ಬುಧವಾರ, ಫೆಬ್ರವರಿ 19, 2020
28 °C

ಮೈಸೂರಿಗೆ ಮತ್ತೆ ಸ್ವಚ್ಛ ನಗರಿ ಗರಿಮೆ ದೊರಕುವುದೇ?

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ದೊಡ್ಡ ದೊಡ್ಡ ನಗರಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ. ಅದರಲ್ಲೂ ಪ್ರವಾಸಿ ತಾಣಗಳಲ್ಲಿ ಅದು ಮತ್ತಷ್ಟು ಸವಾಲಿನ ವಿಷಯ. ಇಂಥ ಸವಾಲುಗಳ ನಡುವೆ ಮೈಸೂರು ಈ ಹಿಂದೆ ಅಗ್ರಪಟ್ಟ ಪಡೆದು ಸದ್ದು ಮಾಡಿತ್ತು. ಈಗ ಮತ್ತೆ ಆ ಗರಿಮೆ ಪಡೆಯಲು ಪ್ರಯತ್ನ ನಡೆಸಿದೆ. ನಾಗರಿಕರು, ಪೌರಕಾರ್ಮಿಕರು, ಅಧಿಕಾರಿಗಳು ಬಹಳಷ್ಟು ಶ್ರಮ ಹಾಕಿದ್ದಾರೆ. ನೋಡೋಣ ಏನಾಗುತ್ತೆ?

ಒಂದು ತಿಂಗಳು ಮಾತ್ರ ಕಸ ಸಂಗ್ರಹಿಸಿ ಸ್ವಚ್ಛ ನಗರಿ ಪಟ್ಟ ಗಿಟ್ಟಿಸಿದರೆ ಅದರಿಂದ ಅನುಕೂಲವೇನು? ಕೆಲವೇ ಸ್ಥಳಗಳಲ್ಲಿ ಸ್ವಚ್ಛ ಮಾಡಿ ಒಳಗಿನ ಹುಳುಕು ಹಾಗೆ ಉಳಿದರೆ ಏನು ಪ್ರಯೋಜನ?

ನಿಜ, ನಗರದ ಒಳಹೊಕ್ಕು ನೋಡಿದಾಗ ಇಂಥ ಪ್ರಶ್ನೆ ಉದ್ಭವಿಸುವುದು ಸಹಜ. ಈಗಲೂ ಕೆಲ ಬಡಾವಣೆಗಳಲ್ಲಿ ಕಸದ ರಾಶಿಯೇ ಬಿದ್ದಿರುತ್ತದೆ. ರಸ್ತೆಗಳಲ್ಲಿ ಬಿದ್ದಿರುವ ಎಲೆ, ಇತರ ತ್ಯಾಜ್ಯ ಗುಡಿಸಿ ತಿಂಗಳುಗಳೇ ಕಳೆದಿರುತ್ತದೆ. ಇಷ್ಟಾಗಿಯೂ ಸ್ವಚ್ಛನಗರಿ ಎಂಬ ಪಟ್ಟ ಯಾರಿಗೆ ಬೇಡ ಹೇಳಿ? ಈ ನೆಪದಲ್ಲಾದರೂ ಕೆಲ ಪ್ರದೇಶಗಳು ಸ್ವಚ್ಛಗೊಂಡಂತಾಗುವುದಿಲ್ಲವೇ? ಸ್ವಚ್ಛತೆ ಬಗ್ಗೆ ಜನರಲ್ಲಿ ಒಂದಿಷ್ಟು ಜಾಗೃತಿ ಮೂಡಿದಂತಾಗುವುದಿಲ್ಲವೇ?

ಉತ್ತಮ ರ‍್ಯಾಂಕ್‌ ಪಡೆಯುವುದರಿಂದ ನಗರಕ್ಕೆ ವಿಶೇಷ ಅನುದಾನ ದೊರೆಯುವುದಿಲ್ಲ. ಆದರೆ, ವಿವಿಧ ಯೋಜನೆಗಳಲ್ಲಿ ಆಯ್ಕೆಗೆ ಯತ್ನಿಸಬಹುದು. ಪ್ರವಾಸೋದ್ಯಮ ಅಭಿವೃದ್ಧಿಗೆ, ಹೂಡಿಕೆದಾರರನ್ನು ಸೆಳೆಯಲು ಪೂರಕವಾಗುತ್ತದೆ. ದೇಶದ ಮಟ್ಟದಲ್ಲಿ ಗಮನ ಸೆಳೆಯಬಹುದು.

ಉಳಿದ ದೇಶಗಳಿಗೆ ಹೋಲಿಸಿದರೆ ಮೈಸೂರಿನ ವಾತಾವರಣ ಅತ್ಯಂತ ಸುಂದರವಾಗಿದೆ. ನೈಸರ್ಗಿಕ ಸೊಬಗು ಇಲ್ಲಿದೆ. ವಾಸ ಮಾಡಲು ಯೋಗ್ಯ, ಸುರಕ್ಷಿತವೂ ಆದ ವಾತಾವರಣವನ್ನು ಮೈದುಂಬಿಕೊಂಡಿದೆ. ಜೊತೆಗೆ ಹಲವಾರು ಪ್ರೇಕ್ಷಣ ಹಲವು ಪ್ರವಾಸಿ ತಾಣಗಳೂ ಇವೆ.

ಈ ಬಾರಿಯೂ ಮಲ್ಲಿಗೆ ನಗರಿ ಮೈಸೂರು ಸ್ವಚ್ಛ ನಗರಿ ಬಿರುದನ್ನು ಪಡೆದುಕೊಳ್ಳುವಂತೆ ಮಾಡಲು ಮೈಸೂರು ಮಹಾನಗರ ಪಾಲಿಕೆ ಪಣ ತೊಟ್ಟಿದೆ.

ಸುತ್ತೂರು ದೇಶಿಕೇಂದ್ರ ಸ್ವಾಮೀಜಿ, ಜಾವಗಲ್‌ ಶ್ರೀನಾಥ್‌, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಸೇರಿದಂತೆ ಹಲವರು ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ. ಅದಕ್ಕೆ ತಕ್ಕಂತೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜನವರಿ 4ರಿಂದ 31ರವರೆಗೆ ‘ಸ್ವಚ್ಛ ಸರ್ವೇಕ್ಷಣೆ–2020’ ನಡೆದಿದೆ. ಇದೇ ಪ್ರಥಮ ಬಾರಿ ಮೂರು ಹಂತದ ಸಮೀಕ್ಷೆ ಕೈಗೊಂಡು ರ‍್ಯಾಂಕಿಂಗ್‌ ನೀಡುವ ಪದ್ಧತಿ ಪ್ರಾರಂಭಿಸಲಾಗಿದೆ. ಇದುವರೆಗೆ ಒಂದೇ ಹಂತದಲ್ಲಿ ಸಮೀಕ್ಷೆ ಕೈಗೊಂಡು ರ‍್ಯಾಂಕಿಂಗ್‌ ನೀಡಲಾಗುತಿತ್ತು. ಮೈಸೂರು ನಗರವು ಮೊದಲ ತ್ರೈಮಾಸಿಕ ವರದಿಯಲ್ಲಿ 22ನೇ ಸ್ಥಾನ, ಎರಡನೇ ತ್ರೈಮಾಸಿಕ ವರದಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ. ಅಂತಿಮ ಹಂತದ ಸರ್ವೇ ಕಾರ್ಯ ಜ. 4ರಂದು ಆರಂಭವಾಗಿ 31ರಂದು ಮುಗಿದಿದೆ. 1 ರಿಂದ 10 ಲಕ್ಷ ಜನಸಂಖ‍್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಈ ಶ್ರೇಯಾಂಕ ನೀಡಲಾಗುತ್ತಿದೆ. ಸದ್ಯಕ್ಕೆ ಜಾರ್ಖಂಡ್‌ನ ಜೆಮ್‌ಷೆಡ್‌ಪುರ ಮೊದಲ ಸ್ಥಾನ ಕಾಯ್ದುಕೊಂಡಿದೆ. ‌

ಏಳು ಜನರಿರುವ ಕೇಂದ್ರದ ತಂಡ ಮೈಸೂರಿಗೆ ಭೇಟಿ ನೀಡಿ ವಿವಿಧೆಡೆ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಿ ಹೋಗಿದೆ. ಸ್ಥಳೀಯರೊಂದಿಗೆ ಸಂವಾದ ನಡೆಸಿ ಸ್ವಚ್ಛತೆ ಕುರಿತಂತೆ ಮಾಹಿತಿ ಪಡೆದಿದೆ.

ದೇಶದ ಸ್ವಚ್ಛ ನಗರಿ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲು ನಿಗದಿಪಡಿಸಿರುವ ವಿವಿಧ ಮಾನದಂಡಗಳಲ್ಲಿ ನಾಗರಿಕರ ಪ್ರತಿಕ್ರಿಯೆಯೂ ಒಂದು. ಮೈಸೂರು ಮತ್ತೆ ಪಟ್ಟಕ್ಕೇರುವ ನಿಟ್ಟಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಕೊನೆಯ ದಿನದೊಳಗೆ ಕನಿಷ್ಠ 1 ಲಕ್ಷ (10 ಲಕ್ಷ ಜನಸಂಖ್ಯೆಯ ಶೇ 10) ಪ್ರತಿಕ್ರಿಯೆ ಪಡೆಯಬೇಕು.

‘ಈ ಸಲ ಕಳೆದ ಬಾರಿಗಿಂತ ನಾಗರಿಕರ ಸ್ಪಂದನೆ (ಸಿಟಿಜನ್‌ ಫೀಡ್‌ಬ್ಯಾಕ್‌) ಉತ್ತಮವಾಗಿದೆ. ಸುಮಾರು 1.20 ಲಕ್ಷ ಮಂದಿ ಸ್ವಚ್ಛತಾ ಆ್ಯಪ್‌ನಲ್ಲಿ ಸ್ವಚ್ಛತೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಉತ್ತಮ ಸ್ಥಾನ ಗಿಟ್ಟಿಸುವ ಭರವಸೆ’ ಎಂದು ಹೇಳುತ್ತಾರೆ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ.

65 ವಾರ್ಡ್‌ಗಳಲ್ಲಿ ‌ವಿಶೇಷ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ. ಪೌರ ಕಾರ್ಮಿಕರು ಹೆಚ್ಚಿನ ಅವಧಿಯಲ್ಲಿ ಕೆಲಸ ಮಾಡಿದ್ದಾರೆ. ಪಾಲಿಕೆಯೊಂದಿಗೆ ಗುತ್ತಿಗೆದಾರರ ಸಂಘ, ಶಾಲಾ ಮಕ್ಕಳು, ವಿವಿಧ ಸಂಘಟನೆಗಳು ಕೈ ಜೋಡಿಸಿವೆ. ಸಾಮಾಜಿಕ ಜಾಲತಾಣದ ಮೂಲಕವೂ ಜಾಗೃತಿ ಪ್ರಚಾರ ನಡೆಸಲಾಗಿದೆ.

ಪ್ರಮುಖವಾಗಿ ಸಾರ್ವಜನಿಕ ಶೌಚಾಲಯ, ಸಮುದಾಯ ಶೌಚಾಲಯ, ಕಸ ನಿರ್ವಹಣಾ ಘಟಕ, ಉದ್ಯಾನ ಸೇರಿದಂತೆ ವಿವಿಧೆಡೆ ತೆರಳಿ ಸ್ವಚ್ಛತೆ ಪರಿಶೀಲಿಸಿದೆ. ಅಲ್ಲದೇ, ಮನೆ ಮನೆಯಿಂದ ಪೌರ ಕಾರ್ಮಿಕರು ಕಸ ಸಂಗ್ರಹ ಮಾಡುವ ವಿಧಾನ, ಜನರು ಹಸಿ ಮತ್ತು ಒಣಕಸ ಬೇರ್ಪಡಿಸಿ ನೀಡುವ ಬಗೆ, ಚರಂಡಿ ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಿದೆ.

ನಗರಗಳಲ್ಲಿ ಯಾವ ರೀತಿ ಸ್ವಚ್ಛತೆ ಕಾಪಾಡಲಾಗುತ್ತಿದೆ ಎಂಬುದನ್ನು ಮಾಪನ ಮಾಡಲು ಕೇಂದ್ರ ಸರ್ಕಾರವು 2010ರಿಂದ ರಾಷ್ಟ್ರಮಟ್ಟದಲ್ಲಿ ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆ ನಡೆಸುತ್ತಿದೆ. 2014-15, 15-16ರಲ್ಲಿ ನಡೆದ ಸಮೀಕ್ಷೆಯಲ್ಲಿ ದೇಶದಲ್ಲಿಯೆ ಅತ್ಯಂತ ಸ್ವಚ್ಛನಗರ ಗರಿಮೆಗೆ ಅರಮನೆ ನಗರಿ ಪಾತ್ರವಾಗಿತ್ತು. 2016-17ರಲ್ಲಿ 5ನೇ ಸ್ಥಾನ, 2017-18ರಲ್ಲಿ 8ನೇ ಸ್ಥಾನಕ್ಕೆ ಕುಸಿದಿತ್ತು. ಕಳೆದ ಬಾರಿಯ ಸ್ವಚ್ಛ ಸರ್ವೇಕ್ಷಣೆ ಅಭಿಯಾನದಲ್ಲಿ ಮೂರನೇ ಸ್ಥಾನ ದೊರೆತಿತ್ತು. 2018ರಲ್ಲಿ ಮಧ್ಯಮ ನಗರ ವಿಭಾಗದಲ್ಲಿ (3 ರಿಂದ 10 ಲಕ್ಷ ಜನಸಂಖ್ಯೆ) ದೇಶದ ನಂಬರ್‌ 1 ಸ್ವಚ್ಛ ನಗರಿ ಪಟ್ಟ ಗಿಟ್ಟಿಸಿಕೊಂಡಿತ್ತು. 2016ರಲ್ಲಿ ಬಯಲು ಶೌಚಮುಕ್ತ ನಗರ ಪ್ರಶಸ್ತಿ, 2019ರಲ್ಲಿ ತ್ಯಾಜ್ಯ ಮುಕ್ತ ನಗರಿ ಪ್ರಶಸ್ತಿಯನ್ನೂ ಮೈಸೂರು ಮುಡಿಗೇರಿಸಿ ಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು