ಅಭಿವೃದ್ಧಿಯಾಗಿದೆ; ಸಮಸ್ಯೆಗಳೂ ಇವೆ

7

ಅಭಿವೃದ್ಧಿಯಾಗಿದೆ; ಸಮಸ್ಯೆಗಳೂ ಇವೆ

Published:
Updated:

ಸಾಂಸ್ಕೃತಿಕ ನಗರಿಯ ಹೃದಯ ಭಾಗದ ಕೆಲವು ಬಡಾವಣೆಗಳನ್ನು ಒಳಗೊಂಡಿರುವ ವಾರ್ಡ್‌ ಕೃಷ್ಣಮೂರ್ತಿಪುರಂ (ವಾರ್ಡ್‌ ಸಂಖ್ಯೆ7). ಇತಿಹಾಸದ ನೆನಪುಗಳನ್ನು ಉಳಿಸಿಕೊಂಡು, ಆಧುನಿಕತೆಯನ್ನು ಮೈಗೂಡಿಸಿಕೊಂಡು ಬೆಳೆಯುತ್ತಿದೆ.

ಮೈಸೂರು ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆಯಾದರೂ, ಕೆಲವೆಡೆ ಹಳ್ಳಿಯ ಸೊಗಡನ್ನು ಇನ್ನೂ ಕಾಣಬಹುದು. ಅಂಥ ಹಳ್ಳಿಯ ಸೊಗಡನ್ನು ಉಳಿಸಿಕೊಂಡಿರುವ ವಾರ್ಡ್‌ಗಳಲ್ಲಿ ಕೃಷ್ಣಮೂರ್ತಿಪುರಂ ಕೂಡಾ ಒಂದು. ಬಡವರು, ಮಧ್ಯಮ ವರ್ಗದವರು ಮತ್ತು ಶ್ರೀಮಂತರು ಇಲ್ಲಿದ್ದಾರೆ.

ಕೃಷ್ಣಮೂರ್ತಿಪುರಂ ಬಡಾವಣೆಯ ಬಹುತೇಕ ಭಾಗಗಳಲ್ಲಿ ಚೊಕ್ಕವಾದ ರಸ್ತೆಗಳು, ಉತ್ತಮ ಪಾದಚಾರಿ ಮಾರ್ಗಗಳನ್ನು ಕಾಣಬಹುದಾದರೆ, ಅಶೋಕಪುರಂನಲ್ಲಿ ಇಕ್ಕಟ್ಟಾದ ರಸ್ತೆಗಳು, ಕಿರಿದಾದ ಬೀದಿಗಳು ಇವೆ. ಹಲವೆಡೆ ಪಾದಚಾರಿ ಮಾರ್ಗಗಳು ನಿರ್ಮಾಣಗೊಂಡಿಲ್ಲ. ಈ ಪ್ರದೇಶ ಸ್ವಚ್ಛತೆಯಲ್ಲೂ ಹಿಂದೆ ಉಳಿದಿದೆ.

ಅಭಿವೃದ್ಧಿ ಕೆಲಸ: ಕಳೆದ ಎರಡು ಅವಧಿಗಳಲ್ಲಿ ಪಾಲಿಕೆ ಸದಸ್ಯರಾಗಿರುವ ಪುರುಷೋತ್ತಮ್ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.

ರಸ್ತೆ, ಪಾರ್ಕ್‌ಗಳ ಅಭಿವೃದ್ಧಿ, ವಿವಿಧ ವಸತಿ ಯೋಜನೆಗಳಿಂದ ಮನೆಗಳ ನಿರ್ಮಾಣ ಕೆಲಸ ನಡೆದಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಸುಮಾರು 700 ಮನೆಗಳ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ. ಶಾಲೆಗಳು, ಹಾಸ್ಟೆಲ್‌, ಕ್ರೀಡಾಂಗಣ ನಿರ್ಮಾಣ ಕೆಲಸ ನಡೆದಿದೆ ಎಂದು ತಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳ ಪಟ್ಟಿಯನ್ನು ಅವರು ಮುಂದಿಡುತ್ತಾರೆ.

ಶೇ 24.10 ಅನುದಾನ, ರಾಜ್ಯ ಹಣಕಾಸು ನಿಧಿ, 13ನೇ ಹಣಕಾಸು ಆಯೋಗ ಅಲ್ಲದೆ ಪಾಲಿಕೆಯಿಂದ ಬಂದಿರುವ ಕೋಟ್ಯಂತರ ಮೊತ್ತದ ಅನುದಾನದಿಂದ ವಿವಿಧ ಅಭಿವೃದ್ಧಿ ಕೆಲಸಗಳು ನಡೆದಿವೆ. 14ನೇ ಹಣಕಾಸು ಆಯೋಗದಲ್ಲಿ ₹ 40 ಲಕ್ಷ ಅನುದಾನ ಬಂದಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಫುಟ್‌ಪಾತ್‌ನಲ್ಲಿ ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರಿನ ಘಟಕಗಳನ್ನು ತೆರೆಯಲಾಗಿದೆ.

ನರ್ಮ್‌ ಯೋಜನೆಯಲ್ಲಿ ಅಶೋಕಪುರಂ ಬಡಾವಣೆಗೆ ಕಬಿನಿಯಿಂದ ಕುಡಿಯುವ ನೀರು ಒದಗಿಸಿಕೊಡಲಾಗಿದೆ. ಕೆ.ಜಿ.ಕೊಪ್ಪಲಿನಿಂದ ಮಾನಂದವಾಡಿ ರಸ್ತೆಯವರೆಗೆ ಇರುವ ರಾಜಕಾಲುವೆಯನ್ನು ಸ್ವಚ್ಛಗೊಳಿಸುವ ಕೆಲಸ ನಡೆದಿದೆ.

ವಾರ್ಡ್‌ನಲ್ಲಿರುವ ಅಂಬೇಡ್ಕರ್‌ ಪಾರ್ಕ್‌, ಅನಂತಸ್ವಾಮಿ ಪಾರ್ಕ್‌, ಗೋಪಾಲಸ್ವಾಮಿ ಶಿಶುವಿಹಾರ ಸಮೀಪದ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಮಕ್ಕಳಿಗೆ ಆಟವಾಡಲು ಸೌಲಭ್ಯ ಕಲ್ಪಿಸಲಾಗಿದೆ. ಸುಮಾರು ₹ 1.25 ಕೋಟಿ ವೆಚ್ಚದಲ್ಲಿ ಸರ್ಕಾರಿ ಶತಮಾನೋತ್ಸವ ಭವನ ನಿರ್ಮಿಸಲಾಗಿದೆ. ಅಶೋಕಪುರಂನಲ್ಲಿ ಗ್ರಂಥಾಲಯ, ಪದವೀಧರರ ವಿಚಾರ ವೇದಿಕೆ ಕಟ್ಟಡ ನಿರ್ಮಾಣಗೊಂಡಿದೆ.

ಯೋಜನೆ ತಲುಪಿಸಿದ್ದೇನೆ: ‘ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪಿಸಿದ್ದೇನೆ. ಕಳೆದ ಒಂದು ವಾರದ ಅವಧಿಯಲ್ಲಿ 70 ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ. ಲ್ಯಾಪ್‌ಟಾಪ್‌, ವಿದ್ಯಾರ್ಥಿವೇತನಗಳನ್ನು ನೀಡಲಾಗಿದೆ’ ಎಂದು ಪಾಲಿಕೆ ಸದಸ್ಯರು ಹೇಳಿದರು.

ಬುದ್ಧವಿಹಾರ: ಪುರುಷೋತ್ತಮ್‌ ಅವರು ಬಲ್ಲಾಳ್‌ ವೃತ್ತದ ಬಳಿ ಬುದ್ಧ ವಿಹಾರ ಕಟ್ಟಿಸಿಕೊಟ್ಟಿದ್ದಾರೆ. ಈ ಪ್ರದೇಶ ವಾರ್ಡ್‌ ಸಂಖ್ಯೆ 3 ವ್ಯಾಪ್ತಿಗೆ ಬರುತ್ತದೆ. ಇದೀಗ ಬುದ್ಧ ವಿಹಾರದ ಆವರಣದಲ್ಲಿ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದ್ದು, ಗ್ರಂಥಾಲಯ ಹಾಗೂ ಬೌದ್ಧ ಗುರುಗಳ ವಾಸ್ತವ್ಯಕ್ಕೆ ಕೊಠಡಿಗಳು ಇರಲಿವೆ.

ಹೈನುಗಾರಿಕೆ: ಹಳ್ಳಿಯ ಸೊಗಡು ಇರುವ ಕಾರಣ ಕೃಷ್ಣಮೂರ್ತಿಪುರಂನ ಕೆಲವೆಡೆ ಬೀದಿಗಳಲ್ಲೇ ಹೈನುಗಾರಿಕೆ ನಡೆಯುತ್ತದೆ. ಮನೆ ಮುಂದೆ, ಬೀದಿ ಬದಿ ಸಗಣಿ ರಾಶಿ ಕಂಡುಬರುತ್ತದೆ. ಇದರಿಂದ ಕೆಲವು ಬೀದಿಗಳು ಚೊಕ್ಕವಾಗಿ ಕಾಣಿಸುವುದಿಲ್ಲ. ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿರುವುದರಿಂದ ಜನರು ರಸ್ತೆಯಲ್ಲೇ ನಡೆದಾಡಬೇಕಾಗುತ್ತದೆ.

ಸಮಸ್ಯೆಗಳೂ ಸಾಕಷ್ಟಿವೆ: ಅಭಿವೃದ್ಧಿ ಕೆಲಸಗಳ ನಡುವೆಯೂ ಕೆಲವೊಂದು ಸಮಸ್ಯೆಗಳು ಇನ್ನೂ ಬಗೆಹರಿಯದೇ ಉಳಿದುಕೊಂಡಿವೆ. ಕೃಷ್ಣಮೂರ್ತಿಪುರಂ ವಾರ್ಡ್‌, ನಗರದ ಇತರ ಕೆಲವು ವಾರ್ಡ್‌ಗಳಂತೆ ಸೌಂದರ್ಯದಿಂದ ಗಮನ ಸೆಳೆಯುತ್ತಿಲ್ಲ.

ಆಶೋಕಪುರಂನಲ್ಲಿ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಫುಟ್‌ಪಾತ್‌, ಒಳಚರಂಡಿ ಮೇಲೆಯೇ ಒತ್ತುವರಿ ಮಾಡಿಕೊಂಡು ಹೆಚ್ಚುವರಿ ಕೊಠಡಿ, ಶೌಚಾಲಯ ಕಟ್ಟಿಸಿದ್ದಾರೆ. ಇದರಿಂದ ನಮ್ಮ ಏರಿಯಾ ನೀಟಾಗಿ ಕಾಣುತ್ತಿಲ್ಲ ಎಂದು ಪಾಲಿಕೆ ಸದಸ್ಯರು ಕಾರಣ ನೀಡುತ್ತಾರೆ.

ಮನೆ ಮುಂದೆಯೇ ಹಸು, ಕುರಿ ಸಾಕಣೆ ಮಾಡುತ್ತಾರೆ. ಸೌದೆಯ ಬಳಕೆ ಹೆಚ್ಚಿದ್ದು, ಮನೆ ಮುಂದೆ ರಾಶಿ ಹಾಕುತ್ತಾರೆ. ಶೇ 15 ರಿಂದ ಶೇ 20 ರಷ್ಟು ಗ್ರಾಮೀಣ ಭಾಗದ ಸೊಗಡು ಉಳಿದಿಕೊಂಡಿರುವುದರಿಂದ ಹಳ್ಳಿಯಂತೆ ಕಾಣುತ್ತದೆ ಎಂದರು.

ಒತ್ತುವರಿ ತೆರವುಗೊಳಿಸಿ ಆಧುನಿಕ ಶೈಲಿಯಲ್ಲಿ ಒಳಚರಂಡಿ ಮತ್ತು ಫುಟ್‌ಪಾತ್‌ ನಿರ್ಮಿಸಿದರೆ ಇಡೀ ಪ್ರದೇಶ ಚೊಕ್ಕವಾಗಿ ಕಾಣುತ್ತದೆ. ಮುಖ್ಯರಸ್ತೆ ಅಚ್ಚುಕಟ್ಟಾಗಿ ಕಾಣುತ್ತದೆ. ಒಳಚರಂಡಿ ಮತ್ತು ಫುಟ್‌ಪಾತ್‌ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ ಜನರು ಒತ್ತುವರಿ ತೆರವು ಮಾಡಲು ಮುಂದಾಗದೇ ಇರುವುದರಿಂದ ಕಾಮಗಾರಿ ನಡೆಸಲು ಆಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.

ಅಶೋಕಪುರಂ ಪ್ರದೇಶದಲ್ಲಿ ಸ್ವಚ್ಛತೆಯ ಸಮಸ್ಯೆಯೂ ಇದೆ. ಜನರಿಗೆ ಅರಿವಿನ ಕೊರತೆಯಿಂದ ಸ್ವಚ್ಛತೆಯ ವಿಚಾರದಲ್ಲಿ ಹಿಂದೆ ಬಿದ್ದಿದೆ. ಪಾಲಿಕೆಯು ಕಸ ಹಾಕಲು ಕಂಟೇನರ್‌ಗಳನ್ನು ಇಟ್ಟರೂ ಜನರು ಅದನ್ನು ಬಳಸುತ್ತಿಲ್ಲ. ನಗರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸಾರ್ವಜನಿಕರ ಸಹಭಾಗಿತ್ವ ಮುಖ್ಯ. ಈಗ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಹೇಳಿದರು.

‘ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ 95 ರಷ್ಟನ್ನು ಈಡೇರಿಸಿದ ತೃಪ್ತಿಯಿದೆ. ಎಲ್ಲರನ್ನೂ ಪೂರ್ಣ ತೃಪ್ತಿಪಡಿಸುವುದು ಕಷ್ಟ. ಆದರೆ ನನ್ನ ಕೈಲಾದ ಕೆಲಸ ಮಾಡಿದ್ದೇನೆ. ಜನರು ಮತ ಹಾಕಿ ಗೆಲ್ಲಿಸಿರುವುದರಿಂದ ಸವಲತ್ತುಗಳನ್ನು ಅವರಿಗೆ ತಲುಪಿಸುವುದು ನನ್ನ ಕೆಲಸ’  –ಈ ವಾರ್ಡ್‌ನ ಸದಸ್ಯ ಪುರುಷೋತ್ತಮ್‌ ಅವರ ಮಾತಿದು. ಸತತ ಎರಡು ಅವಧಿಗೆ ಅವರು ಇಲ್ಲಿ ಸದಸ್ಯರಾಗಿದ್ದಾರೆ. 2009–10 ರಲ್ಲಿ ಮೇಯರ್‌ ಆಗಿಯೂ ಕಾರ್ಯನಿರ್ವಹಿಸಿದ್ದರು.

‘ಸಮಾಜ ಸೇವೆ ಮಾಡಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ನಾನು ಬೆಳೆದಿದ್ದೇನೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ತತ್ವ ಸಿದ್ಧಾಂತದ ಪ್ರಕಾರ ಜೀವನ ರೂಪಿಸಿಕೊಂಡಿದ್ದೇನೆ. ಕಳೆದ 30 ವರ್ಷಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ’ ಎಂದು ಹೇಳಿದರು.

‘ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಪ್ರತಿಯೊಬ್ಬರಿಗೂ ಶಿಕ್ಷಣ ಲಭಿಸಿದರೆ ಬಡತನ, ನಿರುದ್ಯೋಗ ಸಮಸ್ಯೆಗಳು ಬರೆಹರಿಯಬಹುದು. ಶಿಕ್ಷಣ ಇಲ್ಲದ ಕಾರಣ ಅತಂತ್ರ ಸ್ಥಿತಿ ಮುಂದುವರಿದಿದೆ. ಈ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದೇನೆ’ ಎಂದರು.

‘ಪಾಲಿಕೆ ಸದಸ್ಯನಾಗಿ ಜನರಿಗೆ ಸೇವೆ ಮಾಡಲು 10 ವರ್ಷ ಅವಕಾಶ ಲಭಿಸಿತು. 2007 ಮತ್ತು 2013 ರಲ್ಲಿ ಗೆದ್ದು ಬಂದಿದ್ದೇನೆ. ಸಿಕ್ಕ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳದೇ ಜನರಿಗೆ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ನುಡಿದರು.

ವಾರ್ಡ್‌ ವ್ಯಾಪ್ತಿಯ ಪ್ರದೇಶಗಳು

ಕೃಷ್ಣಮೂರ್ತಿಪುರಂ, ಅಶೋಕಪುರಂ. ಕೆ.ಆರ್‌.ವನಂ, ಲಕ್ಷ್ಮಿಪುರಂ ಈ ನಾಲ್ಕು ಬಡಾವಣೆಗಳ ಪ್ರದೇಶಗಳು ವಾರ್ಡ್‌ 7 ರ ವ್ಯಾಪ್ತಿಗೆ ಬರುತ್ತದೆ.ಅಂಬೇಡ್ಕರ್‌ ರಸ್ತೆ, ಜಯನಗರ ಗೇಟ್‌, ಸಿದ್ಧಾರ್ಥ ಹಾಸ್ಟೆಲ್ ರಸ್ತೆ, ರಾಮಯ್ಯ ರಸ್ತೆ, ಮಾನಂದವಾಡಿ ರಸ್ತೆಗಳು ಈ ವಾರ್ಡ್‌ನಲ್ಲಿ ಬರುವ ಮುಖ್ಯ ರಸ್ತೆಗಳು. ಪಾಲಿಕೆಯ ವಾರ್ಡ್‌ಗಳ ಮರುವಿಂಗಡಣೆ ಬಳಿಕ ಈ ವಾರ್ಡ್‌ನ ಸಂಖ್ಯೆ 56 ಆಗಿ ಬದಲಾಗಿದೆ.

ರಸ್ತೆ ಅಭಿವೃದ್ಧಿಯಾಗಬೇಕು

ಅಂಬೇಡ್ಕರ್‌ ರಸ್ತೆ ಅಭಿವೃದ್ಧಿಗೆ ಇನ್ನೂ ಗಮನ ಹರಿಸಬೇಕು. 1ನೇ ಅಡ್ಡರಸ್ತೆಯಿಂದ 13ನೇ ಅಡ್ಡರಸ್ತೆವರೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ನಡೆಯಬೇಕಿದೆ. ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಜನರು ಒತ್ತುವರಿ ಮಾಡಿಕೊಂಡು ಒಳಚರಂಡಿ ಮೇಲೆಯೇ ಶೌಚಾಲಯ ಕಟ್ಟಿಸಿದ್ದಾರೆ. ಇದರಿಂದ ರಸ್ತೆ ವಿಸ್ತರಣೆ ಸಾಧ್ಯವಾಗಿಲ್ಲ. ಅನಂತಸ್ವಾಮಿ ಉದ್ಯಾನವನದಲ್ಲಿ ಕುಳಿತುಕೊಳ್ಳಲು ಇನ್ನಷ್ಟು ಬೆಂಚ್‌ಗಳು ಬೇಕು. 
-ಅರುಣ್, ಅಶೋಕಪುರಂ

ದಂಡ ವಿಧಿಸಬೇಕು

ರಾಮಯ್ಯ ರಸ್ತೆಯ ಒಂದು ಬದಿ ಬಯಲು ಶೌಚಾಲಯವಾಗಿ ಬದಲಾಗಿದೆ. ಜನರು ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಮೂಗುಮುಚ್ಚಿಕೊಂಡು ಓಡಾಡಬೇಕಿದೆ. ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡಿದವರಿಗೆ ದಂಡ ವಿಧಿಸಲಾಗುತ್ತದೆ ಎಂಬುದನ್ನು ಕೇಳಿದ್ದೇನೆ. ಆದರೆ ಇಲ್ಲಿ ಯಾವುದೇ ಭಯವಿಲ್ಲದೆ ಜನರು ಮೂತ್ರ ವಿಸರ್ಜನೆ ಮಾಡುವರು. ಈ ಸಮಸ್ಯೆ ಬಗೆಹರಿಯಬೇಕಿದೆ.
–ಜಾನಕಿ, ಅಶೋಕಪುರಂ

ಇನ್ನೂ ಅಭಿವೃದ್ಧಿ ಆಗಬೇಕು

ನರ್ಮ್‌ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯ ನಿರೀಕ್ಷಿತ ವೇಗದಲ್ಲಿ ನಡೆದಿಲ್ಲ. ಒಂದೇ ಒಂದು ಮನೆ ಕೂಡಾ ಪೂರ್ಣಗೊಂಡಿಲ್ಲ. ಫಲಾನುಭವಿಗಳಲ್ಲಿ ನಾನೂ ಒಬ್ಬ. ಆದರೆ ಎರಡು ವರ್ಷಗಳಿಂದ ಕಾಯುತ್ತಿದ್ದೇನೆ. ಇನ್ನೂ ಕೆಲಸ ಆರಂಭವಾಗಿಲ್ಲ. ನಮ್ಮ ಬಡಾವಣೆಯಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ನಡೆದಿಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸಲು ಪಾಲಿಕೆ ಸದಸ್ಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕಿತ್ತು.
–ನಾಗೇಶ್, ಅಶೋಕಪುರಂ

ಜನರ ಸಹಕಾರ ಮುಖ್ಯ

ಪಾಲಿಕೆ ಸದಸ್ಯರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಇತಿಮಿತಿಗಳ ನಡುವೆಯೇ ವಾರ್ಡ್‌ನಲ್ಲಿ ಅಭಿವೃದ್ಧಿ ಕೆಲಸಗಳನ್ನು ನಡೆಸಿದ್ದಾರೆ. ರಸ್ತೆ, ಒಳಚರಂಡಿ ವ್ಯವಸ್ಥೆ ಉತ್ತಮವಾಗಿದೆ. ಕುಡಿಯುವ ನೀರಿನ ಸಮಸ್ಯೆಯಿಲ್ಲ. ಸ್ವಚ್ಚತೆ ಕಾಪಾಡಲು ಜನರ ಸಹಕಾರವೂ ಮುಖ್ಯ.
–ವಿ.ನಾರಾಯಣರಾವ್, ಕೃಷ್ಣಮೂರ್ತಿಪುರಂ

ಭದ್ರತಾ ಸಿಬ್ಬಂದಿ ನೇಮಿಸಿ

ಅಂಬೇಡ್ಕರ್ ಪಾರ್ಕ್‌ ‌ಅಭಿವೃದ್ಧಿಯಾಗಿದೆ. ಆದರೆ ಇನ್ನಷ್ಟು ಅಭಿವೃದ್ಧಿಗೆ ಅವಕಾಶಗಳಿವೆ. ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು. ವಾರ್ಡ್‌ನ ಅಭಿವೃದ್ಧಿಗೆ ಪಾಲಿಕೆ ಸದಸ್ಯರು ಗಂಭೀರ ಪ್ರಯತ್ನ ಮಾಡಿಲ್ಲ. ಆಸಕ್ತಿ ವಹಿಸಿ ಕೆಲಸ ಮಾಡಿದ್ದರೆ ಇನ್ನಷ್ಟು ಅಭಿವೃದ್ಧಿ ಕಾಣಬಹುದಿತ್ತು.
- ಗುರುಲಿಂಗಮ್ಮ, ಅಶೋಕಪುರಂ

 

ಚಿತ್ರಗಳು: ಬಿ.ಆರ್‌.ಸವಿತಾ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !