ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಉಸ್ತುವಾರಿ ಬದಲಾವಣೆಗೆ ಮುಖಂಡರ ಅಸಮಾಧಾನ

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಹೆಗಲಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಹೊಣೆ; ಮೊದಲ ದಿನವೇ ಸಭೆ
Last Updated 11 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವಸತಿ ಸಚಿವ ವಿ.ಸೋಮಣ್ಣ ಅವರಿಗಿದ್ದ ಮೈಸೂರು ಜಿಲ್ಲಾ ಉಸ್ತುವಾರಿಯ ಹೊಣೆ ಬದಲಾಯಿಸಿದ್ದಕ್ಕೆ ಜಿಲ್ಲೆಯ ಬಿಜೆಪಿ ಮುಖಂಡರು, ಕಾರ್ಯಕರ್ತರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್‌–19 ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಹೊತ್ತಲ್ಲಿ ಬದಲಾವಣೆ ಮಾಡಿದ್ದಕ್ಕೆ ಅಸಮಾಧಾನವೂ ವ್ಯಕ್ತವಾಗಿದೆ.

‘ಸೋಮಣ್ಣ ಅವರಿಗೆ ಜಿಲ್ಲೆಯ ಪರಿಚಯವಿತ್ತು. ಜಿಲ್ಲಾಡಳಿತದ ಮೇಲೆ ಹಿಡಿತವಿತ್ತು. ಹಲವು ವರ್ಷದಿಂದ ಬಿಜೆಪಿಯಲ್ಲಿದ್ದು, ಮುಖಂಡರು–ಕಾರ್ಯಕರ್ತರ ನಾಡಿಮಿಡಿತದ ಅರಿವಿತ್ತು. ಅವರನ್ನು ಇದೀಗ ಬದಲಿಸಿದ್ದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಸಂಘ ಪರಿವಾರದ ಮುಖಂಡರೊಬ್ಬರು ‘ಪ್ರಜಾವಾಣಿ’ ಬಳಿ ತಮ್ಮೊಳಗಿನ ಅಸಮಾಧಾನ ವ್ಯಕ್ತಪಡಿಸಿದರು.

‘ಎಸ್‌.ಟಿ.ಸೋಮಶೇಖರ್‌ಗೆ ಕೊಡಗು ಜಿಲ್ಲೆಯ ಉಸ್ತುವಾರಿ ಹೊಣೆ ನೀಡಬಹುದಿತ್ತು. ಸೋಮಶೇಖರ್ ಬಿಜೆಪಿಗೆ ಹೊಸಬರು. ಸಿದ್ದರಾಮಯ್ಯ ಶಿಷ್ಯ ಪಡೆಯಲ್ಲಿ ಗುರುತಿಸಿಕೊಂಡಿದ್ದವರು. ಇನ್ನೂ ಬಿಜೆಪಿಯ ಪರಿಸರಕ್ಕೆ ಒಗ್ಗಿಕೊಂಡಿಲ್ಲ. ಕೋವಿಡ್‌–19 ಹೆಚ್ಚುತ್ತಿರುವ ಹೊತ್ತಲ್ಲಿ ಬದಲಾವಣೆ ಮಾಡಿದ್ದು ಒಳ್ಳೆಯದಲ್ಲ. ಪರಿವಾರದ ಹಿರಿಯರ ಜತೆ ಮಾತನಾಡಿರುವೆ. ಸೋಮಣ್ಣ ಅವರನ್ನೇ ಸದ್ಯದ ಪರಿಸ್ಥಿತಿಯಲ್ಲಿ ಮುಂದುವರೆಸುವಂತೆ ಯಡಿಯೂರಪ್ಪ ಜತೆ ಮಾತನಾಡಲು ಕೇಳಿಕೊಂಡಿರುವೆ’ ಎಂದು ಅವರು ಹೇಳಿದರು.

‘ಸಚಿವರ ಬದಲಾವಣೆಯಾಗುತ್ತಿದ್ದಂತೆ ಹಲವು ಕಾರ್ಯಕರ್ತರು ಮೊಬೈಲ್ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ಕೆಲ ಪ್ರಭಾವಿಗಳೇ ತಮ್ಮ ಹಿಡಿತ ಹೆಚ್ಚಿಸಿಕೊಳ್ಳಲು, ತಮ್ಮದೇ ಆಡಳಿತ ನಡೆಸಲು ನಡೆಸಿದ ಕುತಂತ್ರ ಕಾರ್ಯಾಚರಣೆಯಿದು ಎಂದು ಅಲವತ್ತುಕೊಂಡರು. ಇದನ್ನೂ ಹಿರಿಯರ ಗಮನಕ್ಕೆ ತಂದಿರುವೆ’ ಎಂದು ಅವರು ತಿಳಿಸಿದರು.

ಹಸ್ತಕ್ಷೇಪ ನಡೆಸುತ್ತಿರಲಿಲ್ಲ: ‘ಜಿಲ್ಲಾ ಉಸ್ತುವಾರಿ ಸಚಿವರಾದರೂ ಸೋಮಣ್ಣ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿರಲಿಲ್ಲ. ಮಾಧ್ಯಮದವರ ಮುಂದೆ ಗದರಿದರೂ, ಚೆನ್ನಾಗಿ ಕೆಲಸ ಮಾಡುವ ಅಧಿಕಾರಿಗಳನ್ನು ಎಲ್ಲರ ಎದುರೇ ಪ್ರಶಂಸಿಸುತ್ತಿದ್ದರು. ದಸರಾ ಪಾಸ್‌ ಹಾಗೂ ಟಿಪ್ಪು ಜಯಂತಿಗೆ ಬನ್ನಿಮಂಟಪ ಕೊಡಬಾರದು ಎಂದಷ್ಟೇ ತಾಕೀತು ಮಾಡಿದ್ದು ಬಿಟ್ಟರೇ, ಬೇರೆ ಇನ್ಯಾವ ವಿಷಯದಲ್ಲೂ ಮೂಗು ತೂರಿಸಲಿಲ್ಲ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು. ಉಸ್ತುವಾರಿ ಸಚಿವರಾಗಿ ವಿ.ಸೋಮಣ್ಣ ನಡೆಸಿದ ಆಡಳಿತ ವೈಖರಿಗೆ ಅಧಿಕಾರಿ ವಲಯದಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ.

ಮೈಸೂರಿಗೆ ಶತ ಪ್ರಯತ್ನ...
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಯಲು ಸಚಿವ ವಿ.ಸೋಮಣ್ಣ ಶತ ಪ್ರಯತ್ನ ನಡೆಸಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ರಾಜಕಾರಣ ಪ್ರವೇಶಿಸಿದ ದಿನದಿಂದಲೂ ಮಠಗಳ ಸಂಪರ್ಕ ಹೊಂದಿರುವ ಸೋಮಣ್ಣ, ಮೈಸೂರು ಉಸ್ತುವಾರಿಯಾಗಿಯೇ ಮುಂದುವರೆಯಲು ಮಠಾಧೀಶರ ಪ್ರಭಾವ ಬಳಸಿಕೊಂಡು ಮುಖ್ಯಮಂತ್ರಿ ಯಡಿಯೂರ‌ಪ್ಪ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಕೋವಿಡ್‌ ಕಾರಣವಾಯ್ತೇ..?
ಕೋವಿಡ್‌–19 ಪೀಡಿತರ ಸಂಖ್ಯೆಯಲ್ಲಿ ಮೈಸೂರು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿ ಹಾಟ್‌ಸ್ಪಾಟ್‌ ಎಂದು ಗುರುತಿಸಿ, ರೆಡ್‌ ಅಲರ್ಟ್‌ ಘೋಷಣೆಯಾಗಿದೆ.

ಕೊರೊನಾ ವೈರಸ್ ಸೋಂಕು ಪತ್ತೆಯಾದ ಆರಂಭದಲ್ಲಿ ಸೋಮಣ್ಣ ಜಿಲ್ಲೆಗೆ ಭೇಟಿ ನೀಡದಿದ್ದುದು ಉಸ್ತುವಾರಿ ಹೊಣೆಗೆ ಮುಳುವಾಯಿತೇ ಎಂಬ ಚರ್ಚೆಯೂ ನಡೆದಿದೆ.

ರಾತ್ರಿಯೇ ಬೆಂಗಳೂರಿಗೆ..!
ಮೈಸೂರು ಜಿಲ್ಲಾ ಉಸ್ತುವಾರಿಯ ಹೊಣೆ ಕೈ ತಪ್ಪುತ್ತಿದ್ದಂತೆ, ತಮ್ಮ ಪ್ರವಾಸವನ್ನು ರದ್ದುಗೊಳಿಸಿದ ಸೋಮಣ್ಣ ಗುರುವಾರ ರಾತ್ರಿಯೇ ಬೆಂಗಳೂರಿಗೆ ದೌಡಾಯಿಸಿದರು.

ಕೋವಿಡ್‌–19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮೈಸೂರು, ಕೊಡಗು ಜಿಲ್ಲಾ ಪ್ರವಾಸವನ್ನು ಸಚಿವರು ಕೈಗೊಂಡಿದ್ದರು. ಗುರುವಾರವಷ್ಟೇ ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದ ಸಚಿವರು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಬದಲಾವಣೆಯಾದ ಸುದ್ದಿ ತಿಳಿಯುತ್ತಿದ್ದಂತೆ, ಅಸಮಾಧಾನಗೊಂಡ ಸೋಮಣ್ಣ ಮೈಸೂರು–ಕೊಡಗು ಜಿಲ್ಲೆಯಲ್ಲಿ ಎರಡ್ಮೂರು ದಿನ ಹಮ್ಮಿಕೊಂಡಿದ್ದ ಎಲ್ಲ ಕಾರ್ಯಕ್ರಮ ರದ್ದುಗೊಳಿಸಿ, ರಾತ್ರಿಯೇ ಬೆಂಗಳೂರಿಗೆ ಮರಳಿದರು ಎಂಬುದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT