ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಕೊಳದ ಲೆಕ್ಕ ಕೊಟ್ಟರಾ? ಜಿಲ್ಲಾಧಿಕಾರಿ ವಿರುದ್ಧ ಪ್ರತಾಪಸಿಂಹ ಮತ್ತೆ ವಾಗ್ದಾಳಿ

Last Updated 1 ಜೂನ್ 2021, 9:28 IST
ಅಕ್ಷರ ಗಾತ್ರ

ಮೈಸೂರು: ‘ಕೋವಿಡ್‌ ನಿರ್ವಹಣೆಗೆ ಖರ್ಚು ಮಾಡಿದ ಹಣದ ಬಗ್ಗೆ ಲೆಕ್ಕ ಕೇಳಿದ್ದೆ. ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದಾರಾ? ಈ ಸಂದರ್ಭದಲ್ಲಿ ಸಾರ್ವಜನಿಕರ ಹಣವನ್ನು ದುಂದುವೆಚ್ಚ ಮಾಡಬಾರದು. ಹೀಗಾಗಿ, ಈಜುಕೊಳ ನಿರ್ಮಾಣಕ್ಕೆ ಬಳಸಿದ ಹಣ ಯಾವುದೆಂದು ಕೇಳಿದ್ದೆ. ಅದಕ್ಕೆ ಲೆಕ್ಕ ಕೊಟ್ಟಿದ್ದಾರಾ?’ ಎಂದು ಸಂಸದ ಪ್ರತಾಪಸಿಂಹ ಮತ್ತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮುಗಿಬಿದ್ದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸರ್ಕಾರದ ಮಾರ್ಗಸೂಚಿ ಅನುಸರಿಸದೇ ಸ್ಟೆಪ್‌ಡೌನ್‌ ಆಸ್ಪತ್ರೆಗಳಿಗೆ ಅನುಮತಿ ಕೊಟ್ಟಿದ್ದು ಏಕೆ ಎಂಬುದಾಗಿ ಕೇಳಿದೆ. ಯಾರಿಗಾದರೂ ಉತ್ತರ ಸಿಕ್ಕಿದೆಯೇ? ಬೆಡ್, ಊಟ, ಕೊಠಡಿ ಬಾಡಿಗೆಗೆ ಇಷ್ಟಾಯಿತು ಎಂದು ಲೆಕ್ಕ ತೋರಿಸಿ ₹ 4, 3, 2, 5 ಕೋಟಿ ಎಂದು ಬರೆದರೆ ಹೇಗೆ? ವಸ್ತು ಮತ್ತು ವೆಚ್ಚ ಹೇಳಬೇಕು. ಏಕೆಂದರೆ ಇದು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಅನುದಾನ. ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಲೆಕ್ಕ ಕೇಳಲೇಬೇಕಾಗುತ್ತದೆ' ಎಂದರು.

‘ಹಿಂದಿನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಇದ್ದಾಗ ಅವರ ಬಳಿ ಯಾರೂ ಲೆಕ್ಕ ಕೇಳಿಲ್ಲ. ಏಕೆಂದರೆ ಪಾರದರ್ಶಕವಾಗಿ ನಡೆದುಕೊಂಡರು. ಪ್ರಶ್ನೆ ಮಾಡುವ ಸಂದರ್ಭವೇ ಉದ್ಭವಿಸಲಿಲ್ಲ’ ಎಂದು ತಿಳಿಸಿದರು.

‘ಇದು ಯಾರ ವಿರುದ್ಧದ ವೈಯಕ್ತಿಕ ದಾಳಿ ಅಲ್ಲ. ನಾನೇನು ಖಾಸಗಿ ಬದುಕಿನ ಬಗ್ಗೆ ಕೇಳಿದ್ದೇನೆಯೇ? ಅವರ ಆಸ್ತಿ ಬಗ್ಗೆ ಕೇಳಿದ್ದೇನೆಯೇ? ಸಾರ್ವಜನಿಕ ಹಣದ ಬಗ್ಗೆ ಪ್ರಶ್ನಿಸುತ್ತಿದ್ದೇನೆ ಅಷ್ಟೆ’ ಎಂದು ಹೇಳಿದರು.

‘ಇನ್ನುಮುಂದೆ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ನನಗೆ ನೀಡಿರುವ ಜವಾಬ್ದಾರಿ ನಿಭಾಯಿಸುತ್ತೇನೆ. ಜಿಲ್ಲೆಯ ಎಲ್ಲರಿಗೂ ಲಸಿಕೆ ಕೊಡಿಸುವ ಜವಾಬ್ದಾರಿ ನನ್ನದು’ ಎಂದರು.

‘ಸಾವಿನ ಲೆಕ್ಕದಲ್ಲಿ ವ್ಯತ್ಯಾಸವಿದೆ’

‘ಮೈಸೂರು ಜಿಲ್ಲೆಯಹಲವು ಕಡೆ ಪ್ರವಾಸ ಮಾಡುತ್ತಿದ್ದು, ಜನರು ದೂರು ನೀಡುತ್ತಿದ್ದಾರೆ. ಕೋವಿಡ್‌ನಿಂದ ಹೆಚ್ಚು ಸಾವು ಸಂಭವಿಸುತ್ತಿರುವ ಬಗ್ಗೆ ವರದಿಗಳು ಬರುತ್ತಿವೆ. ನಿತ್ಯ 15ರಿಂದ 20 ಸಾವುಗಳು ಸಂಭವಿಸುತ್ತಿವೆ. ಸಭೆಯಲ್ಲೂ ಈ ವಿಚಾರ ಪ್ರಸ್ತಾಪಿಸಿದ್ದೆ. ಸಾವಿನ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ’ ಎಂದು ಎಂದು ಪ್ರತಾಪಸಿಂಹ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT