ಶುಕ್ರವಾರ, ಮೇ 20, 2022
23 °C
ಗಗನಯಾತ್ರಿಗಳಿಗೆ 35 ಬಗೆಯ ಆಹಾರ

‘ಮಿಷನ್‌ ಗಗನಯಾನ–2022’; ಡಿಎಫ್‌ಆರ್‌ಎಲ್‌ನಲ್ಲಿ ಸಿದ್ಧವಾಗುತ್ತಿದೆ ಆಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ‘ಗಗನಯಾನ–2022’ ಯೋಜನೆಗೆ ಅಗತ್ಯವಿರುವ ಆಹಾರ ಮೈಸೂರಿನ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯದಲ್ಲಿ (ಡಿಎಫ್‌ಆರ್‌ಎಲ್‌) ಸಿದ್ಧಗೊಳ್ಳುತ್ತಿದೆ.

ಮೂವರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮಹತ್ವಾ ಕಾಂಕ್ಷೆಯ ಯೋಜನೆಯನ್ನು ಇಸ್ರೊ ಇದೇ ಮೊದಲ ಬಾರಿ ಕೈಗೊಂಡಿದ್ದು, ಅಗತ್ಯ ತಯಾರಿ ನಡೆಯುತ್ತಿದೆ. 2022ರ ಆಗಸ್ಟ್‌ ವೇಳೆಗೆ ಈ ಯೋಜನೆ ಕಾರ್ಯಗತಗೊಳ್ಳುವ ಸಾಧ್ಯತೆಯಿದೆ. ಗಗನಯಾನಿಗಳು 5ರಿಂದ 7 ದಿನ ಬಾಹ್ಯಾಕಾಶದಲ್ಲಿ ಕಳೆಯಲಿದ್ದಾರೆ. 

ಆ ಅವಧಿಯಲ್ಲಿ ಅವರಿಗೆ ತಿನ್ನಲು ಬೇಕಾದ ಆಹಾರ ಸಿದ್ಧಪಡಿಸುವಂತೆ ಇಸ್ರೊ ಈ ಹಿಂದೆಯೇ ಕೋರಿಕೆ ಸಲ್ಲಿಸಿತ್ತು. ಇಸ್ರೊ ಮನವಿಯಂತೆ ಡಿಎಫ್‌ಆರ್‌ಎಲ್‌ನಲ್ಲಿ ಈಗಾಗಲೇ 35 ಬಗೆಯ ಆಹಾರ ಪದಾರ್ಥ ಸಿದ್ಧಪಡಿ ಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವೆಜ್‌ ಪಲಾವ್, ವೆಜ್‌ ರೋಲ್, ಎಗ್‌ ರೋಲ್‌, ಚಿಕನ್‌ ಬಿರಿಯಾನಿ, ಚಿಕನ್‌ ಕುರ್ಮಾ, ಇಡ್ಲಿ, ಮೂಂಗ್‌ ದಾಲ್‌ ಹಲ್ವಾ ಮುಂತಾದ ಆಹಾರ ಪದಾರ್ಥಗಳು ಇದರಲ್ಲಿ ಸೇರಿವೆ. ಇದಲ್ಲದೆ ಕಾಫಿ, ಟೀ, ಹಣ್ಣಿನ ರಸ, ನ್ಯೂಟ್ರಿಷನ್‌ ಬಾರ್‌ಗಳನ್ನೂ ಸಿದ್ಧಪಡಿಸಲಾಗಿದೆ. ವರ್ಷ ಕಳೆದರೂ ಕೆಡದ ರೀತಿಯ ಆಹಾರವನ್ನು  ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ಭಿನ್ನ ರೀತಿಯ ತಯಾರಿಕಾ ವಿಧಾನ ಅನುಸರಿಸಲಾಗಿದೆ.

ಗಗನಯಾತ್ರಿಗಳು ತಮಗೆ ಬೇಕಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳಲಿದ್ದು, ಅವರ ಬೇಡಿಕೆಗೆ ಅನುಗುಣವಾಗಿ ಆಹಾರ ಪದಾರ್ಥಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಬಾಹ್ಯಾಕಾಶದಲ್ಲಿದ್ದರೂ, ಮನೆಯಲ್ಲಿ ಸಿದ್ಧಪಡಿಸುವಂತಹ ಆಹಾರವನ್ನೇ ಸೇವಿಸಲಿದ್ದಾರೆ.

‘ಗಗನಯಾನಿಗಳು ವಿಭಿನ್ನವಾದ ವಾತಾವರಣದಲ್ಲಿ ವಾಸಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಯಂತ್ರಿತ ಆಹಾರವನ್ನೇ ಸೇವಿಸಬೇಕು. ಹಾಗಾಗಿ, ಈ ಸನ್ನಿವೇಶವನ್ನು ಅರ್ಥ ಮಾಡಿಕೊಂಡು ಅಗತ್ಯ ಆಹಾರ ತಂತ್ರಜ್ಞಾನವನ್ನು ನೀಡುವಂತೆ ಇಸ್ರೊ ಕೋರಿಕೆ ಸಲ್ಲಿಸಿತ್ತು’ ಎಂದು ಡಿಎಫ್‌ಆರ್‌ಎಲ್‌ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು