ಸೋಮವಾರ, ಜುಲೈ 26, 2021
22 °C

ಸ್ವಾಮೀಜಿಗಳನ್ನು ಮನೆಗೆ ಕರೆಯಬಾರದೆನಿಸುತ್ತದೆ– ದೇವನೂರ ಮಹಾದೇವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಸ್ವಾಮಿ ವಿವೇಕಾನಂದ ಅವರು ಬಂದಿದ್ದರು ಎಂಬ ಕಾರಣಕ್ಕೆ ಇಲ್ಲಿನ ಎನ್‌ಟಿಎಂ ಶಾಲೆಯ ಜಾಗವನ್ನು ಕೇಳುತ್ತಿರುವ ರಾಮಕೃಷ್ಣಾಶ್ರಮದ ಸ್ವಾಮೀಜಿಗಳ ವರ್ತನೆ ಸರಿಯಲ್ಲ’ ಎಂದು ಸಾಹಿತಿ ದೇವನೂರ ಮಹಾದೇವ ಟೀಕಿಸಿದರು.

'ಇವರ ವರ್ತನೆ ನೋಡಿದರೆ ಯಾವುದೇ ವಿರಕ್ತರನ್ನು, ಮಹಾತ್ಮರನ್ನು ಹಾಗೂ ಯತಿಯನ್ನು ಮನೆಗೆ ಕರೆಯಬಾರದು ಎನಿಸುತ್ತದೆ. ಒಂದು ವೇಳೆ ಸ್ವಾಮೀಜಿಗಳು ಬಂದಿದ್ದ ನೆಲಕ್ಕೆ ಬೆಲೆ ಬಂದಾಗ, ಅವರ ಅನುಯಾಯಿಗಳು ನಮ್ಮ ಸ್ವಾಮೀಜಿಗಳು ಇಲ್ಲಿಗೆ ಬಂದಿದ್ದರು. ಈ ಭೂಮಿ ಮಠಕ್ಕೆ ಬೇಕು ಎನ್ನಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

'140 ವರ್ಷಗಳ ಹಿಂದೆ ಬಾಲಕಿಯರಿಗಾಗಿ ತೆರೆದ ಭಾರತದಲ್ಲೇ ಪ್ರಪ್ರಥಮ ಶಾಲೆ ಎಂಬ ಹೆಗ್ಗಳಿಕೆಗೆ ಎನ್‌ಟಿಎಂ ಶಾಲೆ ಪಾತ್ರವಾಗಿದೆ. ಹಾಗಾಗಿಯೇ ಈ ಶಾಲೆಯ ನೆಲಕ್ಕೆ ಒಂದು ನೆನಪಿದೆ, ಆಶಯವಿದೆ, ಜೀವಚೈತನ್ಯವಿದೆ. ಇದಕ್ಕೆ ಬೆಲೆ ಕಟ್ಟಲಾಗದು. ಶಾಲೆಯ ನೆಲವನ್ನು ದೇಶದ ಸಂವೇದನಾಶೀಲರು ಕಾಪಾಡಿಕೊಳ್ಳಬೇಕು' ಎಂದು ಅವರು ಕರೆ ನೀಡಿದರು.

ಎನ್‌ಟಿಎಂ ಶಾಲೆಯನ್ನು ಸ್ಥಳಾಂತರ ಮಾಡಿ ವಿವೇಕಸ್ಮಾರಕ ನಿರ್ಮಿಸಬೇಕು ಎಂದು ರಾಮಕೃಷ್ಣ ಆಶ್ರಮ ಒತ್ತಾಯಿಸುತ್ತಿದೆ. ಇದನ್ನು ವಿರೋಧಿಸಿ ಶಾಲೆ ಉಳಿವಿಗೆ ಆಗ್ರಹಿಸಿ ಎನ್‌ಟಿಎಂ ಶಾಲೆ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಶಾಲೆಯ ಮುಂಭಾಗ ಕಳೆದ 18 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಒಡನಾಡಿ ಸೇವಾ ಸಂಸ್ಥೆಯ ಕಾರ್ಯಕರ್ತರು ಗುರುವಾರ ಜಿಟಿಜಿಟಿ ಮಳೆಯ ನಡುವೆ ಬೀದಿ ನಾಟಕ ಪ್ರದರ್ಶಿಸುವ ಮೂಲಕ ನಡೆಸಿದ ಪ್ರತಿಭಟನೆಯಲ್ಲಿ ದೇವನೂರ ಮಹಾದೇವ ಭಾಗಿಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು