ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚ್ಛೇದಿತ ದಂಪತಿಗೆ ಮರುವಿವಾಹ ಭಾಗ್ಯ! ಅಪರೂಪದ ಕ್ಷಣಕ್ಕೆ ಲೋಕ ಅದಾಲತ್ ಸಾಕ್ಷಿ

ಮೂರು ದಶಕದ ದಾಂಪತ್ಯ: ಅಪರೂಪದ ಕ್ಷಣಕ್ಕೆ ಲೋಕ ಅದಾಲತ್ ಸಾಕ್ಷಿ
Last Updated 14 ಆಗಸ್ಟ್ 2021, 15:51 IST
ಅಕ್ಷರ ಗಾತ್ರ

ಮೈಸೂರು: ನಾಲ್ಕು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ದಂಪತಿ ಮನಸ್ತಾಪ ಬದಿಗಿಟ್ಟು ಮತ್ತೆ ಒಂದಾದ ಅಪರೂಪದ ಕ್ಷಣಕ್ಕೆ ನಗರದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ ಸಾಕ್ಷಿಯಾಯಿತು.

ಜ್ಯೋತಿ ನಗರದ ಮಾರ (50 ವರ್ಷ) ಮತ್ತು ಗೀತಾ (47 ವರ್ಷ) ಮರು ವಿವಾಹಕ್ಕೆ ಒಪ್ಪಿಕೊಂಡ ಜೋಡಿ. 1989ರಲ್ಲಿ ಮದುವೆಯಾಗಿದ್ದ ಅವರಿಗೆ ಮೂವರು ಮಕ್ಕಳಿದ್ದಾರೆ. ದಂಪತಿ ನಡುವೆ ಮನಸ್ತಾಪ ಉಂಟಾಗಿ ಮೂರು ದಶಕಗಳ ದಾಂಪತ್ಯ ಜೀವನವನ್ನು ಪರಸ್ಪರರ ಸಮ್ಮತಿಯೊಂದಿಗೆ 2018 ರಲ್ಲಿ ಕೊನೆಗೊಳಿಸಿ ವಿಚ್ಛೇದನ ಪಡೆದಿದ್ದರು. ದಂಪತಿಯ ಮೂವರು ಮಕ್ಕಳಿಗೂ ಮದುವೆಯಾಗಿದೆ.

ಪತ್ನಿಗೆ ಪ್ರತಿ ತಿಂಗಳು ₹3 ಸಾವಿರ ಜೀವನಾಂಶ ನೀಡುವಂತೆ ಇಲ್ಲಿನ 2ನೇ ಕೌಟುಂಬಿಕ ನ್ಯಾಯಾಲಯ ಆದೇಶಿಸಿತ್ತು. ಜೀವನಾಂಶ ಸರಿಯಾಗಿ ದೊರೆಯದ ಕಾರಣ ಗೀತಾ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ 2ನೇ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಎಚ್‌.ಎಂ.ವಿರೂಪಾಕ್ಷಯ್ಯ, ಲೋಕ ಅದಾಲತ್‌ನಲ್ಲಿ ದಂಪತಿಯನ್ನು ಮತ್ತೆ ಒಂದುಗೂಡಿಸಲು ಪ್ರಯತ್ನಿಸಿ ಯಶಸ್ವಿಯಾದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಂ.ಎಲ್‌.ರಘುನಾಥ್‌ ಅವರ ಸಮ್ಮುಖದಲ್ಲಿ ಇಬ್ಬರೂ ಸಾಂಕೇತಿಕವಾಗಿ ಹಾರ ಬದಲಾಯಿಸಿಕೊಂಡರು. ನ್ಯಾಯಾ ಧೀಶರು ಅಕ್ಷತೆ ಹಾಕಿ ಶುಭ ಕೋರಿದರು.

‘ನ್ಯಾಯಾಧೀಶನಾಗಿ ಎರಡೂವರೆ ದಶಕದಿಂದ ಸೇವೆ ಸಲ್ಲಿಸುತ್ತಿದ್ದು, ವಿಚ್ಛೇದಿತ ದಂಪತಿಯನ್ನು ಒಂದುಗೂಡಿಸುವ ಅವಕಾಶ ಲಭಿಸಿದ್ದು ಇದೇ ಮೊದಲು. ಅವರು ಸೋಮವಾರ ವಿವಾಹ ನೋಂದಣಿ ಅಧಿಕಾರಿಗಳ ಮುಂದೆ ಕಾನೂನುಬದ್ಧವಾಗಿ ಮರುವಿವಾಹವಾಗಲಿದ್ದಾರೆ’ ಎಂದು ನ್ಯಾಯಾಧೀಶ ರಘುನಾಥ್‌ ತಿಳಿಸಿದರು.

‘ದಂಪತಿಯನ್ನು ಒಂದುಗೂಡಿಸಲು ಸಾಧ್ಯವಾದದ್ದು ಸಂತಸದ ಸಂಗತಿ. ಇಬ್ಬರಿಗೂ ತಮ್ಮ ತಪ್ಪಿನ ಅರಿವಾಗಿದ್ದು, ಒಟ್ಟಾಗಲು ತೀರ್ಮಾನಿಸಿದ್ದಾರೆ. ವಿಚ್ಛೇದಿತ ದಂಪತಿ ಲೋಕ ಅದಾಲತ್‌ನಲ್ಲಿ ರಾಜಿಯಾದ ಘಟನೆ ಮೈಸೂರಿನಲ್ಲಿ ನಡೆದಿರುವುದು ಇದೇ ಮೊದಲು’ ಎಂದು ನ್ಯಾಯಾಧೀಶ ವಿರೂಪಾಕ್ಷಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT