿದ್ದರೂ ದಸರಾ ಕ್ರೀಡಾಕೂಟಕ್ಕೆ ಮಾತ್ರ ಉತ್ಸವದ ದಿನವಾದ ಸೆ.26ರಂದೇ ಉದ್ಘಾಟನೆಯ ಭಾಗ್ಯವಿಲ್ಲ.

ಕ್ರೀಡಾಕೂಟದ ಸ್ಥಳ, ಸ್ಪರ್ಧೆಗಳ ಪಟ್ಟಿಯೇ ಸಿದ್ಧಗೊಂಡಿಲ್ಲ. ಅನುದಾನ, ವಿಜೇತರ ಬಹುಮಾನದ ಮೊತ್ತವೂ ನಿಗದಿಯಾಗಿಲ್ಲ. ಕೊರೊನಾದಿಂದಾಗಿ ಕ್ಷೀಣವಾಗಿದ್ದ ಕ್ರೀಡಾ ಚಟುವಟಿಕೆಗಳಿಗೆ ಈ ಬಾರಿಯ ದಸರಾದಲ್ಲಿ ಹುರುಪು ಸಿಗಬಹುದು ಎಂಬ ಕ್ರೀಡಾಪಟುಗಳ ಕನಸು ನನಸಾಗಿಲ್ಲ. 

ಈ ಹಿಂದಿನ ಕ್ರೀಡಾಕೂಟಗಳಲ್ಲಿ ಗೆದ್ದ ಕೆಲವರಿಗೆ ಇದುವರೆಗೂ ಬಹುಮಾನ ಸಿಕ್ಕಿಲ್ಲ. ಈ ಬಾರಿಯೂ ಟಿ ಶರ್ಟ್‌, ಭತ್ಯೆಗೆ ಪರದಾಡಬೇಕಾಗಬಹುದೆಂಬ ಆತಂಕವೂ ಕ್ರೀಡಾಪಟುಗಳಲ್ಲಿದೆ. 

ಚಾಮುಂಡಿಬೆಟ್ಟದಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡುವ ಸಂದರ್ಭದಲ್ಲೇ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸುವುದು ಸಂಪ್ರದಾಯ. ಈ ಬಾರಿ ಸೆ.29ಕ್ಕೆ ಮುಂದೂಡಲಾಗಿದೆ. ಒಲಿಂಪಿಯನ್‌, ಕುಸ್ತಿಪಟು ಸಾಕ್ಷಿ ಮಲ್ಲಿಕ್‌ ಅವರನ್ನು ಕ್ರೀಡಾಕೂಟ ಉದ್ಘಾಟಿಸಲು ಆಹ್ವಾನಿಸಲಾಗಿತ್ತು.

‘ನಾಡಹಬ್ಬಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಲಿರುವುದರಿಂದ ಭದ್ರತೆಯ ಸಲುವಾಗಿ ಹಾಗೂ ಅತಿಥಿಗಳ ದಿನಾಂಕದಲ್ಲಿ ವ್ಯತ್ಯಾಸವಾಗಿದ್ದರಿಂದ ಕ್ರೀಡಾಕೂಟವನ್ನು ಮುಂದೂಡಲಾಗಿದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯೋಗವೂ ಸೇರಿದಂತೆ 27 ಕ್ರೀಡೆಗಳು ಸೆ.29ರಿಂದ ಅ.2ರವರೆಗೆ ನಡೆಯಲಿದೆ. ಬಹುತೇಕ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ, ಕೆಲವು ಮೈಸೂರು ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆಯಲಿವೆ. ಕೆಲವು ಕಾಲೇಜುಗಳು ಮೈದಾನಗಳನ್ನೂ ಬಿಟ್ಟುಕೊಡಲು ಒಪ್ಪಿಕೊಂಡಿವೆ’ ಎಂದರು.

ವೈಯಕ್ತಿಕ ಕ್ರೀಡೆಗಳಲ್ಲಿ ಮೊದಲ ಸ್ಥಾನ ಪಡೆಯುವ ಸ್ಪರ್ಧಿಗಳಿಗೆ ₹ 8,000 ಸಾವಿರ, ಎರಡು ಮತ್ತು ಮೂರನೇ ಸ್ಥಾನ ಪಡೆಯುವವರಿಗೆ ಕ್ರಮವಾಗಿ ₹ 5,000 ಹಾಗೂ ₹ 2,500 ನಗದು ಬಹುಮಾನವನ್ನು 2019ರಲ್ಲಿ ನೀಡಲಾಗಿತ್ತು.

‘ಕೊನೆಯ ಕ್ಷಣದ ಸಿದ್ಧತೆಗಳಿಂದಾಗಿ ಅವ್ಯವಸ್ಥೆಯಾಗಿದೆ. ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಸಂಭ್ರಮವಾಗಿತ್ತು. ಈಗ ಕ್ರೀಡಾ ದಸರಾ ವಾಣಿಜ್ಯೀಕರಣಗೊಂಡಿದೆ’ ಎಂದು ಮೈಸೂರು ಅಥ್ಲೆಟಿಕ್ಸ್‌ ಕ್ಲಬ್‌ ಕಾರ್ಯದರ್ಶಿ ಮಾದಪ್ಪ ಯೋಗೇಂದ್ರ ವಿಷಾದಿಸಿದರು.

‘ಅದ್ಧೂರಿ ದಸರಾಗೆ ಹಣ ವಿನಿಯೋಗಿಸುವ ಸರ್ಕಾರವು ಕ್ರೀಡಾ ಪಟುಗಳ ಬಹುಮಾನದ ಹಣವನ್ನು ತಡವಾಗಿ ನೀಡಲು ನಿರ್ಧರಿಸಿರುವುದು ಸರಿಯಲ್ಲ. ಹಿಂದಿನ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿಲ್ಲ. ಇದೊಂದು ಕಣ್ಣೊರೆಸುವ ತಂತ್ರವಾಗಬಾರದು’ ಎಂದು ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಟಿ.ಎಸ್‌.ರವಿ ಅಭಿಪ್ರಾಯಪಟ್ಟರು.

‘ದಸರಾ ಕ್ರೀಡಾಕೂಟವನ್ನು 10 ದಿನವೂ ನಡೆಸಬೇಕು. ನಾಲ್ಕು ದಿನದ ತರಾತುರಿಯ ಆಯೋಜನೆಯೂ ಸರಿಯಲ್ಲ’ ಎಂದು ರಾಜ್ಯ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ರಾಜು ಬಿರಾದಾರ್ ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು