ಭಾನುವಾರ, ಸೆಪ್ಟೆಂಬರ್ 25, 2022
29 °C
ಅ.20ರಂದು ಹಾಜರಾಗಲು ನ್ಯಾಯಾಲಯ ಸೂಚನೆ

ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ಮೊಕದ್ದಮೆ: ಸಾ.ರಾ.ಮಹೇಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಸರ್ಕಾರಿ ಭೂಮಿಯನ್ನು ಕಬಳಿಸಿರುವುದಾಗಿ ನನ್ನ ವಿರುದ್ಧ ಆರೋಪಿಸಿರುವ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ (ಸಿವಿಲ್ ಮತ್ತು ಕ್ರಿಮಿನಲ್) ಹೂಡಿದ್ದೇನೆ’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ತಿಳಿಸಿದರು.

‘₹ 1 ಕೋಟಿ ದಂಡ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದ್ದೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾಹಿತಿ ನೀಡಿದರು.

‘ಇಲ್ಲಿ ಜಿಲ್ಲಾಧಿಕಾಯಾಗಿದ್ದಾಗ ಸರ್ಕಾರದ ಹಣ ದುರ್ವಿನಿಯೋಗ ಮಾಡಿದರು. ಕೋವಿಡ್ ಸಂದರ್ಭದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ್ದರಿಂದ ಜಿಲ್ಲೆಯಲ್ಲಿ ಸಾವಿರಾರು ಮಂದಿ ಕುಟುಂಬದವರನ್ನು ಕಳೆದುಕೊಂಡರು. ಅದನ್ನು ಮಚ್ಚಿಡಲು ಪರೀಕ್ಷೆಯ ಪ್ರಮಾಣವನ್ನೇ ತಗ್ಗಿಸಿದರು. ಸಾವಿನ ಸಂಖ್ಯೆ ಮುಚ್ಚಿಟ್ಟರು. ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿದ್ದರೂ ಸಾವನ್ನು ನಿಯಂತ್ರಿಸಿದ್ದೇವೆ ಎಂದಿದ್ದರು. ಇದೆಲ್ಲದರ ನಂತರ ಹಿಂದಿನ ಮುಖ್ಯ ಕಾರ್ಯದರ್ಶಿ ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕ, ಅವರ ವರ್ಗಾವಣೆಯಾಯಿತು. ಅವರನ್ನು ಅಮಾನತು ಮಾಡಬೇಕು ಎನ್ನುವುದು ನನ್ನ ವಾದವಾಗಿದೆ’ ಎಂದರು.

ಬುದ್ಧಿ ಕಲಿಸದೆ ಬಿಡೆನು: ‘ಜಿಲ್ಲಾಧಿಕಾರಿ ನಿವಾಸದಲ್ಲಿ ಅಕ್ರಮವಾಗಿ ಈಜುಕೊಳ ನಿರ್ಮಿಸಿದ್ದರು. ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆ ಪಡೆಯದೇ ಬಟ್ಟೆ ಬ್ಯಾಗ್‌ಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದರು. ಇವೆಲ್ಲವನ್ನೂ ಪ್ರಶ್ನಿಸಿದ್ದರಿಂದ ನನ್ನ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಪ್ರಾದೇಶಿಕ ಆಯುಕ್ತರು ತನಿಖೆ ನಡೆಸಿ ರೋಹಿಣಿ ಆರೋಪ ನಿರಾಧಾರ ಎಂದು ವರದಿ ನೀಡಿದ್ದಾರೆ. ಆ ಅಧಿಕಾರಿ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಮತ್ತು ನ್ಯಾಯಾಲಯದಲ್ಲಿ ಹೋರಾಡುವೆ’ ಎಂದು ತಿಳಿಸಿದರು.

‘ಕೋವಿಡ್ ಸಂದರ್ಭದ ದೌರ್ಬಲ್ಯ ಹಾಗೂ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಭೂ ಅಕ್ರಮದ ವಿಚಾರ ತೆಗೆದರು. 3 ದಶಕಗಳಿಂದ ರಾಜಕೀಯ ಜೀವನದಲ್ಲಿರುವ ನನಗೆ ಕಳಂಕ ಹಚ್ಚಲು ಪ್ರಯತ್ನಿಸಿದ್ದಾರೆ’ ಎಂದು ದೂರಿದರು.

‘ರಾಜಕಾರಣವನ್ನೇ ಬಿಟ್ಟೇನು, ಆದರೆ, ರೋಹಿಣಿಯಂಥವರಿಗೆ ಬುದ್ಧಿ ಕಲಿಸದೆ ಬಿಡುವುದಿಲ್ಲ. ಇದಕ್ಕಾಗಿ ಹೋರಾಡುತ್ತಿರುವೆ’ ಎಂದು ಗುಡುಗಿದರು.

ನನ್ನದೇ ಧ್ವನಿ ಎಂದು ಒಪ್ಪಿಕೊಂಡಿದ್ದರು: ಮಹೇಶ್ ಪರ ವಕೀಲ ಅರುಣ್‌ಕುಮಾರ್‌ ಮಾತನಾಡಿ, ‘2021ರ ಜುಲೈ 1ರಂದು ಲೀಗಲ್ ನೋಟಿಸ್ ಜಾರಿಗೊಳಿಸಿದ್ದೆವು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಡಿಯೊದಲ್ಲಿರುವುದು ನಿಮ್ಮದೇ ಧ್ವನಿಯಾ, ಉದ್ದೇಶಪೂರ್ವಕವಾಗಿ ಮಾಡಿದ್ದೀರಾ ಎಂದು ಕೇಳಿದ್ದೆವು. ಅವರು, ನನ್ನದೇ ಧ್ವನಿ–ನಾನೇ ಮಾತನಾಡಿರುವುದು ಎಂದು ಪ್ರತಿಕ್ರಿಯೆ ನೋಟಿಸ್‌ನಲ್ಲಿ ಒ‍ಪ್ಪಿಕೊಂಡಿದ್ದಾರೆ. ಅದು ಖಾಸಗಿಯಾಗಿ ಮಾತನಾಡಿದ್ದು ಎಂದೂ ಹೇಳಿದ್ದಾರೆ. ಸಾ.ರಾ.ಮಹೇಶ್ ಜೈಲಿನಲ್ಲಿ ಇರುತ್ತಾರೆ; ಕಂಬಿ ಹಿಂದಿರುತ್ತಾರೆ ಎಂದೆಲ್ಲಾ ಮಾತನಾಡಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲಾಧಿಕಾರಿಯಾದವರು ವೃತ್ತಿಪರ ವಿಷಯವನ್ನು ಖಾಸಗಿಯವರೊಂದಿಗೆ ಮಾತನಾಡುವಂತಿಲ್ಲ. ಇದನ್ನು ಆಧರಿಸಿ ಮೊಕದ್ದಮೆ ಹೂಡಿದ್ದೇವೆ’ ಎಂದು ಹೇಳಿದರು.

‘ಅ.20ರಂದು ಹಾಜರಾಗಿ ಉತ್ತರ ಕೊಡುವಂತೆ ನ್ಯಾಯಾಲಯವು ರೋಹಿಣಿ ಅವರಿಗೆ ನೋಟಿಸ್ ನೀಡಿದೆ. ವೈರಲ್‌ ಆಗಿರುವ ಆಡಿಯೊದಲ್ಲಿರುವುದು ನನ್ನದೇ ಧ್ವನಿ ಎಂದು ಒಪ್ಪಿರುವುದರಿಂದ, ಹಿನ್ನೆಲೆ ಮತ್ತು ಉದ್ದೇಶವನ್ನೂ ಪ್ರಕರಣದಲ್ಲಿ ಸೇರಿಸಿಕೊಳ್ಳಲು ಅವಕಾಶವಿದೆ’ ಎಂದರು.

ವಿಧಾನಪರಿಷತ್‌ ಸದಸ್ಯ ಸಿ.ಎನ್.ಮಂಜೇಗೌಡ, ಮುಖಂಡ ಆರ್.ಲಿಂಗಪ್ಪ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಕೆ.ಟಿ.ಚೆಲುವೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು