ಶನಿವಾರ, ಅಕ್ಟೋಬರ್ 1, 2022
20 °C
ದಸರಾ ವಿಶೇಷ: ಅರಮನೆ ಆವರಣದಲ್ಲಿ ಆಯೋಜನೆ

ಮುಂಜಾನೆ–ಮುಸ್ಸಂಜೆವರೆಗೆ ಸಾಂಸ್ಕೃತಿಕ ರಂಗು

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಅಂಗವಾಗಿ, ಅಂಬಾವಿಲಾಸ ಅರಮನೆಯ ಆವರಣದಲ್ಲಿ ಈ ಬಾರಿ ‘ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ’ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವವು ಮೆರುಗು ನೀಡಲಿದೆ.

ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಕಳೆದ ಎರಡು ವರ್ಷ ನಾಡಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಕೆಲವು ಕಾರ್ಯಕ್ರಮಗಳಷ್ಟೆ ಅವಕಾಶ ನೀಡಲಾಗಿತ್ತು. ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ನಿರ್ಬಂಧವೂ ಇತ್ತು. ಆದರೆ, ಈ ಬಾರಿ ಕೋವಿಡ್‌ನ ಆತಂಕದ ಕಾರ್ಮೋಡ ಕರಗಿರುವುದರಿಂದ ಅದ್ದೂರಿಯಾಗಿ ಉತ್ಸವ ನಡೆಸಲಾಗುತ್ತಿದೆ. ಇದಕ್ಕೆ ತಕ್ಕಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ವಿಜೃಂಭಣೆಯಿಂದ ನಡೆಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ಅರಮನೆಯ ಪ್ರಾಂಗಣದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ.

ಕೋವಿಡ್‌ಗೆ ಮುನ್ನ ಇದ್ದಂತೆ:

ಇದರ ಭಾಗವಾಗಿ, ‘ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ’ (ಮುಂಜಾನೆಯಿಂದ ಮುಸ್ಸಂಜೆವರೆಗೆ) ಪರಿಕಲ್ಪನೆಯಲ್ಲಿ ಕಾರ್ಯಕ್ರಮ ವೈವಿಧ್ಯವನ್ನು ಈ ಬಾರಿ ಪರಿಚಯಿಸಲು ಚರ್ಚಿಸಲಾಲಾಗಿದೆ. ನವರಾತ್ರಿ ಸಂದರ್ಭದಲ್ಲಿ ದಿನವಿಡೀ ಸಂಗೀತ ರಸಿಕರಿಗೆ ರಸದೌತಣ ಉಣಬಡಿಸುವ ಕಾರ್ಯಕ್ರಮ ಇದಾಗಿದೆ. ಕೋವಿಡ್‌ ಪೂರ್ವದಲ್ಲಿ ಜರುಗಿದ್ದ ದಸರಾದಲ್ಲಿ ಈ ಪ್ರಯೋಗ ನಡೆದಿತ್ತು. ಈ ಬಾರಿ ಮರುಚಾಲನೆ ನೀಡಲು ಚರ್ಚಿಸಲಾಗಿದೆ.

ಪ್ರತಿ ದಿನ ವಿವಿಧ ವೇದಿಕೆಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಹೆಚ್ಚುವರಿಯಾಗಿ ಆಯೋಜಿಸಲಾಗುವ ಕಾರ್ಯಕ್ರಮ ಇದಾಗಿದೆ. ಇದರಿಂದ ನೂರಾರು ಕಲಾವಿದರಿಗೆ ವೇದಿಕೆ ದೊರೆಯಲಿದೆ ಮತ್ತು ಪ್ರವಾಸಿಗರು, ಸಂದರ್ಶಕರು ಹಾಗೂ ಆಸಕ್ತರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಸ್ವಾದಿಸುವ ಅವಕಾಶ ಕಲ್ಪಿಸುವ ಉಪಕ್ರಮ ಇದಾಗಿದೆ.

‘ಅದ್ದೂರಿಯಾಗಿ ದಸರಾ ಆಚರಣೆಗೆ ಸರ್ಕಾರ ನಿರ್ಧರಿಸಿರುವುರಿಂದ ಅದಕ್ಕೆ ಪೂರಕವಾಗಿ ಅರಮನೆ ಮಂಡಳಿಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರಾಂಗಣದಲ್ಲಿ ನಡೆಯುವ ಕಾರ್ಯಕ್ರಮಗಳ ರೂಪರೇಷೆ ಸಿದ್ದಪಡಿಸಲಾಗುತ್ತಿದೆ. ಧಾರ್ಮಿಕ ಚಟುವಟಿಕೆಗಳಿಗೂ ತಯಾರಿ ನಡೆದಿದೆ. ಅರಮನೆ ಅವರಣದ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ಮೇಳೈಸಲಿದೆ’ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎನ್.ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಂಗರಿಸಲು ಕ್ರಮ:

‘ಉತ್ಸವದ ಕೇಂದ್ರ ಬಿಂದುವಾದ ಅಂಬಾವಿಲಾಸ ಅರಮನೆಯನ್ನು ಸಿಂಗರಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ದೂಳು ತೆಗೆಯುವುದು, ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ. ಅಗತ್ಯವಿದ್ದಲ್ಲಿಗೆ ಸುಣ್ಣ–ಬಣ್ಣ ಬಳಿದು ಮೆರುಗು ಹೆಚ್ಚಿಸಲಾಗುವುದು. ಅರಮನೆಗೆ ಹೊನ್ನಿನ ಬಣ್ಣ ನೀಡುವ ಲಕ್ಷಕ್ಕೂ ಹೆಚ್ಚು ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ಹಾಳಾಗಿರುವವನ್ನು ಪತ್ತೆ ಹಚ್ಚಿ ಬದಲಿಸುವ– ನಿರ್ವಹಣೆ ಕಾರ್ಯವನ್ನು ನಡೆಸಲಾಗುತ್ತಿದೆ. ಉದ್ಯಾನಗಳಲ್ಲಿನ ಕಳೆ ಕೀಳುವ ಕಾರ್ಯವನ್ನೂ ಆರಂಭಿಸಲಾಗಿದೆ. ಹೂತೋಟವನ್ನೂ ನಿರ್ವಹಿಸಲಾಗುತ್ತಿದೆ. ಮಂಡಳಿಯಿಂದ ಅನುಮೋದನೆ ಪಡೆದು ಮತ್ತಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಧಾರ್ಮಿಕ ಕಾರ್ಯಕ್ರಮಗಳು, ಜಂಬೂಸವಾರಿಗೆ ಅಗತ್ಯವಾಗುವ ಸಂಯೋಜನೆಯನ್ನು ಮಂಡಳಿಯಿಂದ ಮಾಡಲಾಗುತ್ತದೆ’ ಎನ್ನುತ್ತಾರೆ ಅವರು.

ಅರಮನೆ ಆವರಣದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆಂದೇ ₹ 5 ಕೋಟಿ ಖರ್ಚಾಗುವ ಅಂದಾಜಿದೆ. ಅದನ್ನು ಅರಮನೆ ಮಂಡಳಿಯಿಂದಲೇ ಭರಿಸಬೇಕು ಎಂದು ಸರ್ಕಾರದಿಂದ ಸೂಚಿಸಲಾಗಿದೆ. ಅಂಬಾವಿಲಾಸ ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರಿಂದ ಸಂಗ್ರಹಿಸುವ ಪ್ರವೇಶ ಶುಲ್ಕದಲ್ಲಿ ಅದನ್ನು ಭರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಆಕರ್ಷಕ ವೇದಿಕೆ

ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರ ಆಯ್ಕೆಗೆ ಸಮಿತಿಯು ಪ್ರಕ್ರಿಯೆ ನಡೆಸಲಿದೆ. ಆಕರ್ಷಕವಾಗಿ ವೇದಿಕೆ ಸಿದ್ಧಪಡಿಸಲಾಗುವುದು.

–ಟಿ.ಎನ್.ಸುಬ್ರಹ್ಮಣ್ಯ, ಉಪ ನಿರ್ದೇಶಕ, ಅರಮನೆ ಮಂಡಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು