ಮೈಸೂರು: ‘ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್‌ಡೌನ್ ಕಟ್ಟಡವನ್ನು ನೆಲಸಮಗೊಳಿಸಿ ಮೊದಲಿನ ಶೈಲಿಯಲ್ಲೇ ಮರುನಿರ್ಮಿಸಲಾಗುವುದು. ವ್ಯಾಪಾರಿಗಳಿಗೆ ತಾತ್ಕಾಲಿಕವಾಗಿ ಬೇರೆಡೆ ಸ್ಥಳಾವಕಾಶ ಕಲ್ಪಿಸಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರೊಂದಿಗೆ ಶುಕ್ರವಾರ ಈ ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಹಾಲಿ ಇರುವ ಬಾಡಿಗೆದಾರರಿಗೆ ಮತ್ತೆ ಅಂಗಡಿಗಳನ್ನು ನೀಡಲಾಗುವುದು’ ಎಂದು ತಿಳಿಸಿದರು.
’ದೇವರಾಜ ಮಾರುಕಟ್ಟೆಗೆ ₹ 100 ಕೋಟಿ, ಲ್ಯಾನ್‌ಡೌನ್ ಕಟ್ಟಡಕ್ಕೆ ₹ 45 ಕೋಟಿ ವೆಚ್ಚವಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.
’ಪುರಭವನದ ಬಹುಮಹಡಿ ವಾಹನ ನಿಲುಗಡೆ ಕಟ್ಟಡವು 15 ದಿನಗಳಲ್ಲಿ ಸಾರ್ವಜನಿಕರ ಬಳಕೆಗೆ ದೊರಕಬೇಕು ಎಂದು ಸೂಚನೆ ನೀಡಲಾಗಿದೆ. ಉಂಡವಾಡಿ ಯೋಜನೆಯ ಕಾಮಗಾರಿಯನ್ನು 30 ತಿಂಗಳಲ್ಲಿ ಮುಗಿಸಲಾಗುವುದು’ ಎಂದು ಹೇಳಿದರು.
8 ಸಾವಿರ ಮನೆಗೆ ಕುಡಿಯುವ ನೀರು: ಇಲ್ಲಿನ ವಿಜಯನಗರದ 4ನೇ ಹಂತದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಒಂದು ಓವರ್‌ಹೆಡ್ ಟ್ಯಾಂಕ್ ಹಾಗೂ ತಲಾ 6.5 ಲಕ್ಷ ಲೀಟರ್ ಸಾಮರ್ಥ್ಯದ 2 ನೆಲಮಟ್ಟದ ಟ್ಯಾಂಕ್‌ಗಳಿಗೆ ನೀರು ಹರಿಸುವ ಮೂಲಕ ಸುಮಾರು 8 ಸಾವಿರ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವುದಕ್ಕೆ ಸಚಿವರು ಚಾಲನೆ ನೀಡಿದರು. ಜೊತೆಗೆ, ಕರ್ನಾಟಕ ರಾಜ್ಯ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ವತಿಯಿಂದ ನಿರ್ಮಿಸಲಾದ ಬೃಹತ್ ಜಲಸಂಗ್ರಹಾಗಾರವನ್ನು ಲೋಕಾರ್ಪಣೆ ಮಾಡಿದರು.
ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಈಜುಕೊಳದ ಬದಲಿಗೆ ಯೋಗಭವನ ನಿರ್ಮಾಣಕ್ಕೆ ಸಚಿವರು ಒಪ‍್ಪಿಗೆ ಸೂಚಿಸಿ, ಸ್ಥಳ ಪರಿಶೀಲನೆ ನಡೆಸಿದರು.
ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಪ್ರಭಾರ ಮೇಯರ್ ಅನ್ವರ್ ಬೇಗ್, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್, ಅಧೀಕ್ಷಕ ಎಂಜಿನಿಯರ್ ಶಂಕರ್ ಇದ್ದರು.
‘ಮುಡಾ’ ಬಜೆಟ್‌ಗೆ ಅನುಮೋದನೆ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಜೆಟ್‌ಗೆ ನಗರಾಭಿವೃದ್ಧಿ ಇಲಾಖೆ ಅನುಮತಿ ನೀಡಿದೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಜತೆಗೆ, ಪ್ರಾಧಿಕಾರದಲ್ಲಿರುವ ₹ 377 ಕೋಟಿ ಬಳಕೆ ಮಾಡಿ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ. ಇದರಿಂದ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಬಡಾವಣೆಗಳ ಸಮಸ್ಯೆಗಳು ಬಹುತೇಕ ನಿವಾರಣೆಯಾಗುವ ನಿರೀಕ್ಷೆ ಇದೆ ಎಂದರು.
‘ಹಿಂದಿನ ಜಿಲ್ಲಾಧಿಕಾರಿಗೆ ಚಾಟಿ, ಈಗಿನ ಜಿಲ್ಲಾಧಿಕಾರಿಗೆ ಶ್ಲಾಘನೆ’: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಹಿಂದಿನ ಜಿಲ್ಲಾಧಿಕಾರಿ ಅವರಿಗೆ ಅವರ ಹೆಸರು ಹೇಳದೇ ಚಾಟಿ ಬೀಸುತ್ತಲೇ, ಈಗಿನ ಜಿಲ್ಲಾಧಿಕಾರಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
‘ಸಾಮಾಜಿಕ ಮಾಧ್ಯಮಗಳಲ್ಲಿ ‘ಸಿಂಗಂ’ ಹಾಗೂ ‘ಕಿಂಗ್’ ತರಹ ಬಿಂಬಿಸಿಕೊಂಡು ಇಡೀ ರಾಜ್ಯವೇ ನನ್ನದು ಎನ್ನುವ ಜಿಲ್ಲಾಧಿಕಾರಿಯನ್ನು ಮೈಸೂರು ನೋಡಿದೆ. ಆದರೆ, ಈಗಿನ ಜಿಲ್ಲಾಧಿಕಾರಿ ಯಾವುದೇ ಸದ್ದುಗದ್ದಲ ಇಲ್ಲದೇ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಯಾವುದೇ ಕಡತವನ್ನು ಅವರು ತಮ್ಮ ಬಳಿ ಇಟ್ಟುಕೊಳ್ಳುತ್ತಿಲ್ಲ. ಮುಂಚೆ ನೂರಾರು ದೂರುಗಳು ಬರುತ್ತಿದ್ದವು. ಆದರೆ, ಈಗ ಒಂದು ದೂರೂ ಬರುತ್ತಿಲ್ಲ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೆಲಸವೇ ಇಲ್ಲದ ಹಾಗೆ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.