ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಚಾಲಕರಿಗೆ ಬಿತ್ತು ದೊಡ್ಡ ಹೊಡೆತ, ಶಬರಿಮಲೆ ಯಾತ್ರಿಗಳ ಸಂಖ್ಯೆ ಕ್ಷೀಣ

Last Updated 7 ಜನವರಿ 2022, 19:30 IST
ಅಕ್ಷರ ಗಾತ್ರ

ಮೈಸೂರು: ಶಬರಿಮಲೆ ಯಾತ್ರಿಕರು ವರ್ಷದ ಆರಂಭದಲ್ಲಿ ಟ್ಯಾಕ್ಸಿ ಚಾಲಕರ ಮುಖದಲ್ಲಿ ಮಂದಹಾಸ ತರುತ್ತಿದ್ದರು. ಆದರೆ, ಈಗ ಹೆಚ್ಚುತ್ತಿರುವ ಕೋವಿಡ್‌ನಿಂದ ಯಾತ್ರಿಕರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದ್ದು, ಟ್ಯಾಕ್ಸಿ ಚಾಲಕರು, ಮಾಲೀಕರು ನಿರಾಶರಾಗಿದ್ದಾರೆ.

ಕೆಲ ತಿಂಗಳುಗಳಿಂದ ಪ್ರವಾಸೋದ್ಯಮ ಚುರುಕು ಪಡೆದಿದ್ದರಿಂದ ಶಬರಿಮಲೆ ಯಾತ್ರಿಕರ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ ಎಂದು ವಾಹನ ಮಾಲೀಕರು ನಿರೀಕ್ಷಿಸಿದ್ದರು. ಆದರೆ ವಾರಾಂತ್ಯ ಕರ್ಫ್ಯೂ ಘೋಷಣೆಯ ನಂತರ ಎಲ್ಲ ನಿರೀಕ್ಷೆಗಳೂ ಹುಸಿಯಾಗಿವೆ.

ಬಹಳಷ್ಟು ಚಾಲಕರು ಹಾಗೂ ವಾಹನಗಳ ಮಾಲೀಕರಿಗೆ ದಸರೆ ಬಿಟ್ಟರೆ ಮಕರ ಸಂಕ್ರಾಂತಿಯಲ್ಲೇ ಹೆಚ್ಚಿನ ಬುಕ್ಕಿಂಗ್‌ಗಳು ಆಗುತ್ತಿದ್ದವು. ಜಿಲ್ಲೆಯಿಂದ ಶಬರಮಲೆ ಯಾತ್ರೆಗೆ ಹೊರಡುವವರ ಸಂಖ್ಯೆ ಹೆಚ್ಚಿತ್ತು. ಒಂದೊಂದು ವಾಹನವೂ ಕನಿಷ್ಠ ಎಂದರೂ 5ರಿಂದ 6 ಟ್ರಿಪ್‌ಗಳಲ್ಲಿ ಶಬರಿಮಲೆಗೆ ಹೊರಡುತ್ತಿದ್ದತ್ತು. ಆದರೆ, ಈಗ ಒಂದೂ ಟ್ರಿಪ್‌ ಸಹ ನಡೆದಿಲ್ಲ.

ಸಂಕ್ರಾಂತಿಯಂದು ಮಕರ ಜ್ಯೋತಿಯ ದರ್ಶನ, ಜ. 17ರಂದು ಪಡಿಪೂಜೆ ಸೇರಿದಂತೆ ಶಬರಿಮಲೆಯಲ್ಲಿ ನಡೆಯುತ್ತಿದ್ದ ಹಲವು ಬಗೆಯ ಧಾರ್ಮಿಕ ಉತ್ಸವಗಳಲ್ಲಿ ಭಕ್ತರು ಭಾಗಿಯಾಗುತ್ತಿದ್ದರು. ಈ ನೆಪದಲ್ಲಿ ತಮಿಳುನಾಡಿನ ತೀರ್ಥಕ್ಷೇತ್ರಗಳ ಪ್ರವಾಸವೂ ನಡೆಯುತ್ತಿತ್ತು. ಆದರೆ, ಈ ಬಾರಿ ಒಂದು ವಾಹನವೂ ಅತ್ತ ಪಯಣಿಸುವುದು ಅನುಮಾನ ಎನಿಸಿದೆ.

ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಮಗಳಲ್ಲಿ ಚೀಟಿ ಹಾಕಿಕೊಂಡು ಪ್ರವಾಸಕ್ಕೆ ಹೊರಡುತ್ತಿದ್ದ ಯುವಕರು ಸೇರಿದಂತೆ ಸಾಕಷ್ಟು ಮಂದಿ ಶಿರಡಿ, ತಮಿಳುನಾಡು, ಕರ್ನಾಟಕದ ವಿವಿಧ ಪ್ರವಾಸಿ ಕ್ಷೇತ್ರಗಳ ಪ್ರವಾಸಕ್ಕಾಗಿ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದರು. ಆದರೆ, ಈಗ ಅವರೆಲ್ಲ ತಮ್ಮ ಬುಕ್ಕಿಂಗ್‌ಗಳನ್ನು ರದ್ದುಪಡಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೆಕ್ಸುರಿ ಟ್ಯಾಕ್ಸಿ ಚಾಲಕರ ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷ ನಾಗರಾಜು, ‘ಕೋವಿಡ್ ನಿಯಂತ್ರಣದಲ್ಲಿರುವುದರಿಂದ ಈ ಬಾರಿ ಶಬರಿಮಲೆಗೆ ಹೆಚ್ಚಿನ ಮಂದಿ ಪ್ರವಾಸ ಹೊರಡುತ್ತಾರೆ ಎಂಬ ನಿರೀಕ್ಷೆಯೂ ಇತ್ತು. ಈಗ ಒಬ್ಬರೂ ಪ್ರವಾಸಕ್ಕೆ ಹೊರಡಲು ತಯಾರಿಲ್ಲ. ನಮ್ಮ ಪಾಡು ಅಯೋಮಯವಾಗಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬುಕ್ಕಿಂಗ್‌ ರದ್ದು; ಹಣ ಪಾವತಿಸಲು ಪರದಾಟ

ವಾರಾಂತ್ಯ ಕರ್ಫ್ಯೂ ಘೋಷಣೆಯಾಗುತ್ತಿದ್ದಂತೆ ಮುಂಗಡ ಬುಕ್ಕಿಂಗ್‌ಗಳೆಲ್ಲವೂ ರದ್ದಾಗಿರುವುದರಿಂದ ಮುಂಗಡ ಹಣವನ್ನು ವಾಪಸ್ ನೀಡಲು ಚಾಲಕರು ಪರದಾಡುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಷೆನ್ (ಕೆಟಿಡಿಒ) ರಾಜ್ಯ ಘಟಕದ ಅಧ್ಯಕ್ಷ ರಮೇಶ್‌ ಕುಂದಾಪುರ, ‘ತಿಂಗಳಿಗೂ ಮುಂಚೆಯೇ ಬುಕ್ಕಿಂಗ್ ಮಾಡಿದ್ದ ಗ್ರಾಹಕರು ಕರ್ಫ್ಯೂ ಘೋಷಣೆಯಾಗುತ್ತಿದ್ದಂತೆ ಬುಕ್ಕಿಂಗ್ ರದ್ದುಗೊಳಿಸಿ ಹಣ ಕೇಳುತ್ತಿದ್ದಾರೆ. ಬಹಳಷ್ಟು ಚಾಲಕರು ವಾಹನ ದುರಸ್ತಿ, ಸಾಲದ ಕಂತು ಪಾವತಿಗೆ ಬಳಸಿಕೊಂಡಿರುವುದರಿಂದ ಅಸಹಾಯಕರಾಗಿದ್ದಾರೆ. ಹಣ ಮರುಪಾವತಿಸದಿದ್ದರೆ ಗ್ರಾಹಕರನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ’ ಎಂದರು.

ವ್ಯರ್ಥವಾದ ‌ಟ್ಯಾಕ್ಸ್‌ಕಾರ್ಡ್‌

ಮೈಸೂರು ಟ್ರಾವೆಲ್ಸ್ ಅಸೋಸಿಯೇಷನ್ನಿನ ಗೌರವ ಅಧ್ಯಕ್ಷ ಬಿ.ಎಸ್.ಪ್ರಶಾಂತ್‍ ‍ಪ್ರತಿಕ್ರಿಯಿಸಿ, ‘ಕೋವಿಡ್‌ ಬಂದ ಬಳಿಕ 12ರಿಂದ 18 ಸೀಟ್‌ ಸಾಮರ್ಥ್ಯದ ದೊಡ್ಡ ಪ್ರವಾಸಿ ವಾಹನಗಳ ಮಾಲೀಕರು ತಮ್ಮ ಟ್ಯಾಕ್ಸ್‌ಕಾರ್ಡ್‌ಗಳನ್ನು ಆರ್‌ಟಿಒಗೆ ಸೆರೆಂಡರ್ ಮಾಡಿದ್ದರು. ಕೋವಿಡ್ ಇಳಿಕೆಯಾಗುತ್ತಿದ್ದಂತೆ ತೆರಿಗೆ ಪಾವತಿಸಿ ಟ್ಯಾಕ್ಸ್‌ಕಾರ್ಡ್‌ಗಳನ್ನು ಮರಳಿ ಪಡೆಯಲಾಯಿತು. ಈಗ ಅದೂ ವ್ಯರ್ಥವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT