ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು ದೇವಾಲಯಕ್ಕೆ ಪ್ರವೇಶವಿಲ್ಲದಿದ್ದರೂ ಹುಣ್ಣಿಮೆ ಪೂಜೆ ಸಲ್ಲಿಸಿದ ಭಕ್ತರು

Last Updated 1 ಅಕ್ಟೋಬರ್ 2020, 16:16 IST
ಅಕ್ಷರ ಗಾತ್ರ

ನಂಜನಗೂಡು: ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಕೋವಿಡ್ ಸೋಂಕು ತಗುಲದಂತೆ ತಡೆಗಟ್ಟುವ ನಿಟ್ಟಿನಲ್ಲಿ ಗುರುವಾರ ದೇವಾಲಯ ಪ್ರವೇಶಕ್ಕೆ ನಿರ್ಬಂಧ ವಿಧಿಸಿ, ದೇವಾಲಯದ ಬಾಗಿಲು ಹಾಕಿದ್ದರೂ, ಭಕ್ತರು ದೇವಾಲಯದ ಹೊರಗೆ ಪೂಜೆ ಸಲ್ಲಿಸುವ ಮೂಲಕ ಹುಣ್ಣಿಮೆ ಸೇವೆ ನಡೆಸಿದರು.

ಭಕ್ತರು ಹುಣ್ಣಿಮೆಯ ದಿನ ಸ್ವಾಮಿಯ ದರ್ಶನ ಪಡೆದು, ಸೇವೆ ಸಲ್ಲಿಸುವುದು ಪ್ರತೀತಿ. ಕೊರೊನಾ ಸಂಕಷ್ಟದಿಂದ ಸರ್ಕಾರ ದೇವಾಲಯದಲ್ಲಿ ಹೆಚ್ಚಿನ ಜನ ಸೇರುವುದನ್ನು ತಡೆಯುವ ಸಲುವಾಗಿ ಹುಣ್ಣಿಮೆ ದಿನ ಭಕ್ತರು ದೇವಾಲಯ ಪ್ರವೇಶಿಸುವುದನ್ನು ನಿರ್ಬಂಧಿಸಿತ್ತು. ಆದರೂ ಗುರುವಾರ ಬೆಳಗಿನ ಜಾವ 5 ಗಂಟೆಯಿಂದಲೇ ಸಾವಿರಾರು ಭಕ್ತರು ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ದೇವಾಲಯದ ಹೊರಗೆ ಧೂಪ, ದೀಪದ ಸೇವೆ, ಉರುಳು ಸೇವೆ, ಹರಕೆ ಮುಡಿ ಸಲ್ಲಿಸಿ ಭಕ್ತಿ ಮೆರೆದರು.

ದೇವಾಲಯದಲ್ಲಿ ಹುಣ್ಣಿಮೆ ಪ್ರಯುಕ್ತ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಶ್ರೀಕಂಠೇಶ್ವರ ಸ್ವಾಮಿಗೆ ಐದು ಜಾವಗಳ ಅಭಿಷೇಕ, ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.

ದೇವಾಲಯದ ಹೊರಗೆ ಸೂಚನಾ ಫಲಕದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಸೋಂಕು ತಡೆಗಟ್ಟಲು ಅಕ್ಟೋಬರ್ ತಿಂಗಳಿನ 2ನೇ ಶನಿವಾರ ಮತ್ತು 4ನೇ ಶನಿವಾರ, ಭಾನುವಾರಗಳು ಹಾಗೂ ಸಾರ್ವತ್ರಿಕ ರಜಾ ದಿನ, ಹುಣ್ಣಿಮೆ ದಿನಗಳಲ್ಲಿ ದೇವಾಲಯಕ್ಕೆ ಭಕ್ತಾಧಿಗಳ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT