ಶುಕ್ರವಾರ, ಏಪ್ರಿಲ್ 16, 2021
23 °C
ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಕೊಡಮಾಡುವ ಪ್ರಶಸ್ತಿ

ಡಾ.ರಾಗೌ, ವೈ.ಸಿ.ಭಾನುಮತಿಗೆ ಹಲಸಂಗಿ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಇಲ್ಲಿನ ವಿಜಯನಗರದ 1ನೇ ಹಂತದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಕವಿ, ಜಾನಪದ ವಿದ್ವಾಂಸ ಡಾ.ರಾಗೌ ಹಾಗೂ ಸಂಶೋಧಕಿ ಡಾ.ವೈ.ಸಿ.ಭಾನುಮತಿ ಅವರಿಗೆ 2019–20ನೇ ಸಾಲಿನ ‘ಹಲಸಂಗಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪ್ರಶಸ್ತಿಯು ತಲಾ ₹50 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಮಾಡಿದ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಮಾತನಾಡಿ, ‘ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರದ ಸಾಧಕರನ್ನು ಗುರುತಿಸುವುದು, ಪೋಷಿಸುವುದು ಹಾಗೂ ಅಭಿನಂದಿಸುವುದು ಪ್ರಜ್ಞಾವಂತ ಸಮಾಜದ ಪದ್ಧತಿಯಾಗಿದೆ. ಮೈಸೂರಿನ ಅರಸರು ಕಲಾಪೋಷಕರಾಗಿದ್ದರು. ಅದೇ ರೀತಿಯಲ್ಲಿ ಸಂಘ–ಸಂಸ್ಥೆಗಳು ಸಹ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯವಾದದ್ದು’ ಎಂದರು.

‘ರಾಗೌ ಅವರು ಶ್ರೇಷ್ಠ ಸಂಶೋಧಕರು. ಮೈಸೂರು ವಿಶ್ವವಿದ್ಯಾಲಯಕ್ಕೆ ಕೀರ್ತಿಯನ್ನು ತಂದುಕೊಟ್ಟವರು. ಕಾವ್ಯ, ಜಾನಪದ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅದೇ ರೀತಿಯಲ್ಲಿ ವೈ.ಸಿ.ಭಾನುಮತಿ ಅವರು ಕಠಿಣ ಪರಿಶ್ರಮವನ್ನು ಬೇಡುವ ಗ್ರಂಥ ಸಂಪಾದನೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು 60 ಕೃತಿಗಳನ್ನು ಹೊರತಂದಿದ್ದಾರೆ’ ಎಂದು ಶ್ಲಾಘಿಸಿದರು.

ಯಾವುದೇ ವಿಶ್ವವಿದ್ಯಾಲಯಕ್ಕೆ ಕೀರ್ತಿ ಬರುವುದು ಸಂಶೋಧನೆಗಳಿಂದ. ಮೈಸೂರು ವಿಶ್ವವಿದ್ಯಾಲಯವು ಸಂಶೋಧನೆಗೆ ಒತ್ತು ನೀಡುತ್ತಿದೆ. ಹೀಗಾಗಿ, ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಉತ್ತಮ ಸಂಶೋಧನಾ ಕಾರ್ಯಗಳಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸಂಚಾಲಕ ಪ್ರೊ.ದೊಡ್ಡಣ್ಣ ಭಜಂತ್ರಿ ಮಾತನಾಡಿ, ‘ಹಲಸಂಗಿ ಸಣ್ಣ ಗ್ರಾಮ. ಮೂಲಸೌಕರ್ಯಗಳ ವಂಚಿತ ಗ್ರಾಮ. ಮಧುರಚೆನ್ನರು ಗೆಳೆಯರ ಬಳಗವನ್ನು ಕಟ್ಟಿಕೊಂಡು ಅದ್ಭುತವಾದ ಸಾಹಿತ್ಯ ಕೃಷಿ ಮಾಡಿದ್ದರು. ಹಲಸಂಗಿ ಎಂದರೆ ಜಾನಪದ ಸಾಹಿತ್ಯ ನೆನಪಿಗೆ ಬರುತ್ತದೆ. ಅಷ್ಟರ ಮಟ್ಟಿಗೆ ಈ ಗೆಳೆಯರ ಬಳಗವು ಕೆಲಸ ಮಾಡಿದೆ’ ಎಂದರು.

‘ಹಲಸಂಗಿ ಗೆಳೆಯರ ಸಾಹಿತ್ಯವನ್ನು ಪ್ರಚುರ ಪಡಿಸುವ ಉದ್ದೇಶದಿಂದ ಈ ಪ್ರತಿಷ್ಠಾನವನ್ನು 2013ರಲ್ಲಿ ಸ್ಥಾಪಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಜೀವಮಾನ ಸಾಧನೆ ಮಾಡಿದ ಮೂವರು ಹಿರಿಯ ಸಾಹಿತಿಗಳಿಗೆ ಹಾಗೂ ಒಬ್ಬ ಯುವ ಸಾಹಿತಿಗೆ ಪ್ರಶಸ್ತಿ ನೀಡುತ್ತಾ ಬರುತ್ತಿದ್ದೇವೆ. ಪ್ರಶಸ್ತಿಗೆ ಭಾಜನರಾದವರ ಕೃತಿಗಳ ಮರುಮುದ್ರಣ ಕಾರ್ಯವನ್ನೂ ಮಾಡುತ್ತಿದ್ದೇವೆ’ ಎಂದು ವಿವರಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಪ್ರಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಕೆ.ಎಸ್‌.ನಾಗರಾಜು,  ಡಾ.ಜಯಪ್ಪ ಹೊನ್ನಾಳಿ, ನಗರ ಘಟಕದ ಅಧ್ಯಕ್ಷ ಕೆ.ಎಸ್‌.ಶಿವರಾಂ ಇದ್ದರು.

‘ವಿದ್ವತ್‌ ಸಂಪಾದನೆಗೆ ಒಳ ಮಾರ್ಗವಿಲ್ಲ’

ಅಭಿನಂದನಾ ನುಡಿಗಳಾಡಿದ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಂಗದ ನಿರ್ದೇಶಕ ಪ್ರೊ.ನೀಲಗಿರಿ ಎಂ.ತಳವಾರ, ‘ವಿದ್ವತ್‌ ಅಥವಾ ಜ್ಞಾನ ಸಂಪಾದನೆಗೆ ಒಳ ಮಾರ್ಗಗಳಿಲ್ಲ. ಜ್ಞಾನ ಸಂಪಾದಿಸಬೇಕಾದರೆ ಬೆವರು ಸುರಿಸಲೇಬೇಕು. ನಿದ್ದೆಗೆಡಲೇ ಬೇಕು. ರಾಗೌ ಬಹುಶ್ರುತ ಪ್ರತಿಭೆ. ನೈಜ, ಸರಳ, ಬದ್ಧತೆಯಿಂದ ಕೂಡಿರುವ ವಿದ್ವಾಂಸರು. ಅವರು ಅಪರೂಪದ ಸವ್ಯಸಾಚಿ. ಅವರಲ್ಲಿ ವಿದ್ವತ್‌ ಹಾಗೂ ಸೃಜನಶೀಲ ಪ್ರತಿಭೆ ಎರಡೂ ಮೇಳೈಸಿದೆ. ಬದುಕು ಹಾಗೂ ಬರವಣಿಗೆಯಲ್ಲಿನ ಸಾಮರಸ್ಯ ಅವರ ಮುಖ್ಯ ಗುಣ. ಅವರು ಈವರೆಗೆ 17 ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಜಾನಪದ, ಸಂಶೋಧನೆ ಹಾಗೂ ಕಾವ್ಯದಲ್ಲಿ ಸಮಾನ ಸಾಧನೆ ಮಾಡಿದ್ದಾರೆ’ ಎಂದು ಬಣ್ಣಿಸಿದರು.

ಸಂಶೋಧನೆಯು ಹೆಚ್ಚು ಪರಿಶ್ರಮವನ್ನು ಬೇಡುತ್ತದೆ, ಫಲ ಮಾತ್ರ ಕಡಿಮೆ. ಹೀಗಾಗಿ, ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವವರು ಕಡಿಮೆ. ಆದರೆ, ಡಾ.ವೈ.ಸಿ.ಭಾನುಮತಿ ಅವರು ಶ್ರಮದಾಯಕವಾದ ಗ್ರಂಥಸಂಪಾದನೆ, ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆ. ನಿವೃತ್ತಿ ನಂತರವೂ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.