ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿರುದ್ಧ ಆರದ ವೈದ್ಯರ ಸಿಟ್ಟು

ಗೌರಿ ಹಬ್ಬವಾದ್ದರಿಂದ ತಟ್ಟದ ಮುಷ್ಕರದ ಬಿಸಿ, ಕರ್ತವ್ಯದಿಂದ ದೂರ ಉಳಿದ 224 ವೈದ್ಯರು
Last Updated 22 ಆಗಸ್ಟ್ 2020, 6:16 IST
ಅಕ್ಷರ ಗಾತ್ರ

ಮೈಸೂರು: ನಂಜನಗೂಡು ಪ್ರಭಾರ ತಾಲ್ಲೂಕು ವೈದ್ಯಾಧಿಕಾರಿ ಡಾ.ನಾಗೇಂದ್ರ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್‌ ಕುಮಾರ್ ಮಿಶ್ರಾ ಅವರ ಅಮಾನತಿಗೆ ಆಗ್ರಹಿಸಿ ಕರೆ ನೀಡಲಾಗಿರುವ ಮುಷ್ಕರ ಜಿಲ್ಲೆಯಲ್ಲಿ ಶುಕ್ರವಾರ ಯಶಸ್ವಿ
ಯಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ 224 ವೈದ್ಯರು ಕರ್ತವ್ಯದಿಂದ ದೂರ ಉಳಿದರು. ತಾಲ್ಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ಲಭ್ಯ ಇರಲಿಲ್ಲ. ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯರು ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು.

ಹೊರರೋಗಿ ವಿಭಾಗದಲ್ಲಿ ಸೇವೆ ಇಲ್ಲದೇ ಹೋದರೂ ಜನಸಾಮಾನ್ಯರಿಗೆ ಹೆಚ್ಚಿನ ತೊಂದರೆಯಾಗಲಿಲ್ಲ. ಗೌರಿ ಹಬ್ಬವಾಗಿರುವುದರಿಂದ ಸಹಜ ವಾಗಿಯೇ ಜನರು ಸಣ್ಣಪುಟ್ಟ ಅನಾರೋಗ್ಯಗಳಿಗಾಗಿ ಆಸ್ಪ‍ತ್ರೆಗೆ ಬಂದಿರಲಿಲ್ಲ.

ಮಾತುಕತೆಗೆ ಮುಂದಾಗದ ಸಚಿವ: ಸಚಿವ ಎಸ್.ಟಿ.ಸೋಮಶೇಖರ್ ಅವರು ಶುಕ್ರವಾರ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಬಂದು ನಾಗೇಂದ್ರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರಾದರೂ, ಸಂಘದ ಪ್ರತಿನಿಧಿಗಳ ಜತೆ ಮಾತುಕತೆಗೆ ಮುಂದಾಗಲಿಲ್ಲ.

ಶವಾಗಾರದ ಮುಂದೆ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಶ್ರೀನಿವಾಸ್, ಜಿಲ್ಲಾ ಘಟಕದ ಅಧ್ಯಕ್ಷ ಡಾ.ದೇವಿ ಆನಂದ್ ಸೇರಿದಂತೆ ಹಲವು ಮುಖಂಡರು ಇದ್ದರೂ, ಮಾತುಕತೆಗೆ ಆಹ್ವಾನಿಸಲಿಲ್ಲ. ಸಚಿವ ಡಾ.ಕೆ.ಸುಧಾಕರ್ ಸಹ ಗುರುವಾರ ರಾತ್ರಿ ನಾಗೇಂದ್ರ ಅವರ ಕುಟುಂಬದ ಸದಸ್ಯರೊಂದಿಗೆ ಮಾತ್ರ ಮಾತುಕತೆ ನಡೆಸಿ ತೆರಳಿದ್ದರು. ಜತೆಗೆ, ಅಂತ್ಯಕ್ರಿಯೆಗೆ ಯಾವೊಬ್ಬ ಜನಪ್ರತಿನಿಧಿಯೂ ಬಾರದೇ ಇರುವುದು ಸಹ ವೈದ್ಯರ ಕೋಪವನ್ನು ಇಮ್ಮಡಿಗೊಳಿಸಿತ್ತು.

ನಾಳೆ ಸಭೆ: ಸಂಘದ ಪದಾಧಿಕಾರಿಗಳ ಸಭೆಯು ಆ.23ರಂದು ನಡೆಯುವ ಸಾಧ್ಯತೆ ಇದ್ದು, ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಾ.ಶ್ರೀನಿವಾಸ್
ಈಗಾಗಲೇ ತಿಳಿಸಿದ್ದಾರೆ. ಹೀಗಾಗಿ, ಸೋಮವಾರದಿಂದ ಇಡೀ ರಾಜ್ಯದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಘಟಕಗಳು, ಆರೋಗ್ಯ ಕೇಂದ್ರಗಳಲ್ಲಿ
ವೈದ್ಯಕೀಯ ಸೇವೆ ವ್ಯತ್ಯಯವಾಗುವ ಸಂಭವ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT