ಭಾನುವಾರ, ಜೂನ್ 26, 2022
27 °C

ತಮ್ಮ ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ ದೇವನೂರ ಮಹಾದೇವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪಠ್ಯ ಪುಸ್ತಕ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸಿರುವ ಲೇಖಕ ದೇವನೂರ ಮಹಾದೇವ ತಮ್ಮ ‍ಪಾಠ ಸೇರ್ಪಡೆಗೆ ಅನುಮತಿ ನಿರಾಕರಿಸಿದ್ದಾರೆ. ತಮ್ಮ ಪಾಠ ‘ಸೇರಿದ್ದರೆ’ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

‘ಈ ಹಿಂದಿನ ಪಠ್ಯದಲ್ಲಿದ್ದ ಎಲ್.ಬಸವರಾಜು, ಎ.ಎನ್.ಮೂರ್ತಿರಾವ್, ಪಿ.ಲಂಕೇಶ್, ಸಾರಾ ಅಬೂಬಕರ್ ಮೊದಲಾದವರ ಕತೆ, ಲೇಖನಗಳನ್ನು ಕೈಬಿಟ್ಟವರಿಗೆ ಕನ್ನಡ ನಾಡು, ನುಡಿ, ಸಂಸ್ಕೃತಿ ಕುರಿತು ಏನೇನೂ ತಿಳಿದಿಲ್ಲ ಎಂದೇ ಅರ್ಥ’ ಎಂದು ಖಂಡಿಸಿದ್ದಾರೆ.

‘ಚಾತುರ್ವರ್ಣ ಹಿಂದೂ ಪ್ರಭೇದದ ಆರ್‌ಎಸ್‌ಎಸ್‌ ಸಂತಾನವಾದ ಬಿಜೆಪಿ ತನ್ನ ಆಳ್ವಿಕೆಯಲ್ಲಿ ಮೊದಲು ಕೈ ಹಾಕುವುದೇ ಶಿಕ್ಷಣ ಮತ್ತು ಇತಿಹಾಸದ ಕುತ್ತಿಗೆಗೆ. ನೂತನ ಪಠ್ಯ ಪರಿಷ್ಕರಣೆಯಲ್ಲಿಯೂ ಇದೇ ಆಗಿದೆ’ ಎಂದು ಆರೋಪಿಸಿದ್ದಾರೆ.

‘ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ತನಗೆ ಲೇಖಕರ ಜಾತಿ ತಿಳಿದಿಲ್ಲ ಎಂದು ಹೇಳುತ್ತಾರೆ. ಪ್ರಜ್ಞಾಪೂರ್ವಕವಾಗಿ ಜಾತಿಯನ್ನು ಗುರುತಿಸದಿದ್ದರೆ ಅಲ್ಲಿ ಸಹಜವಾಗಿ ಶೇ 90ರಷ್ಟು ಅವರ ಜಾತಿಯವರೇ ತಂಬಿಕೊಳ್ಳುತ್ತಾರೆ.  ಭಾರತದ ಬಹುತ್ವ, ಪ‍್ರಜಾಪ್ರಭುತ್ವದಲ್ಲಿ ಭಾಗವಹಿಸುವಿಕೆ ಕಣ್ಮರೆಯಾಗುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಹತ್ತನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ನನ್ನದೂ ಒಂದು ಕಥನ ಸೇರಿದೆ ಎನ್ನಲಾಗುತ್ತಿದೆ. ಸೇರಿಸುವುದು, ಕೈಬಿಡುವುದು ಗಳಿಗೆ ಗಳಿಗೆಗೂ ನಡೆಯುತ್ತಿದೆ. ಒಂದು ವೇಳೆ ನನ್ನ ಕಥನದ ಭಾಗವನ್ನು ಪಠ್ಯದಲ್ಲಿ ಸೇರಿಸಿರದಿದ್ದರೆ ನನಗೆ ಹೆಚ್ಚು ಸಂತಸವಾಗುತ್ತದೆ. ಸೇರಿದ್ದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ. ಈ ಹಿಂದೆ ಹಳೇ ಪಠ್ಯಕ್ಕೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿದ್ದೇನೆ’ ಎಂದಿದ್ದಾರೆ.

‌‘ಪರಿಷ್ಕೃತ ಪಠ್ಯ ಪ್ರಕಟಗೊಂಡ ಮೇಲೆ ಅವುಗಳನ್ನು ಪರಿಶೀಲಿಸಿ, ಅವುಗಳ ಕೊರತೆಗಳನ್ನು ತುಂಬಲು, ಶಾಲಾ ಮಕ್ಕಳಿಗೆ ಪರ್ಯಾಯ ಪಾಠಗಳು, ಪೂರಕ ವಿಷಯಗಳು, ಸಂವಿಧಾನವನ್ನು ವಾಟ್ಸ್‌ಆ್ಯಪ್‌, ಇ–ಮೇಲ್, ಆನ್‌ಲೈನ್‌ ತರಗತಿ ಮೂಲಕ ಬಿತ್ತರಿಸಲು ಆಲೋಚಿಸುತ್ತಿರುವ ಆರೋಗ್ಯವಂತ ಮನಸ್ಸುಗಳ ಜತೆ ನಾನಿರಲು ಬಯಸುವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು