ಶನಿವಾರ, ನವೆಂಬರ್ 28, 2020
25 °C
ಹೈಕೋರ್ಟ್‌ ಮೆಟ್ಟಿಲೇರಿದವರು ಪ್ರಕರಣ ಹಿಂಪಡೆಯಲು ಸಚಿವರ ಮನವಿ

ಗ್ರಾಮೀಣ ಸೇವೆ: ಪ್ರೋತ್ಸಾಹ ಧನಕ್ಕೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಚಿವ ಡಾ.ಕೆ.ಸುಧಾಕರ್

ಮೈಸೂರು: ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಮುಂದಾಗುವ ವೈದ್ಯರಿಗೆ ವೇತನದ ಜೊತೆ ಪ್ರೋತ್ಸಾಹಧನ ನೀಡಲು ಹಾಗೂ ಬಡ್ತಿ ಪರಿಗಣನೆಗೆ ಸೇವಾವಧಿಯನ್ನು ಕಡಿಮೆ ಮಾಡುವ ಸಂಬಂಧ ನಿಯಮ ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ 11ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಬಡ್ತಿ ಪಡೆಯಲು ಆರು ವರ್ಷ ಕಾಯಬೇಕು ಎಂದಾದರೆ, ಹಳ್ಳಿಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಮೂರು ವರ್ಷಗಳ ಸೇವಾವಧಿ ಸಾಕು’ ಎಂದರು.

ಗ್ರಾಮಾಂತರ ಪ್ರದೇಶಗಳಲ್ಲಿ ಕೆಲಸ ಮಾಡಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಶೇ 70ರಷ್ಟು ವೈದ್ಯಕೀಯ ಸಿಬ್ಬಂದಿ ನಗರ ಪ್ರದೇಶದಲ್ಲಿ ಕೆಲಸ ಮಾಡಲು ಬಯಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

‘ಸ್ನಾತಕೋತ್ತರ ಪದವಿ ಪೂರೈಸಿದ ವೈದ್ಯ ವಿದ್ಯಾರ್ಥಿಗಳು ಗ್ರಾಮಾಂತರ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 2,500 ಮಂದಿ ವೈದ್ಯಕೀಯ ವ್ಯಾಸಂಗ ಮುಗಿಸುವ ಹಂತದಲ್ಲಿದ್ದಾರೆ. ಯಾವುದೇ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರಲಿ; ಮಾನವೀಯತೆ ಹಾಗೂ ಜವಾಬ್ದಾರಿಯಿಂದ ಹಳ್ಳಿಗಳಲ್ಲಿ ಒಂದು ವರ್ಷವಾದರೂ ಕಾರ್ಯನಿರ್ವಹಿಸಬೇಕು’ ಎಂದು ಕೋರಿದರು.

‘ಕೆಲವರು ಈ ನಿಯಮ ವಿರೋಧಿಸಿ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಂಥವರು ಪ್ರಕರಣ ಹಿಂಪಡೆದು ಹಳ್ಳಿಗಳಲ್ಲಿ ಸೇವೆ ಸಲ್ಲಿಸಬೇಕು’ ಎಂದು ಮನವಿ ಮಾಡಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಭರ್ತಿಗೆ ಮುಂಬರುವ ದಿನಗಳಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಹಾಗೂ ಚಿಕ್ಕಮಗಳೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಆರಂಭಿಸಲಾಗುತ್ತಿದೆ ಎಂದರು.

‘ಹಸಿರು ಪಟಾಕಿ ಎಂದರೇನು ಗೊತ್ತಿಲ್ಲ’:

‘ಹಸಿರು ಪಟಾಕಿ ಎಂದರೇನು ಎಂಬುದು ನನಗೂ ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಂಡು ಹೇಳುತ್ತೇನೆ’ ಎಂದು ಸಚಿವ ಡಾ.ಕೆ.ಸುಧಾಕರ್‌  ಹೇಳಿದರು.

‘ದೀಪಾವಳಿಯಲ್ಲಿ ‌ಪಟಾಕಿ‌ ನಿಷೇಧ ವಿಚಾರವಾಗಿ ನಮ್ಮ ಇಲಾಖೆಯಿಂದ ತಜ್ಞರು ಮಾರ್ಗಸೂಚಿ ಸಿದ್ಧಪಡಿಸಿದ್ದರು. ಅದನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಸಲ್ಲಿಸಿದ್ದೆ. ಆ ನಂತರ ಅವರು ಹಸಿರು ಪಟಾಕಿ ಸಿಡಿಸಲು ಮಾತ್ರ ಅನುಮತಿ ನೀಡಿದ್ದಾರೆ. ‌ಪಟಾಕಿ ಸಿಡಿಸುವ ಸಮಯ ಕೂಡ ನಿಗದಿ ಮಾಡಿದ್ದಾರೆ’ ಎಂದು ತಿಳಿಸಿದರು.

‘ದಂಡ ವಿಧಿಸಲು ಹೇಳುತ್ತೇನೆ’:

ಮಾಸ್ಕ್ ಧರಿಸದೆ ಇದ್ದರೆ ಜನಸಾಮಾನ್ಯರಿಗೆ ದಂಡ ವಿಧಿಸುತ್ತಿದ್ದು, ರಾಜಕೀಯ ಸಮಾರಂಭಗಳಲ್ಲಿ ಜನಪ್ರತಿನಿಧಿಗಳು ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಚಾರದಲ್ಲಿ ನಾನೂ ಅಸಹಾಯಕ. ಮಾರ್ಗಸೂಚಿ ಪಾಲಿಸುವಂತೆ ಮನದಟ್ಟು ಮಾಡಲು ಆದಷ್ಟು ಪ್ರಯತ್ನ ಹಾಕಿದ್ದೇನೆ. ರಾಜಕೀಯ ಪಕ್ಷಗಳಿಗೆ ಸಾಮೂಹಿಕ ಹೊಣೆಗಾರಿಕೆ ಇರಬೇಕಾಗುತ್ತದೆ. ನಾಗರಿಕ ಪ್ರಜ್ಞೆ ಇರಬೇಕು. ದಂಡ ವಿಧಿಸಲು ಅಧಿಕಾರಿಗಳಿಗೆ ಹೇಳುತ್ತೇನೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು