ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಕಾಯಂ, ಕನಿಷ್ಠ ಕೂಲಿಗೆ ಒತ್ತಾಯ

ರಾಜ್ಯ ಅಕ್ಷರ ದಾಸೋಹ ನೌಕರರ 3ನೇ ಜಿಲ್ಲಾ ಸಮ್ಮೇಳನ
Last Updated 15 ಸೆಪ್ಟೆಂಬರ್ 2022, 14:39 IST
ಅಕ್ಷರ ಗಾತ್ರ

ಮೈಸೂರು: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ 3ನೇ ಜಿಲ್ಲಾ ಸಮ್ಮೇಳನವು, ನೌಕರರ ಕೆಲಸ ಕಾಯಂಗೊಳಿಸಬೇಕು ಮತ್ತು ಕನಿಷ್ಠ ಕೂಲಿ ನೀಡಬೇಕೆಂದು ಹಕ್ಕೊತ್ತಾಯ ಮಂಡಿಸಿತು.

ನಗರದ ರಾಮಸ್ವಾಮಿ ವೃತ್ತದಿಂದ ಬುದ್ಧ ವಿಹಾರದವರೆಗೆ ನೌಕರರು ಮೆರವಣಿಗೆ ನಡೆಸಿದರು.

ನಂತರ ನಡೆದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಖಜಾಂಚಿ ಮಹದೇವಮ್ಮ, ‘ಶಾಲಾ ಶಿಕ್ಷಣವನ್ನು ವ್ಯವಸ್ಥೆಯನ್ನು‌ ಬಲಪಡಿಸುವಲ್ಲಿ ಯಶಸ್ವಿಯಾಗಿರುವ ಬಿಸಿಯೂಟ ನೌಕರರನ್ನು ರಾಜ್ಯ ಸರ್ಕಾರ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನೌಕರರಿಗೆ ಕನಿಷ್ಠ ವೇತನವನ್ನೂ ಕೊಡುತ್ತಿಲ್ಲ. ಗೌರವಧನದ ಹೆಸರಿನಲ್ಲಿ ಶೋಷಣೆ ಮಾಡುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ನಿರಂತರವಾಗಿ ಏರಿಸುತ್ತಿದೆ. ಅದರೆ, ಬೆಲೆ ಏರಿಕೆಗೆ ತಕ್ಕಂತೆ ಕೂಲಿ ಹೆಚ್ಚಿಸುತ್ತಿಲ್ಲ. ಕೋವಿಡ್ ಸಂದರ್ಭದಲ್ಲೂ ನೆರವಿಗೆ ಧಾವಿಸಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ತೀವ್ರವಾದ ಹೋರಾಟಕ್ಕೆ ಮುಂದಾಗಬೇಕು’ ಎಂದು ಹೇಳಿದರು.

ಅತ್ಯಂತ ಕಡಿಮೆ ಇದೆ:

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಗದೀಶ್ ಸೂರ‌್ಯ ಮಾತನಾಡಿ, ‘ತಮಗೆ ಅನ್ನ ಇಲ್ಲದಿದ್ದರೂ ಶಾಲಾ ಮಕ್ಕಳಿಗೆ ಅನ್ನ ನೀಡುವ ಬಿಸಿಯೂಟ ತಾಯಂದಿರಿಗೆ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ. ಯಾವುದೇ ಶಾಸಕ, ಮಂತ್ರಿಗಳು ಅಸಂಘಟಿತ ಕಾರ್ಮಿಕರಿಗೆ ವೇತನ ಹೆಚ್ಚಿಸುವ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡುವುದಿಲ್ಲ. ಆದರೆ, ತಮ್ಮ ವೇತನ ಹೆಚ್ಚಳಕ್ಕಾಗಿ ಒತ್ತಾಯಿಸುತ್ತಾರೆ’ ಎಂದು ಟೀಕಿಸಿದರು.

‘ಮಾನವೀಯತೆ ಇಲ್ಲದ ಸರ್ಕಾರವಿದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘2022ರ ಒಳಗಾಗಿ ಎಲ್ಲರಿಗೂ ಸ್ವಂತ ಮನೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ 2018ರಲ್ಲಿ ಹೇಳಿದ್ದರು. ಆದರೆ, ಅದು ಹುಸಿಯಾಗಿದೆ. ಜನ ವಿರೋಧಿ ನೀತಿಗಳ ವಿರುದ್ಧ ಜನತೆಯ ಆಕ್ರೋಶವನ್ನು ಬೇರೆಡೆ ತಿರುಗಿಸಲು ಜಾತಿ–ಧರ್ಮದ ವಿಷಯವನ್ನು ಮುಂದಕ್ಕೆ ತರಲಾಗುತ್ತಿದೆ’ ಎಂದು ದೂರಿದರು.

ಅಂಗನವಾಡಿ ನೌಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಬಾಲಾಜಿ ರಾವ್, ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ, ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಕೆ.ಬಸವರಾಜ್, ಬಿಸಿಯೂಟ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT